ಮೈಷುಗರ್ ಖಾಸಗೀಕರಣ ಸಲ್ಲ: ಸಿಎಂಗೆ ಸಿದ್ದರಾಮಯ್ಯ ಪತ್ರ
ಮೈಸೂರು

ಮೈಷುಗರ್ ಖಾಸಗೀಕರಣ ಸಲ್ಲ: ಸಿಎಂಗೆ ಸಿದ್ದರಾಮಯ್ಯ ಪತ್ರ

June 7, 2020

ಮೈಸೂರು,ಜೂ.6(ಎಸ್‍ಪಿಎನ್)- ಮಂಡ್ಯದ `ಮೈಷುಗರ್’ ಸಕ್ಕರೆ ಕಾರ್ಖಾನೆ ಯನ್ನು ಖಾಸಗೀಕರಣಗೊಳಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಪತ್ರ ಬರೆದು ಒತ್ತಾಯಿಸಿದ್ದಾರೆ. ಮೈಷÀುಗರ್ ಕಾರ್ಖಾನೆ ಯಲ್ಲಿ 14,046 ರೈತರು ಷೇರುದಾರರಿದ್ದಾರೆ. ಪ್ರತಿನಿತ್ಯ ಅಂದಾಜು 5 ಸಾವಿರ ಟನ್ ಕಬ್ಬು ಅರೆಯುವ ಸಾಮಥ್ರ್ಯ ಹೊಂದಿದೆ. ಹೀಗಾಗಿ ಮಂಡ್ಯ ಜಿಲ್ಲೆಯೊಂದರಲ್ಲೇ 83,831 ಎಕರೆ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‍ಗಳಿಗೂ ಹೆಚ್ಚು ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೈಷುಗರ್ ಕಾರ್ಖಾನೆಯು ಕೋ-ಜನರೇಷನ್, ಡಿಸ್ಟಿಲರಿ, ಗ್ಲೂಕೋಸ್, ಚಾಕ್ಲೇಟ್ ಮತ್ತು ಎಥೆನಾಲ್‍ನಂತಹ ಉಪ ಉತ್ಪನ್ನಗಳನ್ನು ನಿರಂತರ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಅಲ್ಲದೇ, ಮೈಷುಗರ್ ಕಂಪನಿ ಷೇರುದಾರರಿಗೆ 18 ವರ್ಷಕ್ಕೂ ಹೆಚ್ಚು ಕಾಲ ಶೇ.20ರಿಂದ 30 ಷೇರು ಡಿವಿಡೆಂಡ್(ಲಾಭಾಂಶ) ನೀಡಿದ ಉದಾಹರಣೆಯೂ ಇದೆ. 14ಕ್ಕೂ ಹೆಚ್ಚು ವಿವಿಧ ವಿದ್ಯಾಸಂಸ್ಥೆ ಮತ್ತು ರೈತ ಸಮುದಾಯ ಭವನಗಳನ್ನು ಕಾರ್ಖಾನೆ ಹೊಂದಿದೆ. ಈ ಕಂಪನಿಯ 207 ಎಕರೆ ಜಮೀನನ್ನೂ ಹೊಂದಿದೆ ಎಂದು ಪತ್ರದಲ್ಲಿ ಉಲ್ಲೇ ಖಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಮೈಷುಗರ್ ಕಾರ್ಖಾನೆಯ ಸುದೀರ್ಘ ಇತಿಹಾಸ ವಿದ್ದರೂ ರಾಜ್ಯ ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿ ರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ 2013 ಹಾಗೂ 2018-19 ಸಾಲಿನವರೆಗೆ 229.65 ಕೋಟಿ ನೀಡಿ, ಈ ಕಂಪನಿಗಳನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗಿತ್ತು. ಹಾಗಾಗಿ ಸಾವಿರಾರು ಕೋಟಿ ಬೆಲೆಬಾಳುವ ಕಂಪನಿಯನ್ನು ಖಾಸಗೀಕರಣಗೊಳಿಸದೇ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Translate »