ಮೈಸೂರಲ್ಲಿ ಅಭಿಮಾನದ `ಪುನೀತ್’ ಹುಟ್ಟುಹಬ್ಬ
ಮೈಸೂರು

ಮೈಸೂರಲ್ಲಿ ಅಭಿಮಾನದ `ಪುನೀತ್’ ಹುಟ್ಟುಹಬ್ಬ

March 18, 2022

ಮೈಸೂರು,ಮಾ.17(ಎಂಟಿವೈ)-ಗುರುವಾರ ಡಾ. ಪುನೀತ್ ರಾಜ್‍ಕುಮಾರ್ ಜನ್ಮದಿನದ ಸಡಗರ ಅಭಿಮಾನಿಗಳಿಗೆ ಒಂದೆಡೆಯಾದರೆ, ಅವರು ಅಭಿನಯಿಸಿದ ಕೊನೆಯ ಚಿತ್ರ `ಜೇಮ್ಸ್’ ಬಿಡುಗಡೆ ಸಂಭ್ರಮ ಮತ್ತೊಂದೆಡೆ. ಮೈಸೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೆ ಅಭಿಮಾನಿಗಳ ಹೃದಯ ದಲ್ಲಿ ಅಮರವಾಗಿರುವ ಪುನೀತ್ ಸ್ಮರಣೆ…. ಈ ಹಿನ್ನೆಲೆ ಯಲ್ಲಿ ಪುನೀತ್ ಅಭಿಮಾನಿಗಳು ವಿವಿಧೆಡೆ ಅನ್ನ ಸಂತ ರ್ಪಣೆ, ಭಾವಚಿತ್ರದ ಮೆರವಣಿಗೆ ಜೊತೆಗೆ ವಿವಿಧ ಸೇವಾ ಕಾರ್ಯ ನಡೆಸುವ ಮೂಲಕ ನೆಚ್ಚಿನ ನಾಯಕನ ಆತ್ಮಕ್ಕೆ ಶಾಂತಿ ಕೋರಿ ಅಭಿಮಾನ ಮೆರೆದರು.

ಮೈಸೂರಿನ ಬಹುತೇಕ ಬಡಾವಣೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಬೆಳಗ್ಗಿನಿಂದಲೇ ಅಪ್ಪು ಜಾತ್ರೆ ಸಂಭ್ರಮ ಕಂಡು ಬಂದಿತು. ಅಪ್ಪು ಅಭಿಮಾನಿಗಳು ಬೈಕ್ ಹಾಗೂ ಆಟೋರಿಕ್ಷಾಗಳಲ್ಲಿ ಕನ್ನಡದ ಧ್ವಜ, ಡಾ.ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಭಾವಚಿತ್ರವುಳ್ಳ ಧ್ವಜವನ್ನು ಕಟ್ಟಿ ಮೆರವಣಿಗೆ ನಡೆಸುವ ಮೂಲಕ ಪುನೀತ್ ಸ್ಮರಣೆ ಮಾಡಿ, `ಜೇಮ್ಸ್’ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದರು. ನಗರದ ಬಹುತೇಕ ಸರ್ಕಲ್‍ಗಳು, ರಸ್ತೆಗಳಲ್ಲಿ ಅಪ್ಪು ಬ್ಯಾನರ್ ಗಳು, ಕಟೌಟ್‍ಗಳು ರಾರಾಜಿಸಿದವು.

ಅಭಿಮಾನಿಗಳು ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಕಂಡು ಬಂದಿತು. ಹಲವೆಡೆ ಅಪ್ಪು ಫೋಟೋ ಇಟ್ಟು, ದೀಪ ಬೆಳಗಿಸುವ ಮೂಲಕ ನಮನ ಸಲ್ಲಿಸಿದರು. ಅಲ್ಲದೆ, ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನದಾನ, ಸಿಹಿ ವಿತರಣೆ, ಹಣ್ಣುಗಳ ವಿತರಣೆ, ಮಕ್ಕಳಿಗೆ ಉಡುಗೊರೆ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯದ ಮೂಲಕ ಅಪ್ಪು ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಫೈವ್‍ಲೈಟ್ ವೃತ್ತ, ಕೆ.ಜಿ.ಕೊಪ್ಪಲು, ವಿನಾಯಕನಗರ, ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ವಿನೋಬಾ ರಸ್ತೆ, ಅಗ್ರಹಾರ, ಚಾಮುಂಡಿ ಪುರಂ, ಜೆಪಿ.ನಗರ, ಕುವೆಂಪುನಗರ, ಶಾರದಾದೇವಿನಗರ, ಜಯಲಕ್ಷ್ಮೀಪುರಂ, ಸರಸ್ವತಿಪುರಂ, ಇಟ್ಟಿಗೆಗೂಡು, ಸಿದ್ದಾರ್ಥನಗರ, ಬನ್ನಿಮಂಟಪ, ಕೆಸರೆ, ರಾಮಕೃಷ್ಣನಗರ, ಬೋಗಾದಿ, ಮೂಡಲಹುಂಡಿ ಸೇರಿದಂತೆ ಹಲವೆಡೆ ಪುನೀತ್ ರಾಜ್‍ಕುಮಾರ್ ಚಿತ್ರವುಳ್ಳ ಕಟೌಟ್‍ಗಳು ರಾರಾಜಿಸಿದವು. ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಚಿತ್ರಮಂದಿರಗಳಲ್ಲಿ: ಅಪ್ಪು ಅಭಿನಯದ ಕೊನೆ ಚಿತ್ರ `ಜೇಮ್ಸ್’ ಬಿಡುಗಡೆ ಹಿನ್ನೆಲೆಯಲ್ಲಿ ಮೈಸೂರಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಸಿಂಗಲ್ ಸ್ಕ್ರೀನ್ ಹೊಂದಿರುವ ಗಾಯತ್ರಿ, ಸಂಗಮ್, ವುಡ್‍ಲ್ಯಾಂಡ್, ರಾಜ್‍ಕಮಲ್, ತಿಬ್ಬಾದೇವಿ ಹಾಗೂ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಡಿಆರ್‍ಸಿ, ಐನಾಕ್ಸ್, ಪಿವಿಆರ್, ವಿಷನ್ ಸಿನಿಮಾಗಳಲ್ಲಿ `ಜೇಮ್ಸ್’ ಬಿಡುಗಡೆಯಾಗಿದ್ದು, ಈ ಚಿತ್ರಮಂದಿರಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ನೆರೆದು ಜೈಕಾರ ಹಾಕಿ ಸಂಭ್ರಮಿಸಿ ದರು. ದೊಡ್ಡ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿದರು. ಪಟಾಕಿ ಸಿಡಿಸಿದರು. ಬಹುತೇಕ ಅಭಿಮಾನಿಗಳು ಅಪ್ಪು ಫೆÇೀಟೋ ಹಿಡಿದುಕೊಂಡು ಚಿತ್ರಮಂದಿರದತ್ತ ಆಗಮಿಸಿದ್ದರು.

ಕೀ ಚೈನ್ ವಿತರಣೆ: ಗಾಯಿತ್ರಿ ಸಿನಿಮಾ ಮಂದಿರದ ಬಳಿ ವೀರ ಕನ್ನಡಿಗ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ವತಿಯಿಂದ ಸಿನಿಮಾ ವೀಕ್ಷಣೆಗೆ ಬಂದ ಎಲ್ಲರಿಗೂ `ಜೇಮ್ಸ್’ ಸಿನಿಮಾದ ಲೋಗೋ ಮುದ್ರಿತ ಕೀ ಚೈನ್ ವಿತರಿಸಿದ್ದು ವಿಶೇಷವಾಗಿತ್ತು.

`ಪುನೀತ್’ ಗುಡಿ ನಿರ್ಮಾಣ: ಪುನೀತ್ ರಾಜ್‍ಕುಮಾರ್ ಜನ್ಮ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಪಡುವಾರಹಳ್ಳಿಯಲ್ಲಿ ಅಪ್ಪು ಅಭಿಮಾನಿಗಳು `ಪುನೀತ್ ರಾಜ್‍ಕುಮಾರ್’ ಅವರ ಗುಡಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ. ಪಡುವಾರಹಳ್ಳಿಯ ರಮೇಶ್, ಗೋವಿಂದರಾಜು, ಚಂದ್ರಣ್ಣ, ಸೋಮಶೇಖರ್, ಪ್ರಮೋದ್, ಮಹದೇವು, ವೆಂಕಟೇಶ್ ಸೇರಿದಂತೆ ಇನ್ನಿತರ ಅಪ್ಪು ಅಭಿಮಾನಿಗಳು ಗುಡಿ ನಿರ್ಮಿಸಿದ್ದಾರೆ. ಪಡುವಾರಹಳ್ಳಿ 2ನೇ ಕ್ರಾಸ್‍ನಲ್ಲಿ ಕಲಾವಿದ ರಾಘವೇಂದ್ರ ಕೈ ಚಳಕದಲ್ಲಿ ಗೋಡೆಯ¯್ಲÉೀ ಅಪ್ಪು ಆಕೃತಿ ಮೂಡಿ ಬಂದಿದೆ. ಅದಕ್ಕೆ `ದೇವರ ಗುಡಿ’ ಎಂದೇ ನಾಮಕರಣ ಮಾಡಿದ್ದು, ನಟ ಶಿವರಾಜ್‍ಕುಮಾರ್ ಉದ್ಘಾಟಿಸಿ ಪುಷ್ಪಾರ್ಚಣೆ ಮಾಡಿದರು. ಶಾಸಕ ಎಲ್.ನಾಗೇಂದ್ರ, ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಹೋರಾಟಗಾರ ರಾಮೇಗೌಡ, ಶ್ರೀನಿವಾಸ್ ಇತರರಿದ್ದರು. ಇದೇ ವೇಳೆ 5 ಸಾವಿರ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶಕ್ತಿಧಾಮದಲ್ಲಿ ಶಿವಣ್ಣ: ಸಹೋದರ ಅಪ್ಪು ಜನ್ಮದಿನ ಹಾಗೂ `ಜೇಮ್ಸ್’ ಬಿಡುಗಡೆ ದಿನವಾದ ಇಂದು ಮೈಸೂರಿನಲ್ಲಿರುವ ಶಿವರಾಜ್‍ಕುಮಾರ್, ಬೆಳಗ್ಗೆಯಿಂದ ರಾತ್ರಿವರೆಗೂ ಬಿಡುವಿಲ್ಲದೆ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ. ಅಲ್ಲದೆ ಬೆಳಗ್ಗೆಯೇ ತಮ್ಮ ನೆಚ್ಚಿನ `ಶಕ್ತಿಧಾಮ’ಕ್ಕೆ ತೆರಳಿ, ಮಕ್ಕಳೊಂದಿಗೆ ಕೆಲಹೊತ್ತು ಕಳೆದಿದ್ದಾರೆ. ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಮತ್ತೆ ಶಕ್ತಿಧಾಮಕ್ಕೆ ತೆರಳಿದ್ದರು.

ಅಪ್ಪು ಟ್ಯಾಟೋ: ಡಿಆರ್‍ಸಿಯಲ್ಲಿ `ಜೇಮ್ಸ್’ ವೀಕ್ಷಿಸಿ ಹೊರಬಂದ ಅಭಿಮಾನಿ ಭರತ್ ಕೈಯಲ್ಲಿದ್ದ ಪುನೀತ್ ಭಾವಚಿತ್ರದ ಟ್ಯಾಟೋ ಎಲ್ಲರ ಗಮನ ಸೆಳೆಯಿತು. ಈ ವೇಳೆ ಭರತ್ ಪ್ರತಿಕ್ರಿಯಿಸಿ, ಅಪ್ಪು ಅವರ ಅಕಾಲಿಕ ನಿಧನದಿಂದ ಎಲ್ಲರಿಗೂ ಆಘಾತವಾಗಿತ್ತು. ಆದರೆ ಅವರು ಎಲ್ಲೂ ಹೋಗಿಲ್ಲ. ನಮ್ಮೆಲ್ಲರ ಹೃದಯದಲ್ಲೂ ಸದಾ ಜೀವಂತವಾಗಿರುತ್ತಾರೆ ಎಂದು ಅಭಿಮಾನದ ನುಡಿಗಳನ್ನಾಡಿದರು.

ಸಂಗೀತ ನಮನ: ಮೈಸೂರಿನ ನಿನಾದ್ ಮ್ಯೂಸಿಕಲ್ ಟ್ರಸ್ಟ್ ಹಾಗೂ ಪ್ರಸನ್ನ ಫಿಲಂ ಹಿಟ್ಸ್ ಗ್ರೂಪ್ ಸಹಯೋಗದಲ್ಲಿ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಗಾನ `ಅಪ್ಪು’ಗೆ `ಪುನೀತ’ ಗಾನ’ ಸಂಗೀತ ಕಾರ್ಯಕ್ರಮದ ಮೂಲಕ ಗಾನ ನಮನ ಸಲ್ಲಿಸಲಾಯಿತು. ಎ.ಎಸ್. ಪ್ರಸನ್ನಕುಮಾರ್ ಸಾರಥ್ಯದಲ್ಲಿ ಎಸ್.ಎಂ.ಬಸವಪ್ರಭು, ಲೋಕೇಶ್, ದಿವ್ಯಾಕೇಶವನ್, ಲಕ್ಷ್ಮಿಕಾಂತ್, ಸ್ವರಾಜ್, ರಿಚರ್ಡ್ ಆಂಟೋನಿ, ಡಾ.ಕುಲದೀಪದ್ ಸೇರಿದಂತೆ ಅನೇಕರು ಅಪ್ಪುಗಾಗಿ ಅಭ್ಯಾಸ ಮಾಡಿದ ಹಾಡುಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಡಾ.ರಾಜ್‍ಕುಮಾರ್ ಹಾಗೂ ಡಾ.ಪುನೀತ್ ಅಭಿನಯದ ಸುಮಾರು 40 ಚಿತ್ರಗೀತೆಗಳನ್ನು ಹಾಡಿ, ನೆರೆದಿದ್ದ ಅಭಿಮಾನಿಗಳನ್ನು ಭಾವುಕನ್ನಾಗಿಸುವಲ್ಲಿ ಯಶಸ್ವಿಯಾದರು.

Translate »