ಬಟ್ಟೆ ಬ್ಯಾಗ್ ಖರೀದಿಗೆ ಸ್ವಚ್ಛತಾ  ಕಾರ್ಯದ ಹಣ ನೀಡುವ ಆದೇಶ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಕೆ.ಆರ್.ನಗರ ಪುರಸಭೆ ಸದಸ್ಯರ ಆಗ್ರಹ
ಮೈಸೂರು

ಬಟ್ಟೆ ಬ್ಯಾಗ್ ಖರೀದಿಗೆ ಸ್ವಚ್ಛತಾ ಕಾರ್ಯದ ಹಣ ನೀಡುವ ಆದೇಶ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಕೆ.ಆರ್.ನಗರ ಪುರಸಭೆ ಸದಸ್ಯರ ಆಗ್ರಹ

September 9, 2021

ಮೈಸೂರು, ಸೆ.8(ಆರ್‍ಕೆಬಿ)- ಕೆ.ಆರ್.ನಗರ ಪುರಸಭೆಯಲ್ಲಿ ಸ್ವಚ್ಛತೆ ಕಾಯ್ದು ಕೊಂಡಿದ್ದಕ್ಕಾಗಿ ಕೇಂದ್ರ ಸರ್ಕಾರದಿಂದ ಪುರಸ್ಕಾರವಾಗಿ ಬಂದಿದ್ದ 10 ಲಕ್ಷ ರೂ.ಗಳನ್ನು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಟ್ಟೆ ಬ್ಯಾಗ್ ಖರೀದಿಗಾಗಿ ವಾಪಸು ನೀಡುವಂತೆ ಅಕ್ರಮವಾಗಿ ಆದೇಶ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಕೆ.ಆರ್. ನಗರ ಪುರಸಭೆ ಸದಸ್ಯರು ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಕೆ.ಎಲ್.ಜಗದೀಶ್, ಬಟ್ಟೆ ಬ್ಯಾಗ್ ಬೆಲೆ ಸುಮಾರು 9 ರೂ.ಗಳಾದರೆ, ಅದಕ್ಕೆ ಹಿಂದಿನ ಡಿಸಿ 58 ರೂ. ನೀಡಿ ಖರೀದಿಸಿದ್ದಾರೆ. ಪುರಸಭೆಯು ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ 10 ಲಕ್ಷ ರೂ. ಪುರಸ್ಕಾರ ನೀಡಿತ್ತು.

ಅದನ್ನು ಸ್ವಚ್ಛತಾ ಕಾರ್ಯದ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ, ಗೋಡೆ ಬರಹ ಮೊದಲಾದವುಗಳಿಗೆ ಮಾತ್ರ ಖರ್ಚು ಮಾಡಬೇಕಿತ್ತು. ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಯಾರೂ ಹಸ್ತಕ್ಷೇಪ ಮಾಡ ಬಾರದೆಂಬ ಕೇಂದ್ರ ಸರ್ಕಾರದ ಆದೇಶವೂ ಇದೆ. ಹೀಗಿದ್ದರೂ ಇದನ್ನು ಮೀರಿ ಆ 10 ಲಕ್ಷ ರೂ.ಗಳನ್ನು ಜಿಲ್ಲಾಡಳಿತಕ್ಕೆ ವರ್ಗಾಯಿಸುವಂತೆ ಹಿಂದಿನ ಡಿಸಿ ಆದೇ ಶಿಸಿದ್ದಾರೆ. ಈಗಿನ ಜಿಲ್ಲಾಧಿಕಾರಿ ಸಹ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

ಮತ್ತೊಬ್ಬ ಸದಸ್ಯ ಉಮೇಶ್ ಮಾತನಾಡಿ, ಪುರಸಭೆಗೆ ಬಂದಿದ್ದ 10 ಲಕ್ಷ ರೂ. ವೆಚ್ಚಕ್ಕೆ ಸಂಬಂಧಿಸಿದಂತೆ ಸಭೆ ಕೈಗೊಂಡಿದ್ದ ನಿರ್ಣಯವನ್ನು ಹಿಂದಿನ ಡಿಸಿ ನಿರ್ಲ ಕ್ಷಿಸಿ, ಬಟ್ಟೆ ಬ್ಯಾಗ್ ಖರೀದಿಗಾಗಿ ಹಣ ನೀಡುವಂತೆ ಆದೇಶಿಸಿದ್ದರು. ಹೀಗಾಗಿ ಅವರನ್ನು ಕೂಡಲೇ ಅಮಾನತುಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಇನ್ನಿತರೆ ಸದಸ್ಯರಾದ ಸಂತೋಷ್, ತೋಂಟ ದಾರ್ಯ, ಸರೋಜ ಮಾದಯ್ಯ, ಮಂಜುಳ ಚಿಕ್ಕಬೀರು, ಕೆ.ಪಿ.ಪ್ರಭುಶಂಕರ್ ಇದ್ದರು.

Translate »