ಅಗಲಿದ ರೈತ ಸಂಘದ ಮುಖಂಡರಿಗೆ ಶ್ರದ್ಧಾಂಜಲಿ
ಮೈಸೂರು

ಅಗಲಿದ ರೈತ ಸಂಘದ ಮುಖಂಡರಿಗೆ ಶ್ರದ್ಧಾಂಜಲಿ

July 13, 2021

ಪಿರಿಯಾಪಟ್ಟಣ, ಜು.12 (ವೀರೇಶ್)- ಬಂಡವಾಳಶಾಹಿ ಹಾಗೂ ಜಡ್ಡುಗಟ್ಟಿದ ಜಾತಿ ವ್ಯವಸ್ಥೆ ಮೀರಿದ ಸಂಬಂಧವೇ ರೈತ ಚಳವಳಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ತಾಲೂಕಿನ ರೈತ ಸಂಘದ ಹಿರಿಯ ಮುಖಂಡ ಬೋರಲಿಂಗೇಗೌಡ ಹಾಗೂ ಜಿಲ್ಲೆಯಲ್ಲಿ ಇತ್ತೀಚೆಗೆ ನಿಧನರಾದ ರೈತ ಸಂಘದ ಮುಖಂಡರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ರೈತನ ಅಸ್ತಿತ್ವ ಉಳಿಯಬೇಕಾದರೆ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಆ ಮೂಲಕ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದರು.

ತಾಲೂಕು ತಂಬಾಕು ಬೆಳೆಗಾರರ ಅಧ್ಯಕ್ಷ ಬಿ.ವಿ.ಜವರೇಗೌಡ ಮಾತನಾಡಿ, ರಾಜ್ಯಾದ್ಯಂತ ರೈತ ಸಂಘದ ಅಳಿವು-ಉಳಿವು, ಸಂಘಟನೆಗೆ ಅನೇಕ ನಾಯಕರ ಪರಿಶ್ರಮವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಒಡೆಯುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ರಾಜಕಾರಣದ ನಂಟೆ ಕಾರಣ ಎಂದು ನುಡಿದರು.

ಹಿರಿಯ ಮುಖಂಡ ಅಶ್ವಥ್ ನಾರಾಯಣ್ ಮಾತನಾಡಿ, ತಮ್ಮ ಅಗಾಧ ಪರಿಶ್ರಮ ಮತ್ತು ಹೋರಾಟದ ಮೂಲಕ ಪೆÇ್ರ.ನಂಜುಂಡ ಸ್ವಾಮಿ ಅವರು ರೈತರು ಹೋರಾಟಕ್ಕೆ ಅಸ್ತಿತ್ವ ತಂದವರು. ಆದರೆ ಇಂದು ರೈತಸಂಘ ಅನೇಕ ಬಣಗಳಾಗಿ ಕಾಣೆಯಾಗುತ್ತಿರುವುದು ವಿಷಾದನೀಯ. ಹೋರಾಟಗಾರರು ತಮ್ಮ ಹೋರಾಟದಲ್ಲಿ ಸರ್ಕಾರದ ಸವಲತ್ತು ಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಮುಖಂಡ ಪ್ರಸನ್ನಗೌಡ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಟರಾಜು, ಬಸವ ರಾಜ್, ಬಿ.ಆರ್.ಸತೀಶ್, ದೇವರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಶಿವಣ್ಣ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ. ಪ್ರಕಾಶ್‍ರಾಜ್‍ಅರಸ್, ವಿಜಯ ದೇವರಾಜ ಅರಸ್, ಆನಂದ್ ಸೇರಿದಂತೆ ಇನ್ನಿತರರಿದ್ದರು.

Translate »