ಸಿದ್ದರಾಮಯ್ಯ-ಡಿಕೆಶಿ ಹಗ್ಗಜಗ್ಗಾಟ 40 ಕ್ಷೇತ್ರ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು
News

ಸಿದ್ದರಾಮಯ್ಯ-ಡಿಕೆಶಿ ಹಗ್ಗಜಗ್ಗಾಟ 40 ಕ್ಷೇತ್ರ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು

April 5, 2023

ಬೆಂಗಳೂರು, ಏ.4-(ಕೆಎಂಶಿ) ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಹಗ್ಗ ಜಗ್ಗಾಟದಿಂದ 40 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ವರಿಷ್ಠರು ವಿಫಲವಾಗಿದ್ದಾರೆ.

ರಾಜ್ಯದ ಉಳಿದ ನೂರು ವಿಧಾನ ಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ಯಲ್ಲಿ ದೆಹಲಿಯಲ್ಲಿ ಇಂದು ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಕೇವಲ 60 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಅಂತಿಮ ಗೊಂಡಿರುವ ಎರಡನೇ ಪಟ್ಟಿ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಈಗಾಗಲೇ 124 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ ಎಐಸಿಸಿ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ ನೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಸ್ಕ್ರೀನಿಂಗ್ ಕಮಿಟಿ ರಾಜ್ಯದಲ್ಲೇ ಮೂರು ದಿನ ಕಸರತ್ತು ನಡೆ ಸಿತ್ತು. ಈ ಸಂದರ್ಭದಲ್ಲಿ ವಿವಾದವಲ್ಲದ 60 ಕ್ಷೇತ್ರಗಳಿಗೆ ಒಂದೇ ಹೆಸರನ್ನು ಎಐಸಿಸಿಗೆ ಶಿಫಾರಸ್ಸು ಮಾಡಲಾಗಿತ್ತು.

ಉಳಿದ 40 ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರುಗಳನ್ನು ಶಿಫಾರಸ್ಸು ಮಾಡಿ ವರಿಷ್ಠರ ನಿರ್ಧಾರಕ್ಕೆ ಸ್ಕ್ರೀನಿಂಗ್ ಕಮಿಟಿ ಕಳುಹಿಸಿ ಕೊಟ್ಟಿತ್ತು. ಈ ಪಟ್ಟಿಯನ್ನೇ ಮುಂದಿಟ್ಟುಕೊಂಡು ಸಂಸದೀಯ ಮಂಡಳಿ ಸಭೆಯಲ್ಲಿ ಇಡೀ ದಿನ ಚರ್ಚೆ ಮಾಡಿ ಕೇವಲ 60 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಸಿದ್ದರಾಮಯ್ಯ, ವರುಣಾ ವಿಧಾನಸಭಾ ಕ್ಷೇತ್ರದ ಜತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಸಭೆಯಲ್ಲಿ ಅಪಸ್ವರ ಎದ್ದಿದೆ. ಸ್ವತಃ ಎಐಸಿಸಿ ಅಧ್ಯಕ್ಷರೇ ವರುಣಾದಿಂದ ಆಯ್ಕೆ ಖಚಿತ ಇರು ವಾಗ ಕೋಲಾರ ಏಕೆ ಎಂದಿದ್ದಾರೆ.

ಕ್ಷೇತ್ರವನ್ನು ಕಾರ್ಯಕರ್ತರೊಬ್ಬರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡೋಣ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳಲ್ಲಿ ಅವಕಾಶ ಮಾಡಿ ಕೊಟ್ಟರೆ, ಡಾ.ಪರಮೇಶ್ವರ್ ಸೇರಿದಂತೆ ಕೆಲವರು ಇದೇ ಬೇಡಿಕೆಯನ್ನು ಇಡ ಬಹುದು. ಇದರಲ್ಲಿ ಗೊಂದಲ ಬೇಡ ಎಂದು ತಳ್ಳಿಹಾಕಿದ್ದಾರಂತೆ. ಆದರೆ, ಅಂತಿಮ ವಾಗಿ ಸಭೆ ತೀರ್ಮಾನ ಕೈಗೊಂಡಿರುವ ಬಗ್ಗೆ ಪೂರ್ಣ ಮಾಹಿತಿ ಲಭ್ಯವಿಲ್ಲ.

ಸಿದ್ದರಾಮಯ್ಯ ಸ್ಪಷ್ಟನೆ: ಡಿ.ಕೆ.ಶಿವಕುಮಾರ್ ಸಿಎಂ ಆಗಲು ಹೈಕಮಾಂಡ್ ಒಪ್ಪುವು ದಿಲ್ಲ ಎಂಬ ಹೇಳಿಕೆ ನೀಡಿಲ್ಲ ಎಂದು ಸಿದ್ದ ರಾಮಯ್ಯ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Translate »