ಇಂದು ಶಿರಾ, ರಾಜರಾಜೇಶ್ವರಿನಗರ ಉಪ ಸಮರ
ಮೈಸೂರು

ಇಂದು ಶಿರಾ, ರಾಜರಾಜೇಶ್ವರಿನಗರ ಉಪ ಸಮರ

November 3, 2020

ಬೆಂಗಳೂರು, ನ.2(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವಕ್ಕೆ ಪ್ರತಿಷ್ಟೆಯಾಗಿರುವ ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ.

ಎರಡೂ ಕ್ಷೇತ್ರಗಳ ಫಲಿತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಪರಾಭವ ಗೊಂಡರೆ, ಯಡಿಯೂರಪ್ಪ ಅವರ ನಾಯಕತ್ವ ಬದ ಲಾವಣೆಗೆ ಪಕ್ಷದ ಶಾಸಕ ರಿಂದಲೇ ಕೂಗು ಹೇಳುವ ಸಾಧ್ಯತೆ ಇದೆ. ಈಗಾಗಲೇ ನಾಯಕತ್ವ ಬದಲಾವಣೆ ಯಾಗಲಿದೆ ಎಂದು ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾರ್ವಜನಿಕವಾಗಿ ಹೇಳಿದ್ದಾರೆ. ಅಲ್ಲದೆ, ತೆರೆಮರೆಯಲ್ಲಿ ಕೆಲವು ನಾಯಕರುಗಳು ಈ ಸಂಬಂಧ ಸಭೆ ನಡೆಸಿದ್ದಾರೆ.

ರಾಜ್ಯದಲ್ಲಿ ತಮ್ಮ ಹಿಡಿತವಿದೆ ಎಂಬುದನ್ನು ತೋರಿ ಸಲು ಮುಖ್ಯಮಂತ್ರಿಯವರು ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರಾದ ನಂತರ ಶಿವಕುಮಾರ್‍ಗೆ ಇದು ಮೊದಲ ಚುನಾವಣೆಯಾಗಿದೆ. ತಮ್ಮ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ,

ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹೊರಟಿರುವ ಶಿವಕುಮಾರ್‍ಗೆ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಹಿರಿಯ ಮುಖಂಡರನ್ನು ಜೊತೆಗೆ ಕರೆದುಕೊಂಡೇ ಎರಡೂ ಕ್ಷೇತ್ರಗಳಲ್ಲೂ ಹೋರಾಟ ನಡೆಸಿದ್ದಾರೆ. ಇದರ ಮಧ್ಯೆಯೇ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ಮಾಡಿದ್ದಾರೆ. ಯಡಿಯೂರಪ್ಪ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಉದ್ದೇಶದಿಂದ ತಮ್ಮ ಸಂಪುಟದ ಸಚಿವರಿಗೆ ಕ್ಷೇತ್ರಗಳ ಹೊಣೆಗಾರಿಕೆ ವಹಿಸಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಿದ್ದರು. ಅಷ್ಟೇ ಅಲ್ಲ, ಶಿರಾ ಕ್ಷೇತ್ರವನ್ನು ಪಕ್ಷದ ಬುಟ್ಟಿಗೆ ಹಾಕಿಕೊಳ್ಳಲು ತಮ್ಮ ಪುತ್ರ ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಪೂರ್ಣ ಹೊಣೆಗಾರಿಕೆ ಕೊಟ್ಟಿದ್ದರು. ಈ ನಡುವೆ ಎರಡೂ ಕ್ಷೇತ್ರಗಳಲ್ಲಿ ನಿನ್ನೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ರಾಜರಾಜೇಶ್ವರಿ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಿರುವ ಚುನಾವಣಾ ಆಯೋಗ, ಕೇಂದ್ರದ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚು ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ, ಮತದಾರರು ಮತ್ತು ಚುನಾವಣಾ ಸಿಬ್ಬಂದಿಗೆ ಯಾವುದೇ ರೀತಿಯ ಸೋಂಕು ತಗುಲಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್‍ನಲ್ಲಿದ್ದ ಮುನಿರತ್ನ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಆರ್.ಆರ್. ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ, ಇನ್ನು ಶಿರಾವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್‍ನ ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ಉಪಚುನಾವಣೆ ನಡೆಯುತ್ತಿದೆ.

ಕ್ಷೇತ್ರದ ಹೊರಗಿನವರ ವಿರುದ್ಧ ಕ್ರಮ
ಬೆಂಗಳೂರು, ನ.2-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತಯುತವಾಗಿ ನಡೆದಿದೆ. ನ.3ರಂದು ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದ್ದು, ಭದ್ರತೆಗಾಗಿ 30 ತಂಡಗಳನ್ನು ನೇಮಿಸಲಾಗಿದೆ. ಇಂದು ಪ್ರಚಾ ರದ ಕೊನೆಯ ದಿನವಾಗಿದ್ದರಿಂದ ಬಿಗಿ ಪೆÇಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು. ಕ್ಷೇತ್ರದಲ್ಲಿ ಬಿಗಿ ಭದ್ರತೆಗಾಗಿ 2,500 ಜನ ಪೆÇಲೀಸರನ್ನು, 112 ಮೊಬೈಲ್ ಸ್ಕ್ವಾಡ್‍ಗಳನ್ನು ನಿಯೋಜನೆಗೊಳಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ 32 ಹೊಯ್ಸಳ, 91 ಚೀತಾ ವಾಹನಗಳು ಗಸ್ತು ತಿರುಗಲಿವೆ. ಈಗಾಗಲೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 678 ಮತಗಟ್ಟೆ ಗಳಿದ್ದು, ಈ ಪೈಕಿ 82 ಸೂಕ್ಷ್ಮ ಮತಗಟ್ಟೆಗಳಿವೆ. ಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ಭದ್ರತೆಗಾಗಿ 8 ಎಸಿಪಿ, 30 ಇನ್ಸ್ಪೆಕ್ಟರ್, 94 ಸಬ್ ಇನ್ಸ್ಪೆಕ್ಟರ್, 185 ಎಎಸ್‍ಐ, 1547 ಮುಖ್ಯ ಪೇದೆ, ಪೇದೆಗಳು ಸೇರಿ 699 ಹೋಂ ಗಾರ್ಡ್‍ಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೊಸೆ ಕುಸುಮಾ ಪರ ಡಿ.ಕೆ.ರವಿ ತಾಯಿ ಮತ ಯಾಚನೆ!
ಬೆಂಗಳೂರು,ನ.2-ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಪರ ಅವರ ಅತ್ತೆ ಗೌರಮ್ಮ ಮತಯಾಚಿಸಿದ್ದಾರೆ. ಕುಸುಮಾ ಕಾಂಗ್ರೆಸ್‍ನಿಂದ ಅಭ್ಯರ್ಥಿ ಎಂದು ತಿಳಿದ ತಕ್ಷಣ ಕುಸುಮಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ರವಿ ತಾಯಿ, ಅವಳಿಗೆ ತಮ್ಮ ಮಗನ ಹೆಸರು ಹೇಳಲು ಅರ್ಹತೆಯಿಲ್ಲ. ಈ ಚುನಾವಣೆಯಲ್ಲಿ ತಮ್ಮ ಮಗನ ಹೆಸರು ಬಳಕೆ ಮಾಡಿದರೆ ತಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು. ಬಿಜೆಪಿ ಅದನ್ನೇ ಅಸ್ತ್ರವಾಗಿ ಬಳಸಿ ಕುಸುಮಾ ಯಾವುದೇ ಕಾರಣಕ್ಕೂ ರವಿ ಹೆಸರು ಬಳಸಿಕೊಳ್ಳಬಾರದು ಎಂದು ಆಗ್ರಹಿಸಿತ್ತು. ಇದೀಗ ಬದಲಾದ ಸನ್ನಿವೇಶದಲ್ಲಿ ಸೊಸೆ ಪರ ಮತ ಯಾಚಿಸಿ, ಅಚ್ಚರಿ ಮೂಡಿಸಿದ್ದಾರೆ.

Translate »