ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ರಾಬರ್ಟ್ ವಾದ್ರಾ ಸೇರಿ `ಕೈ’ ನಾಯಕರ ವಿರುದ್ಧ ಲೋಕಾಯುಕ್ತದಲ್ಲಿ 10 ದೂರು ದಾಖಲು
News

ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ರಾಬರ್ಟ್ ವಾದ್ರಾ ಸೇರಿ `ಕೈ’ ನಾಯಕರ ವಿರುದ್ಧ ಲೋಕಾಯುಕ್ತದಲ್ಲಿ 10 ದೂರು ದಾಖಲು

February 3, 2023

ಬೆಂಗಳೂರು, ಫೆ.2- ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ 3728 ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್, 10 ಬೃಹತ್ ಹಗರಣಗಳಿಗೆ ಸಂಬಂಧಿ ಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್. ಎಂ.ಕೃಷ್ಣಪ್ಪ, ಎನ್.ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ವಿರುದ್ಧ 10 ದೂರುಗಳನ್ನು ದಾಖಲಿಸಿದ್ದಾರೆ. ಅದೇ ರೀತಿ 9 ಹಿರಿಯ ಐಎಎಸ್, ಐವರು ಕೆಎಎಸ್ ಸೇರಿದಂತೆ 21 ಮಂದಿ ಅಧಿಕಾರಿಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸದ ಲ್ಲಿಯೇ ಪ್ರಪ್ರಥಮವಾಗಿ 10 ವಿವಿಧ ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ, ಪ್ರತ್ಯೇಕವಾದ 10 ದೂರುಗಳನ್ನು ಒಂದೇ ಬಾರಿಗೆ ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ. ನಗರದಲ್ಲಿಂದು ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಭೈರೇ ಗೌಡ, ಯು.ಟಿ. ಖಾದರ್, ಎಂ.ಬಿ.ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ ಹಾಗೂ ಶಾಸಕ ಎನ್.ಎ.ಹ್ಯಾರೀಸ್, ಮಾಜಿ ಶಾಸಕ ಪ್ರಿಯಾಕೃಷ್ಣ. ಅದೇ ರೀತಿ, ಹಿರಿಯ ಐಎಎಸ್ ಅಧಿಕಾರಿಗಳಾದ ಪಾಂಡು ರಂಗ ಬಿ.ನಾಯಕ್, ಜಿ.ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತ್ರದ್, ವಿ.ಶಂಕರ್, ಮನೋಜ್ ರಾಜನ್ ಹಾಗೂ ಡಾ.ಪಿ. ಬೋರೇಗೌಡ, ಡಾ.ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ವಿರುದ್ಧ ದೂರು ದಾಖಲಾಗಿವೆ ಎಂದರು.
ಇದಲ್ಲದೇ ಸೋನಿಯಾ ಗಾಂಧಿ ಅಳಿಯನೂ ಆದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧವೂ ಸಹ ಸರ್ಕಾರಿ ಭೂ ಕಬಳಿಕೆ ಪ್ರಕರಣದ ದೂರು ದಾಖಲಾ ಗಿದ್ದು, ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ ಸಂಸ್ಥೆಯು ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 1 ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 7, 8, 9, 10,ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 1 ರಿಂದ 35.ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17, 18, 19, 20ರಲ್ಲಿರುವ ಸುಮಾರು 9,600 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ 1,100 ಎಕರೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ಬೆಂಗಳೂರಿನ ಬೃಹತ್ ಭೂ ಕಬಳಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿ ವ್ಯಾಪ್ತಿಯ 189 ಇಂದಿರಾ ಕ್ಯಾಂಟೀನ್‍ಗಳ ಗ್ರಾಹಕರ ಹೆಸರಿನಲ್ಲಿ ಪ್ರತೀ ತಿಂಗಳು 11,52,74,273 ರೂಪಾಯಿಗಳಂತೆ 560 ಕೋಟಿ ರೂಪಾಯಿ ಹಣ ಕಬಳಿಸಿರುವ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಕೆ.ಜೆ.ಜಾರ್ಜ್, ಪಾಲಿಕೆಯ ಹಣಕಾಸು ವಿಭಾಗದ ಹಿಂದಿನ ಜಂಟಿ ಆಯುಕ್ತ ಮನೋಜ್ ರಾಜನ್, ರಿವಾರ್ಡ್ ಸಂಸ್ಥೆಗಳು ಭಾಗಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಪಾಲಿಕೆಗೆ ನಿಯಮಾನುಸಾರ ಪಾವತಿಸಬೇಕಾಗಿದ್ದ 68.15 ಕೋಟಿ ರೂಪಾಯಿಗಳಷ್ಟು ಜಾಹೀರಾತು ಶುಲ್ಕವನ್ನು ಪಾವತಿಸದೇ ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆ ಬಳಸಿಕೊಂಡಿದ್ದ 68.15 ಕೋಟಿ ಜಾಹಿರಾತು ಶುಲ್ಕ ವಂಚನೆ ಹಗರಣದಲ್ಲೂ ಇವರ ಬಹುಮುಖ್ಯ ಪಾತ್ರ ಇದೆ ಎಂದು ಆಪಾದಿಸಿದರು. ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರಿಗೆ ಸಹಾಯ ಮಾಡುವ “ಕೃಷಿ ಭಾಗ್ಯ” ಯೋಜನೆಯ ಹೆಸರಿನಲ್ಲಿ ನಡೆದಿರುವ 800 ಕೋಟಿ ರೂಪಾಯಿಗಳ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ಇಲಾಖೆಯ ಅಂದಿನ ಹಲವು ಅಧಿಕಾರಿಗಳು ಇದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಯ ಹೆಸರಿನಲ್ಲಿ ನಡೆದಿರುವ1,600 ಕೋಟಿ ರೂಪಾಯಿಗಳ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಕೆ.ಜೆ.ಜಾರ್ಜ್ ಕೈವಾಡ ಇದೆ. ಹೀಗೆ ಕೆಎಸ್, ಎಪಿಎಸ್ ಮೂಲಕ ನಡೆದಿರುವ ನೂರಾರು ಕೋಟಿ ಮೊತ್ತದ ಹಣ ದುರ್ಬಳಕೆ ಹಗರಣ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್, ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಹೆಸರಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಹಗರಣ ಸೇರಿದಂತೆ ಒಟ್ಟು ನಾಲ್ಕು ರೀತಿಯ ವಿವಿಧ ಯೋಜನೆಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ ಎಂದು ಟೀಕಿಸಿದರು.

ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಒಳ ಡೆಸ್ಟ್ ಬೀನ್ ಹಗರಣ, ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನದ ಹೆಸರಿನಲ್ಲಿ ಕಾನೂನುಬಾಹಿರವಾಗಿ ಅನುದಾನದ ದುರ್ಬಳಕೆ ಹಗರಣದಲ್ಲೂ ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಎಂ.ಕೃಷ್ಣಪ್ಪ ಮತ್ತು ಅಂದಿನ ಶಾಸಕರಾದ ಪ್ರಿಯಾ ಕೃಷ್ಣ, ಎನ್.ಎ.ಹ್ಯಾರೀಸ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಭಾಗಿಯಾಗಿದ್ದಾರೆ. ಅದೇ ರೀತಿ ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿಯೊಂದರ ಹೆಸರಿನಲ್ಲಿ 158 ಕೋಟಿ ಮೊತ್ತದ ಹಗರಣ ನಡೆದಿದ್ದು, ಇದರಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರ ಪಾತ್ರವಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದರು.

ಒಟ್ಟಾರೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ 7 ಪ್ರಕರಣಗಳು, ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ 4 ದೂರುಗಳು, ಮಾಜಿ ಸಚಿವ ಯು. ಟಿ. ಖಾದರ್, ಜಮೀರ್ ಅಹಮದ್ ಹಾಗೂ ಕೃಷ್ಣ ಭೈರೇಗೌಡ ವಿರುದ್ಧ ತಲಾ 2 ದೂರುಗಳು ಮತ್ತು ಮಾಜಿ ಸಚಿವ ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಶಾಸಕರಾದ ಎನ್. ಎ. ಹ್ಯಾರೀಸ್ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ರವರುಗಳ ವಿರುದ್ಧ ತಲಾ 1 ದೂರುಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಈ ಕೂಡಲೇ ಸಿಐಡಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.

Translate »