ಅಭ್ಯರ್ಥಿಗಳ ಆಯ್ಕೆಗೆ ದಿನವಿಡೀ ಕಾಂಗ್ರೆಸ್ ವ್ಯರ್ಥ ಕಸರತ್ತು
News

ಅಭ್ಯರ್ಥಿಗಳ ಆಯ್ಕೆಗೆ ದಿನವಿಡೀ ಕಾಂಗ್ರೆಸ್ ವ್ಯರ್ಥ ಕಸರತ್ತು

February 3, 2023

ಬೆಂಗಳೂರು, ಫೆ.2(ಕೆಎಂಶಿ)- ದಿನ ವಿಡೀ ಕಸರತ್ತು ನಡೆಸಿದರೂ ಒಂದೇ ಒಂದು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮ ಗೊಳಿಸಲು ಪ್ರದೇಶ ಕಾಂಗ್ರೆಸ್‍ಗೆ ಸಾಧ್ಯವಾಗಿಲ್ಲ.

ನಗರದ ಹೊರವಲಯದ ರೆಸಾರ್ಟ್ ನಲ್ಲಿ ರಾಜ್ಯ ನಾಯಕರು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರೇ ಹೊರತು ಅಭ್ಯರ್ಥಿ ಗಳ ಪಟ್ಟಿ ಅಂತಿಮವಾಗಿಲ್ಲ. ಯಾವಾಗ ಬಿಡುಗಡೆ ಮಾಡಬೇಕೆಂಬುದು ಇತ್ಯರ್ಥ ವಾಗಲಿಲ್ಲ. ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ಹಿರಿಯ ನಾಯಕರು ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜೊತೆ ಚರ್ಚೆಮಾಡಿ ಹೆಸರುಗಳನ್ನು ಶಿಫಾರಸ್ಸು ಮಾಡಿರುವ ಪಕ್ಷದ ಕಾರ್ಯ ದರ್ಶಿಗಳು ಹಾಗೂ ಚುನಾವಣಾ ಸಮಿತಿ ಸದಸ್ಯರೊಟ್ಟಿಗೆ ಸುದೀರ್ಘ ಚರ್ಚೆ ನಡೆ ಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 130 ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಅಂತಿಮಗೊಳಿಸಲು ಇಂದು ಸಭೆ ನಡೆಸಲಾಯಿತು. ವೀಕ್ಷಕರಿಂದ ಪೂರ್ಣ ಮಾಹಿತಿ ಪಡೆದ ರಾಜ್ಯ ನಾಯಕರು, ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಅವರ ಗೆಲುವಿನ ಸಾಧ್ಯತೆ ಹೇಗಿದೆ. ಆ ಕ್ಷೇತ್ರದಲ್ಲಿ ನಮಗೆ ಹತ್ತಿರದ ವಿರೋಧಿ ಯಾರು, ನೇರ ಸ್ಪರ್ಧೆ ಇದೆಯೇ, ಇಲ್ಲವೇ ತ್ರಿಕೋನ ಸ್ಪರ್ಧೆಯೋ ಎಂಬ ಬಗ್ಗೆ ಪೂರ್ಣ ಮಾಹಿತಿ ಪಡೆದರು.

ನೀವು ಶಿಫಾರಸು ಮಾಡಿರುವ ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಆಕಾಂಕ್ಷಿಗಳಿಗೆ ಗೆಲುವಿನ ಸಾಮಥ್ರ್ಯ ಇಲ್ಲದಿದ್ದರೆ ಅನ್ಯ ಪಕ್ಷದವರನ್ನು ಕರೆತಂದು ಕಣಕ್ಕಿಳಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ನೀವು ಮಾಡಿದ ಶಿಫಾರಸ್ಸಿನ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಉಳಿದ ಆಕಾಂಕ್ಷಿಗಳನ್ನು ಮಣಿಸಲು ಏನು ಮಾಡಿದ್ದೀರಿ? ಎಂಬ ಬಗ್ಗೆ ನಾಯಕರು ಕ್ಷೇತ್ರವಾರು ಮಾಹಿತಿ ಪಡೆದರು. ನಂತರ ರಾಜ್ಯ ಉಸ್ತುವಾರಿ ಸುರ್ಜೆವಾಲ, ವರಿಷ್ಠರು, ರಾಜ್ಯ ಘಟಕ, ಮತ್ತು ಸ್ಥಳೀಯ ಹಿರಿಯ ನಾಯಕರು ಪ್ರತ್ಯೇಕವಾಗಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದಾರೆ. ನೀವು ಮಾಡಿರುವ ಶಿಫಾರಸ್ಸು ಹಾಗೂ ಪೂರ್ವ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ರಾಜ್ಯ ಚುನಾವಣಾ ಸಮಿತಿ ಒಂದು ಕ್ಷೇತ್ರಕ್ಕೆ ಒಬ್ಬರು ಅಥವಾ ಇಬ್ಬರ ಹೆಸರನ್ನು ಅಂತಿಮಗೊಳಿಸಿ ವರಿಷ್ಠರಿಗೆ ಶಿಫಾರಸ್ಸು ಮಾಡುವುದಾಗಿ ಸಭೆಗೆ ತಿಳಿಸಿದ್ದಾರೆ. ಆಡಳಿತರೂಢ ಬಿಜೆಪಿ ಇದುವರೆವಿಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಆ ಬಗ್ಗೆ ಪ್ರಸ್ತಾಪ ಎತ್ತುತ್ತಿಲ್ಲ. ಜೆಡಿಎಸ್ 93 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಅದರಲ್ಲಿ ಸಕ್ರಿಯವಾಗಿರದ ಕೆಲವು ಅಭ್ಯರ್ಥಿಗಳ ಬದಲಾವಣೆಯಾಗಲಿದೆ ಎಂಬ ಮಾಹಿತಿ ಇದೆ. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ನಂತರ ಸೂಕ್ತ ಸಮಯ ನೋಡಿಕೊಂಡು ನಾವು ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸುವುದಾಗಿ ತಿಳಿಸಿದರು. ಸಭೆಯ ಮಧ್ಯೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು. ಹಾಲಿ ಪಕ್ಷದ ಶಾಸಕರಿಗೆಲ್ಲ ಮತ್ತೆ ಟಿಕೆಟ್ ಸಿಗಲಿದೆ ಎಂಬ ಸುಳಿವು ನೀಡಿದರು.

Translate »