ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕಲ್ವಾ…!?
ಮೈಸೂರು

ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕಲ್ವಾ…!?

November 1, 2022

ಮೈಸೂರು, ಅ.31(ಎಸ್‍ಬಿಡಿ)- ಕನ್ನಡ ಕಲಿತಿರುವುದರಿಂದ ಇಲ್ಲಿನ ಜನರ ಹೃದಯ ಸ್ಪರ್ಶಿಸಲು ಸಾಧ್ಯವಾಗಿದೆ. ಇದರಿಂದ ನಮಗೂ ಹೆಮ್ಮೆ ಎನಿಸಿದೆ. ಇದು ಮೈಸೂ ರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಆಫ್ಘಾನಿ ಸ್ತಾನದ ಮೊಹಮ್ಮದ್ ರೆಜಾ ಷರೀಫಿ ಭಾವನಾತ್ಮಕ ನುಡಿ. ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕಲ್ವಾ? ಎಂದು ಪ್ರಶ್ನಿಸುವ ಮೂಲಕ ಕನ್ನಡಿಗರ ಹೃದಯ ತಟ್ಟಿ ರುವ ಇವರು, ಸ್ನೇಹಿತರು, ಉಪನ್ಯಾಸಕರು, ನೆರೆಹೊರೆಯವರು, ವ್ಯಾಪಾರಿಗಳು ಹೀಗೆ ಎಲ್ಲರೊಂದಿಗೆ ಕನ್ನಡದಲ್ಲೇ ಸಂವಹನ ಸಾಧಿಸುತ್ತಾರೆ. ದಿನೇ ದಿನೆ ಭಾಷಾ ಪ್ರಯೋ ಗದಲ್ಲಿ ಸುಧಾರಣೆ ಕಂಡುಕೊಂಡು ಎಲ್ಲರ ಅಚ್ಚುಮೆಚ್ಚಿನ ವಿದೇಶಿ ಕನ್ನಡಿಗರಾಗಿ ದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭ ದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ ಕನ್ನಡವನ್ನು ಕೊಂಡಾಡಿದ್ದಾರೆ.

ನಾನು ಶಿಕ್ಷಣಕ್ಕಾಗಿ ಭಾರತಕ್ಕೆ 2016 ರಲ್ಲಿ ಬಂದಿದ್ದೇನೆ. ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ಬಿಸಿಎ, ಮಾನಸ ಗಂಗೋತ್ರಿಯಲ್ಲಿ
ಎಂ.ಎಸ್ಸಿ(ಸಿಎಸ್) ಪದವಿ ಮುಗಿಸಿ ಸದ್ಯ ಶ್ರೀರಂಗಪಟ್ಟಣ ತಾಲೂಕು ಎಂಐಟಿ ಕ್ಯಾಂಪಸ್‍ನಲ್ಲಿರುವ ಮಹಾರಾಜ ರೀಸರ್ಚ್ ಫೌಂಡೇಷನ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೇನೆ. ನಾನು ಮೈಸೂರಿಗೆ ಬಂದ 6 ತಿಂಗಳಲ್ಲೇ ಅಲ್ಪಸ್ವಲ ಕನ್ನಡ ಕಲಿತು, ಮಾತನಾಡಲು ಶುರು ಮಾಡಿದೆ. ಸ್ನೇಹಿತರು, ಉಪನ್ಯಾಸಕರು, ನೆರೆಹೊರೆಯವರು, ಅಂಗಡಿಯವರು ಹೀಗೆ ಎಲ್ಲರೂ ಸಹಕರಿಸಿದರು. ಏನಾದರೂ ತಪ್ಪಾದರೆ ತಮಾಷೆ ಮಾಡದೆ ಅದನ್ನು ಸರಿಪಡಿಸಿ ಹೇಳಿಕೊಟ್ಟರು.

ಅಪ್ಪು ನನಗಿಷ್ಟ: ಜೊತೆಗೆ ಕನ್ನಡ ಸಿನಿಮಾ ಹಾಗೂ ಹಾಡುಗಳಿಂದಲೂ ಭಾಷೆ ಕಲಿಯಲು ಅನುಕೂಲವಾಯಿತು. ರ್ಯಾಪರ್ ಚಂದನ್‍ಶೆಟ್ಟಿ ಒಮ್ಮೆ ನಮ್ಮ ವಿದ್ಯಾವಿಕಾಸ ಕಾಲೇಜಿಗೆ ಬಂದಿದ್ದರು. ಬಳಿಕ ಯುವ ದಸರಾದಲ್ಲೂ ಹಾಡಿದ್ದರು. ಅವರು ಹಾಡುವುದು ನನಗೆ ಇಷ್ಟವಾಯಿತು. ಅಪ್ಪು ಪುನೀತ್ ರಾಜ್‍ಕುಮಾರ್ ನನ್ನ ಫೇವರೇಟ್ ನಟ. ಅರಸು, ಮಿಲನ, ರಾಜಕುಮಾರ ಸೇರಿ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಅವರ ಕೊನೆಯ ಚಿತ್ರ `ಗಂಧದ ಗುಡಿ’ ನೋಡಬೇಕು. `ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜ ಕುಮಾರ…’ ಹಾಡು ತುಂಬಾ ಇಷ್ಟ. `ಮುಂಗಾರು ಮಳೆ-2’ ಸಿನಿಮಾದ `ಸರಿಯಾಗಿ ನೆನಪಿದೆ ನನಗೆ…’, `ಕೆಜಿಎಫ್’ನ `ಸಲಾಂ ರಾಖಿಬಾಯ್…’ ಹಾಡುಗಳನ್ನೂ ಪದೇ ಪದೆ ಕೇಳುತ್ತೇನೆ.

ಹೃದಯಸ್ಪರ್ಶಿ ಭಾಷೆ: ನನ್ನ ತಂದೆ `ಭಾಷೆಯಿಂದ ಜನರ ಹೃದಯ ಮುಟ್ಟಬಹುದು’ ಎಂಬ ಸಲಹೆ ನೀಡಿದ್ದರು. ನಾನು ಕನ್ನಡ ಕಲಿಯಲು ತಂದೆಯ ಮಾತೂ ಪ್ರೇರಣೆ ಯಾಯಿತು. ಕನ್ನಡ ಕಲಿತಿರುವುದರಿಂದ ನನಗೆ ಆರಾಮದಾಯಕ ಭಾವನೆ ಮೂಡಿದೆ. ಕೆಲವು ಬಾರಿ ಕಾಲೇಜಿನಲ್ಲಿ ಕನ್ನಡದಲ್ಲೇ ವಿಷಯ ಮಂಡಿಸಲು ಪ್ರಯತ್ನಿಸಿದ್ದೇನೆ. ಬೋಗಾದಿ 2ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ನೆರೆಹೊರೆಯವರೆಲ್ಲಾ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ತಂದೆ ಹೇಳಿದಂತೆ ಭಾಷೆಯಿಂದ ಜನರ ಹೃದಯ ಸ್ಪರ್ಶಿಸಿದ್ದೇನೆ. ಮೈಸೂರಿನ ವಾತಾವರಣ, ಊಟ ಎಲ್ಲವೂ ಚೆನ್ನಾಗಿದೆ. ಜನ ತುಂಬಾ ಸಹಾಯ ಮಾಡುತ್ತಾರೆ. ಬೇರೆ ಊರಿಗೆ ಹೋಗಿ ಮೈಸೂರಿಗೆ ವಾಪಸ್ಸಾದಾಗ ನಮ್ಮ ಮನೆಗೆ ಬಂದಿದ್ದೇವೆ ಎನ್ನಿಸುತ್ತದೆ.

ನಾನು `ಕನ್ನಡ ಬಾಯ್’: ಮೈಸೂರಿನಲ್ಲಿ ಆಫ್ಘಾನಿಸ್ತಾನದ 200ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿದ್ದಾರೆ. ಅಲ್ಲದೆ ಬೇರೆ ದೇಶದವರೂ ತುಂಬಾ ಇದ್ದಾರೆ. ಎಲ್ಲರಿಗೂ ನಾನು ಕನ್ನಡ ಕಲಿಯುವಂತೆ ತಿಳಿಸುತ್ತೇನೆ. ಅವರೆಲ್ಲಾ ನನ್ನನ್ನು `ಕನ್ನಡ ಬಾಯ್’ ಎಂದೇ ಕರೆಯುತ್ತಾರೆ. ಆಗ `ನಾನು ಕನ್ನಡಿಗ’ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಟ್ರಾಫಿಕ್ ಇನ್ನಿತರ ಸಮಸ್ಯೆ ಬಗ್ಗೆ ವಿದೇಶಿಯರೊಂದಿಗೆ ಮಾತನಾಡಬೇಕಾದಾಗ ಪೊಲೀಸರು ನನಗೆ ಕರೆ ಮಾಡುತ್ತಾರೆ. ಇನ್ನು ವಿದೇಶಿ ವಿದ್ಯಾರ್ಥಿಗಳಿಗೆಲ್ಲಾ ನಾನು ಗೊತ್ತು. ಸಂವಹನದಲ್ಲಿ ಏನಾದರೂ ಸಮಸ್ಯೆಯಾದರೆ ನನಗೆ ಕರೆ ಮಾಡುತ್ತಾರೆ. ನಾನು ಕನ್ನಡದಿಂದ ಮಾತ ನಾಡುವುದರಿಂದ ಎಲ್ಲರೂ ಇಷ್ಟಪಡುತ್ತಾರೆ. ನಾನೂ ಇನ್ನೂ ಚೆನ್ನಾಗಿ ಕನ್ನಡವನ್ನು ಕಲಿಯುತ್ತೇನೆ ಎಂದು ಮೊಹಮ್ಮದ್ ರೆಜಾ ಶರೀಫಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Translate »