ಸಿಕ್ಕ ಚಿರತೆ ಮರಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದ ಅರಣ್ಯ ಸಿಬ್ಬಂದಿ
ಮೈಸೂರು

ಸಿಕ್ಕ ಚಿರತೆ ಮರಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದ ಅರಣ್ಯ ಸಿಬ್ಬಂದಿ

May 25, 2020

ಮೈಸೂರು, ಮೇ 24(ಎಂಟಿವೈ)-ನಾಲ್ಕೈದು ದಿನದ ಹಿಂದಷ್ಟೇ ಜನ್ಮ ನೀಡಿದ್ದ ಕರುಳ ಬಳ್ಳಿಗಳ ಕಣ್ಮರೆಯಿಂದಾಗಿ ಕಂಗೆಟ್ಟಿದ್ದ ತಾಯಿಯ ಮೂಕ ರೋದನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮಿಡಿದಿದ್ದು, ಮಳೆಯ ನಡುವೆಯೂ ಕರುಳ ಕುಡಿಯನ್ನು ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರು ತಾಲೂಕಿನ ಕೂಡನಹಳ್ಳಿಯ ಗ್ರಾಮದ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ ಭಾನುವಾರ(ಮೇ 17) ನಾಲ್ಕೈದು ದಿನದ ಹಿಂದಷ್ಟೇ ಜನಿಸಿದ್ದ 3 ಚಿರತೆ ಮರಿ ಸಿಕ್ಕಿದ್ದವು.

ಅವುಗಳನ್ನು ಗ್ರಾಮಸ್ಥರು ಟ್ರೇವೊಂದರಲ್ಲಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿ ಸಿದ ಆರ್‍ಎಫ್‍ಓ ಎಂ.ಕೆ.ದೇವರಾಜು, ಡಿಆರ್‍ಎಫ್‍ಓ ಮಾಲೇ ಗೌಡ ಚಿರತೆ ಮರಿಗಳ ರಕ್ಷಿಸಿದ್ದರು. ಕೇವಲ ನಾಲ್ಕೈದು ದಿನದ ಹಿಂದೆ ಜನಿಸಿದ್ದ ಮರಿಯಾಗಿದ್ದರಿಂದ ತಾಯಿ ಮಡಿಲಿಗೆ ಸೇರಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿತ್ತು.

ಅಲ್ಲದೆ ಅಷ್ಟು ಸಣ್ಣ ಮರಿಯನ್ನು ಸಿಬ್ಬಂದಿ ಪಾಲನೆ ಮಾಡಿ ಸಂರಕ್ಷಿಸುವುದು ಸವಾಲಿನ ಕೆಲಸವೂ ಆಗಿತ್ತು. ಬೇರೆ ಬೇರೆ ಪ್ರಕರಣಗಳಲ್ಲಿ ಮೈಸೂರಿನ ಅರಣ್ಯ ಇಲಾಖೆ ಸಿಬ್ಬಂದಿ ಸಣ್ಣ ಮರಿಯನ್ನು ಪಾಲನೆ ಮಾಡಿ ಯಶಸ್ವಿಯಾಗಿರುವ ನಿದರ್ಶನವಿದ್ದರೂ, ಕೂಡನಹಳ್ಳಿಯಲ್ಲಿ ಸಿಕ್ಕಿದ ಮರಿಗಳನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸುವ ಮಹತ್ತರ ನಿಲುವು ತಾಳಿದ್ದರು. ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಗಳಾದ ಅಲೆಕ್ಸಾಂಡರ್, ಡಾ.ಕೆ.ಸಿ. ಪ್ರಶಾಂತ್‍ಕುಮಾರ್ ಸೂಚನೆ ಮೇರೆಗೆ ಅರಣ್ಯ ಸಿಬ್ಬಂದಿ ಮರಿ ಸಿಕ್ಕ ಸ್ಥಳದ ಸುತ್ತಲೂ ಸೂಕ್ಷ್ಮವಾಗಿ ಗಮನಿಸುವ ಕಾರ್ಯಾಚರಣೆ ಆರಂಭಿಸಿದ್ದರು.

ಕರುಳಿನ ಕುಡಿಗಾಗಿ ಕೂಗು: ಕಬ್ಬಿನ ಗದ್ದೆ ಸುತ್ತಮುತ್ತ ಹದ್ದಿನ ಕಣ್ಣಿಟ್ಟು ಗಮನಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಚಿರತೆ ತನ್ನ ಮರಿಯನ್ನು ಹುಡುಕುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆ ಮೂರು ಮರಿಗಳನ್ನು ಸಿಕ್ಕ ಸ್ಥಳದಲ್ಲಿಯೇ ಬಿಟ್ಟು ದೂರದಲ್ಲಿ ನಿಶ್ಶಬ್ದ ವಾಗಿ ಕಾದು ಕುಳಿತಿದ್ದಾರೆ. ಸಂಜೆ 6.30ರಲ್ಲಿ ಮರಿಗಳಿಗೆ ಜನ್ಮ ನೀಡಿದ್ದ ಕಬ್ಬಿನ ಗದ್ದೆಯಲ್ಲಿ ಕರುಳ ಕುಡಿಗಾಗಿ ಚಿರತೆ ಸುತ್ತಾಡಿದ್ದನ್ನು ಖಚಿತ ಪಡಿಸಿಕೊಂಡ ಸಿಬ್ಬಂದಿ, ಸಂಜೆ 7.30ಕ್ಕೆ ಅದೇ ಸ್ಥಳದಲ್ಲಿ ಮರಿಯನ್ನು ಬಿಟ್ಟು ಬಂದಿದ್ದಾರೆ. ಈ ನಡುವೆ ಮಳೆ ಬಂದಿದೆ. ಆದರೂ ಸಿಬ್ಬಂದಿ ಕಾದು ಕುಳಿತಿದ್ದಾರೆ. ಮಳೆ ನಿಂತ ಮೇಲೆ ಸುತ್ತಮುತ್ತಲಿನ ಮನೆಗಳಲ್ಲಿನ ನಾಯಿಗಳು ಬೊಗಳಲಾರಂಭಿಸಿದೆ. ರಾತ್ರಿ 9.30ಕ್ಕೆ ಮರಿ ಬಿಟ್ಟ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮರಿಯನ್ನು ತಾಯಿ ಕೊಂಡೊಯ್ದಿರುವುದು ಗೋಚರಿಸಿದೆ.

ಮರುದಿನವೂ ಪರಿಶೀಲನೆ: ಮರಿ ಬಿಟ್ಟಿದ್ದ ಸ್ಥಳವನ್ನು ಮರುದಿನ ಸಿಬ್ಬಂದಿ ಪರಿಶೀಲಿಸಿದಾಗ ತಾಯಿ ಚಿರತೆ ಹಾಗೂ ಮರಿಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ತಾಯಿ ಚಿರತೆ ಮರಿಗಳೊಂದಿಗೆ ಹೋಗಿ ರುವ ಹೆಜ್ಜೆ ಗುರುತು ಕಂಡು ಬಂದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಸಾರ್ಥಕತೆಯಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ವಾರ ಜಯಪುರ ಹೋಬಳಿ ದಡದಹಳ್ಳಿ ಜಮೀನಿನಲ್ಲಿ ಪತ್ತೆಯಾಗಿದ್ದ ಮೂರು ಚಿರತೆ ಮರಿಗಳನ್ನೂ ರಕ್ಷಿಸಿ, ಸಮೀಪದ ಕುರುಚಲು ಕಾಡಿನಲ್ಲಿ ಬಿಡಲಾಗಿತ್ತು. ಬೆಳಗಾಗುವಷ್ಟರಲ್ಲಿ ತಾಯಿ ಚಿರತೆ ಮರಿಗಳನ್ನು ಕರೆದೊಯ್ದಿತ್ತು. ಶನಿವಾರ ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮೂರು ಮರಿಗಳು ಪತ್ತೆಯಾಗಿದ್ದವು. ಅವುಗಳನ್ನೂ ಆ ಸ್ಥಳದಲ್ಲಿ ಬಿಡಲಾಗಿತ್ತು. ಮರುದಿನ ಮುಂಜಾನೆ ತಾಯಿ ಚಿರತೆ, ಮರಿ ಗಳನ್ನು ಕರೆದೊಯ್ದಿದೆ. ಮೂರು ಘಟನೆಯಿಂದ 8 ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸುವ ಮಹತ್ತರ ಕಾರ್ಯ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದಾರೆ.

Translate »