ಸಿದ್ದರಾಮಯ್ಯ ತವರಲ್ಲೇ ಮೊಳಗಿತು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ
ಮೈಸೂರು

ಸಿದ್ದರಾಮಯ್ಯ ತವರಲ್ಲೇ ಮೊಳಗಿತು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ

July 16, 2022

ಮೈಸೂರು, ಜು.15(ಎಂಟಿವೈ)- ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರಿನಲ್ಲೇ `ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಘೋಷಣೆ ಮೊಳಗಿದೆ. ಮೂರನೇ ಆಷಾಢ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು `ಮುಂದಿನ ಮುಖ್ಯಮಂತ್ರಿ’ ಘೋಷಣೆ ಕೂಗಿದರಾದರೂ ಡಿಕೆಶಿ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ದೇವಸ್ಥಾನ ಪ್ರವೇಶಿಸಿದರು.

ಬೆಂಗಳೂರಿನಿಂದ ಪತ್ನಿ ಉಷಾ ಅವರೊಂದಿಗೆ ಇಂದು ಬೆಳಗ್ಗೆ ಮೈಸೂರಿಗೆ ಆಗಮಿ ಸಿದ ಡಿ.ಕೆ.ಶಿವಕುಮಾರ್, ಲಲಿತ ಮಹಲ್ ಪ್ಯಾಲೇಸ್ ಹೆಲಿಪ್ಯಾಡ್ ಬಳಿಯಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಉಚಿತ ಬಸ್‍ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಶ್ರೀನಾಥ್ ಬಾಬು, ಜಿ.ರಾಘವೇಂದ್ರ ಸೇರಿದಂತೆ ಇನ್ನಿತರರೊಂದಿಗೆ ಸಾಮಾನ್ಯ ಭಕ್ತರಂತೆ ಬೆಟ್ಟಕ್ಕೆ ಪ್ರಯಾಣ ಬೆಳೆಸಿದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ್ದರಿಂದ ಡಿಕೆಶಿ ಪತ್ನಿ ಉಷಾ ಖಾಸಗಿ ಕಾರಿನಲ್ಲಿ ಬೆಟ್ಟಕ್ಕೆ ತೆರಳಿದರು. ಬೆಟ್ಟದಲ್ಲಿ ಬಸ್ ಇಳಿದ ನಂತರ ಕಾಲ್ನಡಿಗೆಯಲ್ಲೇ ಡಿ.ಕೆ.ಶಿವಕುಮಾರ್, ದೇವಸ್ಥಾನದತ್ತ ತೆರಳುತ್ತಿದ್ದಾಗ ಅವರ ಬೆಂಬಲಿಗರು ಜಯಘೋಷ ಮೊಳಗಿಸಿದರು. ದೇವಸ್ಥಾನ ಪ್ರವೇಶಿಸುವ ಮುನ್ನ ಬ್ಯಾರಿಕೇಡ್ ಬಳಿ ನಿಂತು ತಮ್ಮ ಬೆಂಬಲಿಗರತ್ತ ಡಿಕೆಶಿ ಕೈಬೀಸಿದರು. ಕೆಲವರು ಡಿಕೆಶಿ ಕೈಕುಲುಕಿದರು. ದೇವಸ್ಥಾನದ ಮುಂಭಾಗ ಈಡುಗಾಯಿ ಒಡೆದ ನಂತರ ಡಿಕೆಶಿ ದೇವಿ ದರ್ಶನ ಪಡೆದರು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಒಳಿತಾಗ ಲೆಂದು ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಿದ್ದೇನೆ. ನಾಡಿಗೆ ಎದುರಾಗಿರುವ ಸಂಕಷ್ಟವನ್ನೆಲ್ಲಾ ನಿವಾರಣೆ ಮಾಡೆಂದು ದೇವಿಯಲ್ಲಿ ಕೋರಿದ್ದೇನೆ. ಎಲ್ಲ ಭಕ್ತರು ಹಾಗೂ ಅವರ ಕುಟುಂಬಕ್ಕೆ ದೇವಿ ಆಶೀರ್ವಾದ ಪ್ರಾಪ್ತಿಯಾಗಲಿ ಎಂದು ಬೇಡುತ್ತೇನೆ ಎಂದರು.

ಬಾಗಲಕೋಟೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟ ನೆರವಿನ ಹಣವನ್ನು ಮಹಿಳೆ ಬಿಸಾಕಿ, ನಮಗೆ ಹಣ ಬೇಡ, ಶಾಂತಿ ಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳಬೇಕು. ಶಾಂತಿ ಕದಡುತ್ತಿರುವವರಿಗೆ ಈ ಪ್ರಶ್ನೆ ಕೇಳಬೇಕು. ಸರ್ಕಾರ ಹಾಗೂ ರಾಜ್ಯದ ನಾಯಕತ್ವ ವಹಿಸಿಕೊಂಡಿರುವವರು ಈ ಬಗ್ಗೆ ಮೊದಲು ಗಮನ ಹರಿಸಬೇಕು. ರಾಜ್ಯದ ಅಲ್ಪಸಂಖ್ಯಾತ ವರ್ಗದ ಜನ ನೊಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಸಹಾಯ ಮಾಡಲು ಹೋದಾಗ ನೊಂದವರ ಭಾವನೆ ವ್ಯಕ್ತವಾಗಿದ್ದು, ಇದನ್ನು ಸರ್ಕಾರ ಗಮನಿಸಿ, ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು..

ರಾಷ್ಟ್ರ ಲಾಂಛನ ಕಾಪಾಡಬೇಕು: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವ ಲಾಂಛನ ಇತ್ತೊ ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಲಾಂಛÀನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು. ಅಲ್ಲದೇ, ದೇಶದಲ್ಲೂ ಶಾಂತಿ ನೆಲೆಸಿರಬೇಕು. ಎಲ್ಲಿಯೂ ಘರ್ಜನೆ ಇರಬಾರದು ಎಂದು ಅಭಿಪ್ರಾಯಪಟ್ಟರು.

ಕೇರಳದಿಂದ ಕರ್ನಾಟಕಕ್ಕೆ ಪಾದಯಾತ್ರೆ: 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ‘ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕೇರಳದಿಂದ ಚಾಮರಾಜನಗರ ಜಿಲ್ಲೆಯ ಮಾರ್ಗವಾಗಿ ಕರ್ನಾಟಕದಲ್ಲಿ ಸುಮಾರು 350ಕ್ಕೂ ಹೆಚ್ಚು ಕಿ.ಮೀ ಉದ್ದದ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಆ.1 ರಿಂದ 10ರವರೆಗೂ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ನಡೆಸಲಾಗುತ್ತದೆ. ನಂತರ ಆ.15 ರಂದು 1 ಲಕ್ಷಕ್ಕೂ ಹೆಚ್ಚು ಜನ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟು ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಿದ್ದು ಕಾಂಗ್ರೆಸ್ ಹೊರತು ಬೇರೆ ಪಕ್ಷವಲ್ಲ ಎಂದರು.

ಕೇವಲ ಹುಟ್ಟುಹಬ್ಬದ ಕಾರ್ಯಕ್ರಮವಲ್ಲ: ಸಿದ್ದರಾಮೋತ್ಸವ ಕಾರ್ಯಕ್ರಮ ಕೇವಲ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಯ ಬಗ್ಗೆ ಅವಲೋಕಿಸುವ ಕಾರ್ಯಕ್ರಮ ಅದಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನುಡಿದಂತೆ ನಡೆದು ಆಡಳಿತ ನಡೆಸಿರುವ ಬಗ್ಗೆ, ನಮ್ಮ ಸರ್ಕಾರದ ಅವಧಿಯಲ್ಲಿನ ಎಲ್ಲ ಇಲಾಖೆಗಳಲ್ಲಿನ ಸಾಧನೆ ತಿಳಿಸಲಾಗುವುದು. ಜಾರಿಗೆ ತಂದ ಜನಪ್ರಿಯ ಯೋಜನೆಗಳಾದ ಕ್ಷೀರಭಾಗ್ಯ, ಅನ್ನಭಾಗ್ಯ, ರಸ್ತೆ ಅಭಿವೃದ್ಧಿ, ರೈತರಿಗೆ ನೀಡಲಾದ ನೆರವು, ಕೃಷಿ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹ ಸೇರಿದಂತೆ ಇನ್ನಿತರ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು.

Translate »