‘ಮನ್ ಕೀ ಬಾತ್’ನಲ್ಲಿ ಸಿದ್ಧಗಂಗಾ ಶ್ರೀಗಳ ಸ್ಮರಣೆ
ಮೈಸೂರು

‘ಮನ್ ಕೀ ಬಾತ್’ನಲ್ಲಿ ಸಿದ್ಧಗಂಗಾ ಶ್ರೀಗಳ ಸ್ಮರಣೆ

January 28, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ (2019) ತಮ್ಮ ಮೊದಲನೇ ‘ಮನ್ ಕೀ ಬಾತ್’ನಲ್ಲಿ ಇತ್ತೀಚೆಗೆ ಶಿವೈಕ್ಯ ರಾದ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸಿದರು.

ತಮ್ಮ ಭಾಷಣದ ಮೊದಲ 5 ನಿಮಿಷಗಳನ್ನು ಮೋದಿ ಯವರು ಸಿದ್ಧಗಂಗಾ ಶ್ರೀಗಳ ಕೊಡುಗೆಗಳನ್ನು ವಿವರಿಸಲು ಮೀಸಲಿಟ್ಟರು. ಶ್ರೀಗಳಿಂದ ತಾವು ಆಶೀರ್ವಾದ ಪಡೆದದ್ದನ್ನೂ ಸ್ಮರಿಸಿಕೊಂಡರು.

ಜನವರಿ 21ರಂದು ನಾವು ಕೆಟ್ಟ ಸುದ್ದಿಯೊಂದನ್ನು ಕೇಳಿದೆವು. ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ 111 ವರ್ಷದ ಸಿದ್ಧಗಂಗಾ ಶ್ರೀಗಳು ಅಂದು ಶಿವೈಕ್ಯರಾಗಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ತ್ರಿವಿಧ ದಾಸೋಹಿಗಳಾಗಿ ಸಾವಿರಾರು ಮಂದಿಗೆ ಶಿಕ್ಷಣ, ಊಟ, ವಸತಿ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಪ್ರಧಾನಿ ಹೇಳಿದರು.

ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀಗಳು, ಲಕ್ಷಾಂತರ ಜನರಿಗೆ ಶಿಕ್ಷಣ, ಊಟ, ವಸತಿ ನೀಡಿದ್ದರು. ಕರ್ನಾಟಕದ ಸಿದ್ಧಗಂಗಾ ಶ್ರೀಗಳು, ಬಸವಣ್ಣನವರು ಹೇಳಿದ್ದ ‘ಕಾಯಕವೇ ಕೈಲಾಸ’ ಎಂಬುದನ್ನು ನಂಬಿದ್ದರು ಹಾಗೂ ಅದನ್ನೇ ಆಚರಿಸಿಕೊಂಡು ಬಂದಿದ್ದರು ಎಂದು ಮೋದಿಯವರು ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸಿದರು.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಗಳಲ್ಲಿ ಚುನಾವಣಾ ಆಯೋಗ ವ್ಯವಸ್ಥಿತವಾಗಿ ಚುನಾವಣೆ ನಡೆಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರು ಹುಟ್ಟುಹಬ್ಬದ ಅಂಗವಾಗಿ ಜನವರಿ 23ರಂದು ಅವರ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆ ಮಾಡಿದ್ದು ತಮಗೆ ಸಂತೋಷ ತಂದಿದೆ ಎಂದು ಇದೇ ವೇಳೆ ಮೋದಿ ಹೇಳಿದರು.

Translate »