ನವದೆಹಲಿ: ಭಾರತ-ಚೀನಾ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯೊಂದು ದೇಶಾದ್ಯಂತ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೀನಾಕ್ಕೆ ಸರಿಯಾದ ಪಾಠ ಕಲಿಸುವ ವಿಷಯದಲ್ಲಿ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶೇ. 73.6ರಷ್ಟು ಜನ ಹೇಳಿದ್ದಾರೆ. ಕೇವಲ ಶೇ.16.7ರಷ್ಟು ಜನ ಮಾತ್ರ ವಿರೋಧ ಪಕ್ಷಗಳ ಪರವಾಗಿ ನಿಂತಿದ್ದಾರೆ. ಶೇ.9.6ರಷ್ಟು ಮಂದಿ ಚೀನಾಕ್ಕೆ ತಕ್ಕ ಉತ್ತರ ನೀಡುವುದು ಈ ಸಂದರ್ಭದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿವೋಟರ್ ಸಂಸ್ಥೆ ಈ ಸಮೀಕ್ಷೆ ನಡೆಸಿದೆ.
ದೇಶದ ರಕ್ಷಣೆ ವಿಷಯದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ಸಾಮರ್ಥ್ಯದ ಕುರಿತು ಕೇಳಿದಾಗ, ಶೇ.61ರಷ್ಟು ಜನ ಮೋದಿ ಪರವಾಗಿ ನಿಂತಿದ್ದಾರೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಕುರಿತ ಪ್ರಶ್ನೆಗೆ, ಜನರು ಚೀನಾ ವಸ್ತು ಖರೀ ದಿಸುವುದನ್ನು ಮುಂದುವರಿಸುತ್ತಾರೆ? ಎಂದು ಶೇ.31ರಷ್ಟು ಮಂದಿ ಹೇಳಿದ್ದಾರೆ. ಜನರು ಇನ್ನು ಮುಂದೆ ಚೀನಾ ವಸ್ತು ಖರೀದಿಸುವುದಿಲ್ಲ ಎಂಬುದಾಗಿ ಶೇಕಡಾ 69ರಷ್ಟು ಜನ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತಕ್ಕೆ ಚೀನಾ ಹೆಚ್ಚು ಅಪಾಯಕಾರಿ ದೇಶ ಎಂದು ಶೇ.68ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಗ್ಯಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಪ್ರತಿಯಾಗಿ ಭಾರತ ಸರಿಯಾದ ಪ್ರತ್ಯುತ್ತರ ನೀಡಿದೆಯೇ ಎಂಬ ಪ್ರಶ್ನೆಗೆ ಶೇ.60ರಷ್ಟು ಜನ ಇಲ್ಲ ಎಂದು ಉತ್ತರಿಸಿದ್ದಾರೆ. ಶೇ.40ರಷ್ಟು ಜನ ಮಾತ್ರ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದಿದ್ದಾರೆ.