ಮಾದಿಗಹಳ್ಳಿ ಕೆರೆಯಲ್ಲಿ ಕೋಡಿ: ಅಪಾಯದಲ್ಲಿ ಸೇತುವೆ
ಮೈಸೂರು

ಮಾದಿಗಹಳ್ಳಿ ಕೆರೆಯಲ್ಲಿ ಕೋಡಿ: ಅಪಾಯದಲ್ಲಿ ಸೇತುವೆ

July 13, 2021

ಬನ್ನೂರು, ಜು. 12(ಪ್ರಭು)- ಪಟ್ಟಣ ಸಮೀಪದ ಮಾದಿಗಹಳ್ಳಿ ಹಾಗೂ ಗಾಡಿಜೋಗಿಹುಂಡಿ ಗ್ರಾಮದ ನಡುವೆ ಬರುವ ಕೆರೆ ಸೇತುವೆ ತಡೆಗೋಡೆಗಳು ಹಾಳಾಗಿದ್ದು, ಇದೀಗ ಸೇತುವೆಯಲ್ಲಿ ಬಿರುಕು ಉಂಟಾಗಿದ್ದು, ಸೇತುವೆ ಕುಸಿಯುವ ಅಪಾಯ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಾರ್ವ ಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಯಿಂದ ಸುಮಾರು 12 ಅಡಿಗಳ ಮೇಲ್ಭಾಗ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಸ್ತೆ ಕೆಳಭಾಗದ ಜಮೀನುಗಳಿಗೆ ನೀರು ಹಾಯುವ ವ್ಯವಸ್ಥೆ ಮಾಡಲಾಗಿದೆ. ಆದರೆ ಇದೀಗ ನೀರಿನ ಹರಿವಿನ ರಭಸದಿಂದ ರಸ್ತೆಯ ಕೆಳಭಾಗದ ಮಣ್ಣು ಕುಸಿದು ಅದರಲ್ಲಿ ನೀರಿನ ಹರಿವು ಉಂಟಾಗಿರುವುದರಿಂದ ರಸ್ತೆಯೇ ಕುಸಿದು ಬೀಳುವ ಅಪಾಯ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾ ಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬನ್ನೂರು ಘಟಕ ಅಧ್ಯಕ್ಷ ಹುಚ್ಚೇಗೌಡ, ಈ ಹಿಂದೆ ಹಲವು ಬಾರಿ ಈ ಭಾಗದ ರಸ್ತೆ ಕಿರಿದಾಗಿದ್ದು ಅಗಲೀಕರಣ ಮಾಡು ವಂತೆ ಆಗ್ರಹಿಸಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮಣ್ಣು ಕುಸಿಯುತ್ತಿದ್ದು, ರಸ್ತೆಯ ಸಂಪರ್ಕವೇ ಕಡಿದು ಬೀಳುವ ಅಪಾಯ ಎದುರಾಗಿದೆ. ಇಲ್ಲಿನ ಶಾಸಕರು ಇತ್ತ ಗಮನಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದು ರೈತರ, ಸಾರ್ವ ಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದರು. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದರೇ ಪಾಂಡವಪುರ ನೀರಾವರಿ ಇಲಾಖೆ ಮುಂದೆ ಧರಣಿ ಮಾಡುವ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬನ್ನೂರು ಘಟಕದ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಕೆರೆ ಏರಿ ಮೇಲೆ ವಾಹನ ಚಲಾಯಿಸಲು ವಾಹನ ಸವಾರರು ಹೆದರುವ ಪರಿಸ್ಥಿತಿ ಇದೆ. ಕೆರೆ ಮೇಲ್ಭಾಗ ದಲ್ಲಿ ರಸ್ತೆ ಇರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆಯ ಇಕ್ಕೆಲದಲ್ಲಿ ಹಾಕಲಾಗಿದ್ದ ತಡೆಗೋಡೆಗಳೆಲ್ಲಾ ಸಂಪೂರ್ಣ ಹಾಳಾಗಿದ್ದು, ಆಗಿಂದಾಗ್ಗೆ ವಾಹನಗಳು ನೆಲಕ್ಕೆ ಉರುಳಿ ಅಪಾಯಗಳಾಗುತ್ತಿರುವ ಸನ್ನಿವೇಶ ಸಾಮಾನ್ಯವಾಗಿದೆ. ಇದರ ಜೊತೆಗೆ ಇದೀಗ ರಸ್ತೆ ಕೆಳಭಾಗದಲ್ಲಿ ಮಣ್ಣು ಕುಸಿಯುತ್ತಿರುವುದರಿಂದ ರಸ್ತೆಯೇ ಬಿರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಆಗ್ರಹಿಸಿದರು.

Translate »