ಜೂನ್‍ನಲ್ಲಿ ಶಿವಮೊಗ್ಗದ ತಾವರೆಕೊಪ್ಪ  ಹುಲಿ-ಸಿಂಹಧಾಮದಲ್ಲಿ ಕಾಡುಕೋಣ ಸಫಾರಿ
ಮೈಸೂರು

ಜೂನ್‍ನಲ್ಲಿ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಕಾಡುಕೋಣ ಸಫಾರಿ

April 21, 2021

ಮೈಸೂರು,ಏ.20(ಪಿಎಂ)-ಜನಪ್ರಿಯ ವನ್ಯ ಜೀವಿ ತಾಣವಾದ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮದ (ಮೃಗಾಲಯ) ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಸ್ಥಳೀಯ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪರಿಶೀಲಿಸಿದರು.

ಇದೇ ವೇಳೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಲ್.ಆರ್.ಮಹದೇವಸ್ವಾಮಿ, ಮುಂದಿನ ತಿಂಗಳ ಒಳಗೆ ಇಲ್ಲಿನ ಕಾಡುಕೋಣ ಸಫಾರಿ ಸಂಬಂಧಿತ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಜೂನ್‍ನಲ್ಲಿ ಕಾಡುಕೋಣ ಸಫಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗದ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳ ಪೈಕಿ ತಾವರೆಕೊಪ್ಪ ಪ್ರಮುಖ ಸ್ಥಾನ ಹೊಂದಿದೆ. ಇದು 600 ಎಕರೆ ವಿಸ್ತೀರ್ಣವಿದ್ದು, 35ಕ್ಕೂ ಹೆಚ್ಚು ವಿವಿಧ ಜಾತಿಯ 298 ವನ್ಯಜೀವಿಗಳ ತಾಣವಾಗಿದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನು ಮೋದಿತ ಮಾಸ್ಟರ್ ಪ್ಲಾನ್‍ನಂತೆ ಈಗಾಗಲೇ ಇಲ್ಲಿ 28 ವಿವಿಧ ಪ್ರಾಣಿ-ಪಕ್ಷಿಗಳ ಆವರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿಯಾಗಿ 32 ವಿವಿಧ ಪ್ರಾಣಿ ಪಕ್ಷಿಗಳ ಆವರಣ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳ ಲಾಗುವುದು. ರಾಜ್ಯ ಸರ್ಕಾರದ 2021ನೇ ಆಯ ವ್ಯಯದಲ್ಲಿ ಇದರ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 2009ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಲ್ಲಿ ಕುಡಿಯುವ ನೀರಿನ ಸೌಲಭ್ಯದ ಕಾಮಗಾರಿಗೆ ನಡೆಸಲಾಗಿತ್ತು. ಜೊತೆಗೆ ಇಲ್ಲಿನ ಕೆರೆಗಳಿಗೆ ತುಂಗಾ ಏತ ನೀರಾವರಿಯಿಂದ ನೀರಿನ ಸಂಪರ್ಕ ಕಲ್ಪಿಸಲು ಕಾಮಗಾರಿಗೆ ಚಾಲನೆ ನೀಡ ಲಾಗಿತ್ತು. ಇದೀಗ ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯಿಂದ ಈ ಕಾಮಗಾರಿ ಪೂರ್ಣ ಗೊಂಡಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇಲ್ಲಿ ಸುಸಜ್ಜಿತ ಆಸ್ಪತ್ರೆ, ಪ್ರಾಣಿಗಳ ಪುನರ್ವಸತಿ ಕೇಂದ್ರ ಹಾಗೂ ಕಚೇರಿ ಕಟ್ಟಡ ಕಾಮಗಾರಿ ಕೈಗೊಳ್ಳಲಾಗುವುದು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇಲ್ಲಿನ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕಲ್ಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ನವರಿಗೆ ಹಾಗೂ ಇಲ್ಲಿನ ಅಭಿವೃದ್ಧಿ ಮುತುವರ್ಜಿ ವಹಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಧನ್ಯವಾದ ಅರ್ಪಿ ಸುವುದಾಗಿ ತಿಳಿಸಿದರು. ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮುಕುಂದ, ಮೈಮುಲ್ ನಿರ್ದೇಶಕ ಅಶೋಕ್, ಆರ್‍ಎಫ್‍ಓ ನಾಗೇಶ್, ಡಿಆರ್‍ಎಫ್‍ಓಗಳಾದ ಗುರು, ಯಶೋಧರ, ಉದ್ಯಮಿಗಳಾದ ಶುಭಾಷ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

Translate »