ಮೈಸೂರು,ಸೆ.8-ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿ ನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮ ತೇಜಸ್ವಿ ಅವರ ಚಿಂತನಾ ಲೋಕ ತೆರೆದಿಟ್ಟಿತು.
ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರ ಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲಿ ಕೆ. ರಾಮದಾಸ್ ಅವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ. ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ ನಡುವೆ ಆತ್ಮೀಯತೆ ಬೆಳೆಯಿತು.
ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್‍ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ. ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ. ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿ ಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿ ಯಲು ಹೋಗಿದ್ದೆ ಎಂದು ಹೆಮ್ಮೆಯಿಂದಲೇ ನುಡಿದರು.
ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವ ರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ.
ನನಗೆ ಪೆÇ್ರ್ರ.ನಂಜುಂಡಸ್ವಾಮಿ ಅವರ ಪರಿಚಯ ವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರ ಣಕ್ಕೂ ಬರುತ್ತಾ ಇರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು.
ತೇಜಸ್ವಿಯವರು ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ ಅದರಿಂದ ಲಾಭ ಪಡೆ ಯುವ ಪ್ರಯತ್ನ ಮಾಡಲೇ ಇಲ್ಲ. ಪ್ರಕೃತಿ, ಪರಿಸರದ ಬಗ್ಗೆ ಹಲವು ಲೇಖನ ಬರೆದಿದ್ದಾರೆ. ಪರಿಸರ ಪ್ರೇಮಿ ಗಳಿಗೆ ಇಂದಿಗೂ ತೇಜಸ್ವಿಯವರು ಸ್ಫೂರ್ತಿಯಾಗಿ ದ್ದಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ರಾಜಕಾರಣದ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನ ವಿತ್ತು. ಇಂಥವರ ಸಂಪರ್ಕದಿಂದ ನಾನು ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಹಾಯವಾಯಿತು.
ತೇಜಸ್ವಿಯವರಿಂದ ನಾನು ಹಲವು ವಿಚಾರ ಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪು ಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿ ಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ.
ಪ್ರತೀ ಸೋಮವಾರ ಸಂಜೆ 5ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೋಟೆಲ್ ಒಂದರಲ್ಲಿ ಸೇರು ತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರ ಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಎಂದು ಸಿದ್ದ ರಾಮಯ್ಯ ನೆನಪು ಮಾಡಿಕೊಂಡರು.
ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಕುರಿಂಜಿ ಎಂಬ ವಿಶಿಷ್ಟ ಪ್ರಭೇದದ ಹೂವುಗಳ ರಕ್ಷಣೆ ಇಂದು ಅಗತ್ಯವಾಗಿ ಆಗಬೇಕಿದೆ. ಬೆಂಕಿಯ ಜ್ವಾಲೆಗಿಂತ ಮನುಷ್ಯ ಪರಿಸರಕ್ಕೆ ಮಾರಕ. ಮನುಷ್ಯರಿಂದ ಇವುಗಳ ರಕ್ಷಣೆ ಆಗಬೇಕು.
ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ, ಆದರೆ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳ ಬೇಕು. ಪರಿಸರ ರಕ್ಷಣೆಗೆ ತೇಜಸ್ವಿಯವರ ಬದುಕು, ಬರಹ, ಜೀವನ ನಮಗೆ ಪ್ರೇರಣೆ.
ತೇಜಸ್ವಿಯವರ ಜನ್ಮದಿನ ಕಾರ್ಯಕ್ರಮದ ಆಮಂ ತ್ರಣ ಪತ್ರಿಕೆ ಮುದ್ರಣವಾದ ನಂತರ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂಬ ವಿಚಾರ ನನಗೆ ಗೊತ್ತಾಯಿತು ಎಂದರಲ್ಲದೆ, ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳುವ ಇಂಥದ್ದೊಂದು ಸುವ ರ್ಣಾವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಬಿ.ಎಲ್.ಶಂಕರ್ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದರು.