ತಂಬಾಕು ಹರಾಜು ಪ್ಲಾಟ್‍ಫಾರಂ ದೂರದೂರಿಗೆ ಸ್ಥಳಾಂತರ
ಮೈಸೂರು

ತಂಬಾಕು ಹರಾಜು ಪ್ಲಾಟ್‍ಫಾರಂ ದೂರದೂರಿಗೆ ಸ್ಥಳಾಂತರ

September 9, 2021

ಮೈಸೂರು, ಸೆ.8(ಆರ್‍ಕೆಬಿ)- ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿ ಹಾಡ್ಯ, ಬೆಣಗನಹಳ್ಳಿ ಮತ್ತು ನಾಡಪ್ಪನಹಳ್ಳಿ ಕ್ಲಸ್ಟರ್‍ಗಳನ್ನು ಒಳಗೊಂಡ ಚಿಲ್ಕುಂದ ತಂಬಾಕು ಬೆಳೆಗಾರರು ಚಿಲ್ಕುಂದ-62 ಹರಾಜು ಪ್ಲಾಟ್‍ಫಾರಂನಲ್ಲಿ ಮಾರಾಟ ಮಾಡುತ್ತಿದ್ದು, ಏಕಾಏಕಿ ನಮ್ಮನ್ನು 40 ಕಿ.ಮೀ ದೂರದ ರಾಮನಾಥಪುರ ಹಾಗೂ 35 ಕಿ.ಮೀ. ದೂರದ ಕಟ್ಟೆಮಳಲವಾಡಿಗೆ ವರ್ಗಾ ಯಿಸಿರುವುದರಿಂದ ತಂಬಾಕು ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಈ ಮೂರೂ ಕ್ಲಸ್ಟರ್‍ಗಳ ರೈತರು ದೂರಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ತಂಬಾಕು ಬೆಳೆಗಾರ ಮುಖಂ ಡರು, ಈ ಕ್ಲಸ್ಟರ್‍ನಲ್ಲಿ ಸುಮಾರು 4 ಸಾವಿರ ತಂಬಾಕು ಬೆಳೆಗಾರರಿದ್ದು, ಸುಮಾರು 4 ಮಿಲಿಯನ್ ಕೆಜಿ ತಂಬಾಕು ಬೆಳೆಯುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಸುತ್ತಾಡಲು ಆಗುವುದಿಲ್ಲವೆಂದು ತಂಬಾಕು ಮಂಡಳಿ ಅಧಿಕಾರಿಗಳು ಮಾರಾಟವನ್ನು 40 ಕಿಮೀ ದೂರದ ರಾಮನಾಥಪುರ ಹಾಗೂ 35 ಕಿಮೀ ದೂರದ ಕಟ್ಟೆಮಳಲವಾಡಿಗೆ ವರ್ಗಾಯಿಸಿದ್ದಾರೆ. ಇದರಿಂದಾಗಿ ಸಾಗಾಣಿಕೆ ಇನ್ನಿತರ ವೆಚ್ಚಗಳು ತಂಬಾಕು ಬೆಳೆಗಾರರಿಗೆ ಬೀಳಲಿವೆ. ಹೀಗಾಗಿ ಚಿಲ್ಕುಂದ 62 ಹರಾಜು ಮಾರುಕಟ್ಟೆಯಲ್ಲೇ ಮಾರಾಟಕ್ಕೆ ಅವಕಾಶ ನೀಡ ಬೇಕೆಂದು ಸ್ಥಳೀಯ ಸಂಸದರು, ಜನಪ್ರತಿನಿಧಿಗಳು ಹಾಗೂ ತಂಬಾಕು ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋ ಪಿಸಿದರು. ಹೀಗಾಗಿ ಸ್ಥಳಾಂತರ ರದ್ದುಗೊಳಿಸದಿದ್ದರೆ ಇದೇ ಸೆ.24ರಿಂದ ಮಾರುಕಟ್ಟೆ ಆರಂಭವಾಗುವ ವೇಳೆ ಸುಮಾರು ಒಂದೂವರೆ ಸಾವಿರ ತಂಬಾಕು ಬೆಳೆಗಾರರು ಪ್ರತಿಭಟನೆ ನಡೆಸ ಬೇಕಾಗುತ್ತದೆಂದು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂಬಾಕು ಬೆಳೆಗಾರರಾದ ಬಂಡಳ್ಳಿ ಕುಚೇಲ, ಪ್ರಸನ್ನ, ಶ್ರೀಶೈಲ, ಶಂಕರ್, ಮಂಜುನಾಥ್ ಸೋಮನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.

Translate »