ವ್ಯಕ್ತಿಗೆ ಕೊರೊನಾ ದೃಢಪಡುತ್ತಿದ್ದಂತೆ  ಮನೆ ಖಾಲಿ ಮಾಡುತ್ತಿರುವ ನೆರೆಹೊರೆ ನಿವಾಸಿಗಳು
ಮೈಸೂರು

ವ್ಯಕ್ತಿಗೆ ಕೊರೊನಾ ದೃಢಪಡುತ್ತಿದ್ದಂತೆ ಮನೆ ಖಾಲಿ ಮಾಡುತ್ತಿರುವ ನೆರೆಹೊರೆ ನಿವಾಸಿಗಳು

June 24, 2020

ಮೈಸೂರು, ಜೂ. 23(ಆರ್‍ಕೆ)-ಮೈಸೂರಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೀಡಾಗಿದ್ದಾರೆ. ಇಂದು ಆ ಏರಿಯಾದಲ್ಲಿ, ಈ ರಸ್ತೆಯವರಿಗೆ ಸೋಂಕು ದೃಢಪಟ್ಟಿದೆ. ಅವರು ಅಲ್ಲಿಂದ ಬಂದಿದ್ದು, ಇಲ್ಲೆಲ್ಲಾ ಓಡಾಡಿದ್ದಾ ರಂತೆ. ಐದಾರು ರಸ್ತೆಯನ್ನು ಸೀಲ್‍ಡೌನ್ ಮಾಡಿದ್ದಾರಂತೆ. ಹೀಗೆ ಎಲ್ಲಿ ನೋಡಿದರೂ ಕೊರೊನಾ ಬಗ್ಗೆಯೇ ಚರ್ಚೆ. ಇನ್ನು ಸೋಂಕಿತರ ನೆರೆಹೊರೆಯವರ ತಳಮಳ ಹೇಳತೀರದು. ಕೊರೊನಾ ಸೋಂಕಿತನ ನಿವಾಸದ ರಸ್ತೆ ಮಾರ್ಗ, ಸುತ್ತಮುತ್ತಲ ಪ್ರದೇಶವನ್ನು ಸುರಕ್ಷತೆ ದೃಷ್ಟಿಯಿಂದ ಸೀಲ್‍ಡೌನ್ ಮಾಡ ಲಾಗುತ್ತದೆ. ಹಾಗಾಗಿ ತಾವಿರುವ ರಸ್ತೆ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ ಕೊರೊನಾ ದೃಢಪಡುತ್ತಿದ್ದಂತೆ ಮನೆ ಖಾಲಿ ಮಾಡಿ, ಬೇರೆಡೆಗೆ ಹೋಗುತ್ತಿದ್ದಾರೆಂದು ತಿಳಿದುಬಂದಿದೆ.

ಹೋಂ ಕ್ವಾರಂಟೈನ್‍ನಲ್ಲಿರುವವರ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿಯುತ್ತಿದ್ದಂತೆ ಆ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಆಂಬುಲೆನ್ಸ್, ಪೊಲೀಸ್ ವಾಹನಗಳು ಧಾವಿಸುವುದರಿಂದ ನೆರೆಹೊರೆಯರು ಮಾತ್ರವಲ್ಲದೆ ಆ ರಸ್ತೆ ನಿವಾಸಿಗಳು ಆತಂಕಗೊಂಡು ಮನೆಗೆ ಬೀಗ ಜಡಿದು ಸ್ಥಳದಿಂದ ಕಾಲ್ಕೀಳುತ್ತಿದ್ದಾರೆ. ಸೀಲ್‍ಡೌನ್ ಮಾಡಿ 28 ದಿನ ಕಂಟೇನ್ಮೆಂಟ್ ವಲಯ ಎಂದು ಘೋಷಿಸಿ ಹೊರಗೆ ಹೋಗದಂತೆ ನಿರ್ಬಂಧ ಹೇರಲಾಗುತ್ತದೆ ಎಂದು ಯೋಚಿಸಿ, ಬ್ಯಾರಿಕೇಡ್ ಹಾಕುವ ಮುನ್ನವೇ ಜಾಗ ಖಾಲಿ ಮಾಡುತ್ತಿದ್ದಾರೆ. ಪರಿಣಾಮ ಸೀಲ್ ಡೌನ್ ಆದ ರಸ್ತೆಯ ಕೇವಲ ಐದಾರು ಮನೆಗಳಲ್ಲಿ ಮಾತ್ರ ಜನರು ಇರುವುದು ಕಂಡುಬರುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿರುವ ಪ್ರದೇಶದ ಜನರು ಬೇರೆಡೆಗೆ ಹೋಗಬಾರದು ಎಂಬ ಉದ್ದೇಶದಿಂದ ಸೀಲ್‍ಡೌನ್ ಮಾಡಲಾಗುತ್ತದೆ. ಆದರೆ ರಸ್ತೆ ಬಂದ್ ಮಾಡುವ ಮೊದಲೇ ಮನೆಗೆ ಬೀಗ ಹಾಕಿ ಬೇರೆಡೆಗೆ ಹೋಗುತ್ತಿದ್ದಾರೆ. ತಕ್ಷಣಕ್ಕೆ ಎಲ್ಲರನ್ನೂ ತಡೆಯಲು ಸಾಧ್ಯವಿಲ್ಲ. ಅವರೆಲ್ಲಾ ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳಬಹುದು. ಇಲ್ಲವೇ ಬೇರೆ ಊರಿಗೂ ತೆರಳಬಹುದು. ಇವರಲ್ಲಿ ಯಾರಿಗಾದರೂ ಸೋಂಕಿದ್ದರೆ ಅವರು ಹೋದ ಪ್ರದೇಶದಲ್ಲೂ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಮುದಾಯದ ಹಿತದೃಷ್ಟಿಯಿಂದ ಸೋಂಕಿತನಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗುತ್ತದೆ. ಆ ವಲಯದ ನಿವಾಸಿಗಳಿಗೆ ಎಲ್ಲಾ ಅಗತ್ಯ ಸೇವೆಯನ್ನು ಕಲ್ಪಿಸಲಾಗುತ್ತದೆ. ಅಲ್ಲಿ ರ್ಯಾಂಡಮ್ ಟೆಸ್ಟ್ ನಡೆಸುವುದರಿಂದ ತಮ್ಮ ಆರೋಗ್ಯದ ಬಗ್ಗೆಯೂ ಖಚಿತತೆ ಸಿಗುತ್ತದೆ. ಸಾಮಾಜಿಕ ಜವಾಬ್ದಾರಿ ಮರೆತು ಯಾರೂ ಕೂಡ ಕಂಟೇ ನ್ಮೆಂಟ್ ವಲಯದಿಂದ ಹೊರ ಹೋಗಬಾರದು. ಹೀಗೆ ಏಕಾಏಕಿ ಕುಟುಂಬ ಸಮೇತ ಬರುವವರನ್ನು ಅವರ ಸಂಬಂಧಿಕ ರಾಗಲೀ, ಸ್ನೇಹಿತರಾಗಲೀ ತಮ್ಮ ಮನೆಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬಾರದೆಂದು ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ಪ್ರಕರಣಗಳ ಸಂಖ್ಯೆ ಶತಕ ಸಮೀ ಪಿಸಿತ್ತಾದರೂ ಕೆಲವೇ ದಿನಗಳಲ್ಲಿ ಎಲ್ಲಾ ಸೋಂಕಿತರು ಗುಣ ಮುಖರಾಗಿದ್ದರು. ಶಂಕಿತರನ್ನೆಲ್ಲಾ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರಿಂದ ಸೋಂಕು ಹರಡಲಿಲ್ಲ. ಆದರೆ ಎರಡನೇ ಹಂತದ ಪರಿಸ್ಥಿತಿಯೇ ಬೇರೆ. ಲಾಕ್‍ಡೌನ್ ಸಡಿಲಿಕೆಯಿಂದ ವಿದೇಶ, ಹೊರರಾಜ್ಯಗಳಿಂದ ಸಾಕಷ್ಟು ಮಂದಿ ಮೈಸೂರಿಗೆ ಬಂದಿ ದ್ದಾರೆ. ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲಾ ಚಟುವಟಿಕೆ ಎಂದಿನಂತಿರುವುದರಿಂದ ಜನ ಸಂಚಾರವೂ ಹೆಚ್ಚಾಗಿದೆ. ಸೋಂಕಿತನ ಸಂಪರ್ಕ ಇದ್ದವರನ್ನು ಪತ್ತೆ ಹಚ್ಚು ವುದೇ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿ ಸ್ಥಿತಿಯಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು. ಜೊತೆಗೆ ಸೋಂಕು ಹರಡದಂತೆ ಕೈಗೊಳ್ಳುವ ಕ್ರಮಗಳನ್ನು ಅನುಸರಿ ಸುವುದು ಅನಿವಾರ್ಯವಾಗಿದೆ.

Translate »