ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನ
ಮೈಸೂರು

ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನ

August 5, 2020

ಬೆಂಗಳೂರು, ಆ.4- ತುಮಕೂರು ಜಿಲ್ಲೆ, ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನೇನು ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಿದ್ದಾಗಲೇ ಅವರು ನಿಧನರಾಗಿದ್ದಾರೆ. ಅವರಿಗೆ ನ್ಯುಮೋನಿಯಾ ಸಹ ಬಾಧಿಸುತ್ತಿತ್ತು ಎಂದು ಹೇಳಲಾಗಿದೆ. ಶಿರಾದಿಂದ ನಾಲ್ಕು ಬಾರಿ ಜೆಡಿಎಸ್ ಶಾಸಕರಾಗಿ ಸತ್ಯನಾರಾಯಣ ಆಯ್ಕೆಯಾಗಿದ್ದರು. ಎರಡು ಬಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮಂಗಳವಾರ ಬೆಳಗ್ಗೆ ಇವರು ನಿಧನ ಹೊಂದಿದ್ದಾರೆಂಬ ಸುದ್ದಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೂ ಸೇರಿದಂತೆ ಹಲವು ಶಾಸಕರು, ಮುಖಂಡರು ಸಂತಾಪ ಸೂಚಕ ಸಂದೇಶವನ್ನು ಹೊರಡಿಸಿದ್ದರು. ಆದರೆ ಆಸ್ಪತ್ರೆ ಮೂಲಗಳು ಸತ್ಯನಾರಾಯಣ ಅವರು ನಿಧನ ಹೊಂದಿದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸದ ಹಿನ್ನೆಲೆಯಲ್ಲಿ ಹಾಗೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ವರದಿ ಪ್ರಕಟಿಸಿದ್ದರಿಂದ ಸಂತಾಪ ಸೂಚಕ ಸಂದೇಶವನ್ನು ಬಹುತೇಕರು ವಾಪಸ್ ಪಡೆದಿದ್ದರು.

ಸತ್ಯನಾರಾಯಣ ನಿಧನಕ್ಕೆ ಜಿಟಿಡಿ ಕಂಬನಿ
ಮೈಸೂರು, ಆ.4- ಜೆಡಿಎಸ್ ಪಕ್ಷದ ಹಿರಿಯ ನಾಯಕ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಬಿ.ಸತ್ಯನಾರಾಯಣ ಅವರ ನಿಧನಕ್ಕೆ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.

ಸತ್ಯನಾರಾಯಣ ನಿಧನದ ಸುದ್ದಿ ಕೇಳಿ ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದ ಶ್ರೀಯುತರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅತ್ಯಂತ ಸ್ನೇಹಪರರಾಗಿದ್ದ ಸತ್ಯನಾರಾಯಣ, ಜನಾನುರಾಗಿಯೂ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಕಲ್ಪಿಸಲಿ ಎಂದು ಜಿಟಿಡಿ ಪ್ರಾರ್ಥಿಸಿದ್ದಾರೆ.

Translate »