ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ
ಮೈಸೂರು

ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

March 18, 2022

ಮೈಸೂರು, ಮಾ.17(ಎಸ್‍ಬಿಡಿ)- ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರ `ಜೇಮ್ಸ್’ ವೀಕ್ಷಿಸಿದ ನಂತರ ಅಪ್ಪು ಸಹೋದರ ಶಿವರಾಜ್‍ಕುಮಾರ್ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತರು.

ಮೈಸೂರಿನ ಜಯಲಕ್ಷ್ಮೀಪುರಂನ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ನಲ್ಲಿ ಗುರುವಾರ ಸಂಜೆ `ಜೇಮ್ಸ್’ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ `ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನಿಜಕ್ಕೂ ತುಂಬಾ ಕಷ್ಟವಾಗು ತ್ತಿದೆ…’ ಎಂದು ಹೇಳುವಷ್ಟರಲ್ಲಿ ಉಮ್ಮಳಿಸಿದ ದುಃಖ ತಡೆಯ ಲಾಗದೆ ಮಗುವಿನಂತೆ ಕಣ್ಣೀರು ಹಾಕಿದರು. ಸಮಾಧಾನ ತಂದುಕೊಂಡು ಮಾತು ಆರಂಭಿಸಿದ ಶಿವರಾಜ್‍ಕುಮಾರ್, ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಬೆಳಗ್ಗೆಯೇ ಮೊದಲು ಅಪ್ಪು ಮೊಬೈಲ್ ಕರೆ ಮಾಡುತ್ತಿದ್ದ. ಆದರೆ ಈಗ ಅದು ಸಾಧ್ಯವಿಲ್ಲ ಎಂಬ ನೋವಿದೆ. ಅವನು ಯಾವಾಗಲೂ ತುಂಬ ಉನ್ನತವಾಗಿ ಯೋಚಿಸುತ್ತಿದ್ದ. ಕನ್ನಡ ಸಿನಿಮಾ ಹಾಲಿವುಡ್ ಸಿನಿಮಾದಂತೆ ತೆಗೆಯಬೇಕು ಎನ್ನುತ್ತಿದ್ದ. `ಜೇಮ್ಸ್’ ಸಿನಿಮಾದಲ್ಲಿ ಇಡೀ ತಂಡದ ಪರಿಶ್ರಮ, ಶ್ರದ್ಧೆ ಕಾಣಿಸುತ್ತದೆ. ಅಪ್ಪು ನಟನೆ, ಆ್ಯಕ್ಷನ್ ಎಲ್ಲವೂ ಚೆನ್ನಾಗಿದೆ. ಅವನು ಚಿಕ್ಕವಯಸ್ಸಿನಿಂದಲೇ ಎಲ್ಲರಿಗೂ ಹತ್ತಿರವಾಗಿದ್ದ. ನಟನಾಗಿ ಮಾತ್ರವಲ್ಲ ಸ್ವಚ್ಛ ಹೃದಯ, ಮನಸ್ಸುಳ್ಳ ಒಳ್ಳೆಯ ಮನುಷ್ಯನಾಗಿರುವುದರಿಂದ ಎಲ್ಲರೂ ಮೆಚ್ಚಿದ್ದಾರೆ ಎಂದರು. ಸಿನಿಮಾಗೆ ಇಷ್ಟೊಂದು ದೊಡ್ಡ ಸ್ವಾಗತ ಸಿಕ್ಕಿರುವುದು ಖುಷಿಯ ವಿಚಾರ. ಆದರೆ ಅಪ್ಪು ಇಲ್ಲದ ನಷ್ಟವನ್ನು ಜೀರ್ಣಿಸಿಕೊಳ್ಳು ವುದು ಹೇಗೆ? ಕುಟುಂಬದವರಿಗೆ, ಅಪ್ಪು ಜೊತೆಯಲ್ಲಿ ಕೆಲಸ ಮಾಡಿದವರಿಗೆ, ಅಭಿಮಾನಿ ಗಳಿಗೆ ಎಷ್ಟೊಂದು ದುಃಖ ಆಗಿರಬೇಕು. ನಮಗೆ ಅಪ್ಪಾಜಿ, ಅಮ್ಮಾ ಹಾಗೂ ಅಪ್ಪು ಹೆಸರು ಉಳಿಸಿಕೊಂಡು ಹೋಗುವ ಶಕ್ತಿ ಕೊಡಲಿ ಎಂದು ಭಗವಂತನನ್ನು ಪ್ರಾರ್ಥಿಸಬೇಕಷ್ಟೇ. ಅಭಿಮಾನಿಗಳು, ಸಿನಿಮಾ ರಂಗ, ಮಾಧ್ಯಮದವರು ಹೀಗೆ ನಮ್ಮ ಕುಟುಂಬಕ್ಕೆ ನೈತಿಕ ವಾಗಿ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಆಭಾರಿಗಳಾಗಿದ್ದೇವೆ ಎಂದು ಹೇಳಿದರು.

ಶಬ್ದವೇದಿ ಸಿನಿಮಾವೂ ಮಾದಕವಸ್ತುಗಳಿಗೆ ಸಂಬಂಧಿಸಿತ್ತು. ಜೇಮ್ಸ್ ಸಿನಿಮಾ ಸಹ ಮಾದಕದ್ರವ್ಯಕ್ಕೆ ಸಂಬಂಧಿಸಿದ್ದು. ನಿಜಕ್ಕೂ ಮಾದಕ ವಸ್ತು ದೇಶವನ್ನು ನಾಶ ಮಾಡುತ್ತಿದೆ. ಅಪ್ಪು ಅಪ್ಪಾಜಿಗಿಂತ ದೊಡ್ಡ ಹೆಸರು ಗಳಿಸಿದ್ದಾನೆ ಎಂದರೆ ಖುಷಿ ಹೆಚ್ಚಾಗುತ್ತದೆ. ತಂದೆ ಅಥವಾ ಅಣ್ಣ ಬಯಸುವುದು ಇದನ್ನೇ. ಕಿರಿಯರು ನಮಗಿಂತ ಎತ್ತರದಲ್ಲಿ ಗುರುತಿಸಿ ಕೊಂಡರೆ ಸಂತೋಷವಾಗುತ್ತದೆ. ಅಪ್ಪಾಜಿ ಅಮ್ಮನಿಗೆ ಅಪ್ಪು ಎಂದರೆ ತುಂಬಾ ಪ್ರೀತಿಯಿತ್ತು. ಅಪ್ಪು ಕೂಡ ಅಪ್ಪಾಜಿ ಹಾದಿಯಲ್ಲೇ ಅಚ್ಚುಕಟ್ಟಾಗಿ ನಡೆದ. ಆದ್ದರಿಂದಲೇ ಅವನು ಪುನೀತ್ ಮಾತ್ರವಲ್ಲ ಪುನೀತ್ ರಾಜ್‍ಕುಮಾರ್ ಆಗಿಯೇ ಇದ್ದ. ಹುಟ್ಟಿದಾಗಿ ನಿಂದ ಕೊನೆವರೆಗೂ ನಗು ಹಾಗೆಯೇ ಇತ್ತು. ಎಲ್ಲರನ್ನೂ ಸರಿಸಮಾನವಾಗಿ ಕಾಣುವಂತಹ ಗುಣ ನಾಲ್ಕೈದು ವರ್ಷದ ಮಗುವಿದ್ದಾಗಲೇ ಕಾಣಿಸಿತು ಎಂದು ಹಳೆಯ ಕ್ಷಣಗಳನ್ನು ನೆನೆದರು. ಏನೇ ಇದ್ದರೂ ಅಮರವಾಗುವುದು ಒಳ್ಳೆಯ ತನ ಮಾತ್ರ. ಮೈಸೂರು ವಿವಿ ಅಪ್ಪುಗೆ ಡಾಕ್ಟರೇಟ್ ಘೋಷಿಸಿರುವುದು ತುಂಬಾ ಹೆಮ್ಮೆ ಎನ್ನಿಸುತ್ತದೆ. ಅಪ್ಪಾಜಿ, ಅಪ್ಪು ಹಾಗೂ ನನಗೂ ಮೈಸೂರಿನ ಬಗ್ಗೆ ತುಂಬಾ ಪ್ರೀತಿ. ಆದ್ದರಿಂದ ಇಲ್ಲೇ ಸಿನಿಮಾ ನೋಡಿದ್ದೇನೆ.

ಕುಟುಂಬದವರೊಂದಿಗೆ ಸಿನಿಮಾ ನೋಡಿದರೆ ಆ ಸಂದರ್ಭ ಇನ್ನೂ ಕಷ್ಟವಾಗುತ್ತದೆ. ದಯವಿಟ್ಟು ಅಭಿಮಾನಿಗಳು ಥೀಯೇಟರ್ ಒಳಗೆ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ ಶಿವರಾಜ್‍ಕುಮಾರ್, ಸಿನಿಮಾವನ್ನು ಪೈರೆಸಿ ಮಾಡಿದರೂ ಜನ ಖಂಡಿತವಾಗಿ ಚಿತ್ರಮಂದಿರದಲ್ಲೇ ನೋಡುತ್ತಾರೆ ಎಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ ಡಿಆರ್‍ಸಿ ಪಾಲುದಾರರಾದ ವೈಶಾಲಿ ಹನುಮಂತು ಇದ್ದರು.

Translate »