ಕಸಾಪ ಮೈಸೂರು ಘಟಕದ ಕಾರ್ಯ ಚಟುವಟಿಕೆಗೆ ಕೊರೊನಾ ಬ್ರೇಕ್!
ಮೈಸೂರು

ಕಸಾಪ ಮೈಸೂರು ಘಟಕದ ಕಾರ್ಯ ಚಟುವಟಿಕೆಗೆ ಕೊರೊನಾ ಬ್ರೇಕ್!

May 25, 2020

ಮೈಸೂರು, ಮೇ 24(ಎಂಕೆ)- ಶತಮಾನದಿಂದಲೂ ಸಾಹಿತ್ಯ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ಭಾಷಾಭಿಮಾನ ಮೂಡಿಸುವಲ್ಲಿ ನಿರಂತರ ಚಟುವಟಿಕೆ ಯಲ್ಲಿ ತೊಡಗಿದ್ದ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಜಿಲ್ಲಾ ಘಟಕಕ್ಕೆ ಕೊರೊನಾ ಬ್ರೇಕ್ ಹಾಕಿದೆ.

ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‍ಡೌನ್ ಜಾರಿಯಾಗಿದ್ದರಿಂದ ತಿಂಗಳಲ್ಲಿ 15ರಿಂದ 20 ಕಾರ್ಯ ಕ್ರಮಗಳನ್ನು ನಡೆಸುತ್ತಿದ್ದ ಕಸಾಪ ಮೈಸೂರು ಜಿಲ್ಲಾ ಘಟಕಕ್ಕೆ ಕೆಲಸವೇ ಇಲ್ಲದಂತಾಗಿದೆ. ದತ್ತಿ ಕಾರ್ಯಕ್ರಮಗಳು, ಅಭಿನಂದನಾ ಸಮಾ ರಂಭಗಳು, ವಿಚಾರ ಸಂಕಿರಣಗಳು, ಉಪ ನ್ಯಾಸ, ಕವಿಗೋಷ್ಠಿ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಬ್ರೇಕ್ ಬಿದ್ದಿದೆ.

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೂ, ನಾಡಿನ ಎಲ್ಲಾ ಕನ್ನಡಪರ ಸಂಸ್ಥೆಗಳ ಮಾತೃ ಸಂಸ್ಥೆಯೂ ಆಗಿರುವ ಕನ್ನಡ ಸಾಹಿತ್ಯ ಪರಿ ಷತ್ತಿನ ಎಲ್ಲಾ ಬಗೆಯ ಕಾರ್ಯಚಟುವಟಿಕೆ ಗಳು ಕಳೆದ 2 ತಿಂಗಳಿಂದ ನಿಂತಿದ್ದು, ಸಾಹಿತ್ಯ ಆಸಕ್ತರಲ್ಲಿ ನಿರಾಸೆ ಮೂಡಿಸಿದೆ. ಮೇ 5ರಂದು ಸಂಸ್ಥಾಪನ ದಿನಾಚರಣೆ ಕೊರೊನಾ ವೈರಸ್‍ನಿಂದಾಗಿ ನಡೆಯಲಿಲ್ಲ. 2 ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನೂ ಮಾಡಲಾಗಲಿಲ್ಲ. ಕೆ.ಆರ್.ನಗರ, ಹುಣಸೂರು, ಮೈಸೂರು ತಾಲೂಕು ಮತ್ತು ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸದಂತಾಗಿದೆ.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಕಸಾಪ ಜಿಲ್ಲಾ ಕಚೇರಿಯಲ್ಲಿ ಪ್ರೊ.ಹೆಚ್‍ಎಸ್‍ಕೆ ಅವರ ಹೆಸರಿನಲ್ಲಿ ತೆರೆಯಲು ಉದ್ದೇಶಿಸಿದ್ದ ಗ್ರಂಥಾಲಯಕ್ಕೆ ಉದ್ಘಾಟನೆ ಭಾಗ್ಯವೂ ಸದ್ಯಕ್ಕೆ ಇಲ್ಲದಂತಾಗಿದೆ. ಮಾ.14ರಂದು ಬಿಡುಗಡೆಯಾಗಬೇಕಿದ್ದ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ‘ಶತಮಾನದ ಸಂತ’ ಚುಟುಕು ಕಾವ್ಯಗಳ ಸಂಗ್ರಹ ಪುಸ್ತಕ ಹಾಗೂ ಸಾಹಿತಿ ಮಳಲಿ ವಸಂತಕುಮಾರ್ ರಚಿತ ‘ಬಸವ ಕ್ರಾಂತಿ’ ನಾಟಕ ಕೃತಿಯ ಬಿಡುಗಡೆಯನ್ನೂ ಮುಂದೂಡಲಾಗಿದೆ.

ಸಾಹಿತ್ಯ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕೆಲಸಕ್ಕೆ ಕೊರೊನಾ ತಡೆಯೊಡ್ಡಿದ್ದು, ಬರಹಗಾರರು, ಓದುಗರಲ್ಲಿ ಬೇಸರ ತರಿಸಿದೆ ಎಂದು ಕಸಾಪ ಮೈಸೂರು ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಆನ್‍ಲೈನ್: ಕೊರೊನಾ ಸೋಂಕಿನಿಂದ ಪಾರಾಗುವುದರ ಜತೆಗೆ ಜನರಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಆನ್‍ಲೈನ್ ಮೂಲಕ ಕವಿಗೋಷ್ಠಿ, ಚರ್ಚೆಗಳು, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ತಿಳಿಸಿದರು.

Translate »