ದೆಹಲಿಯ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಪಾಲ್ಗೊಂಡು  ಬೀಗಿದ ಮೈಸೂರಿನ ವಿದ್ಯಾರ್ಥಿಗಳು
ಮೈಸೂರು

ದೆಹಲಿಯ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಪಾಲ್ಗೊಂಡು ಬೀಗಿದ ಮೈಸೂರಿನ ವಿದ್ಯಾರ್ಥಿಗಳು

January 28, 2019

ಮೈಸೂರು: ಗಣರಾಜ್ಯೋತ್ಸವದ ದಿನದಂದು ದೆಹಲಿಯ ರಾಜಪತ್‍ನಲ್ಲಿ ನಡೆದ ಭವ್ಯ ಪೆರೇಡ್‍ನಲ್ಲಿ ಎನ್‍ಸಿಸಿಯ ಮೂರು ವಿಭಾಗಗಳಿಂದ ನಾಲ್ವರು ವಿದ್ಯಾರ್ಥಿನಿಯರು ಒಳಗೊಂಡಂತೆ ಮೈಸೂರಿನ 12 ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಎನ್‍ಸಿಸಿ ಭೂದಳ, ವಾಯುದಳ, ನೌಕದಳದ ಕೆಡೆಟ್‍ಗಳು ದೆಹಲಿಯಲ್ಲಿ ನಡೆಯುವ ಆರ್‍ಡಿ ಪೆರೇಡ್‍ನಲ್ಲಿ ಭಾಗವಹಿಸುವ ಕನಸು ಕಾಣುವುದು ಸಹಜ. ಸತತ ಪರಿಶ್ರಮ, ಕವಾಯತ್‍ನಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಮಾತ್ರ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ದೇಶದ ಎಲ್ಲಾ ರಾಜ್ಯಗಳ ಎನ್‍ಸಿಸಿ ಕೆಡೆಟ್‍ಗಳು ಹಾತೊರೆಯುವ ಈ ಪೆರೇಡ್‍ನಲ್ಲಿ ಪಾಲ್ಗೊ ಳ್ಳುವ ಅವಕಾಶ ಮೈಸೂರಿನ 12 ವಿದ್ಯಾರ್ಥಿಗಳಿಗೆ ಲಭಿಸಿದ್ದು, ಅದರಲ್ಲಿ ದಿನಗೂಲಿ ನೌಕರನೊಬ್ಬನ ಮಗ ಹಾಗೂ ಸಣ್ಣ ಕ್ಯಾಂಟೀನ್ ನಡೆಸುವರ ಮಗಳು, ರೈತರೊಬ್ಬರ ಮಗ ಸ್ಥಾನ ಗಿಟ್ಟಿಸಿಕೊಂಡು ಯಶಸ್ವಿಯಾಗಿ ಪೆರೇಡ್‍ನಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಹಾರಾಜ ಕಾಲೇಜಿನ ವಿದ್ಯಾರ್ಥಿ: ಮೈಸೂರು ಮಹಾರಾಜ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಎಂ.ಮಂಜು ಪೆರೇಡ್‍ನಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದ್ದಾರೆ. ಮೈಸೂರು ತಾಲೂಕು ಬೀರಿ ಹುಂಡಿ ಗ್ರಾಮದ ಮರೀಗೌಡ, ಜಯಮ್ಮ ದಂಪತಿ ಮಗನಾಗಿ ರುವ ಮಂಜು ಎನ್‍ಸಿಸಿ ನೌಕಾದಳದ ಕೆಡೆಟ್ ಆಗಿದ್ದಾನೆ. ಈತನ ತಂದೆ ಕೂಲಿ ಕಾರ್ಮಿಕರಾಗಿದ್ದು, ಮಗ ದೆಹಲಿಯಲ್ಲಿ ನಡೆದ ಪೆರೇಡ್ ನಲ್ಲಿ ಪಾಲ್ಗೊಂಡಿದ್ದನ್ನು ಕಂಡು ಸಂಭ್ರಮಿಸಿದ್ದಾರೆ. ಮಗ ದೆಹಲಿ ಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆ ಯಾಗಿದ್ದು ನಮಗೆ ಸಂತೋಷ ತಂದಿದೆ. ಬಡತನವಿದ್ದರೂ ಮಗ ಓದಿನಲ್ಲಿ ಮುಂದೆ ಇದ್ದಾನೆ. ಆತನ ಸಾಧನೆಯನ್ನು ಪ್ರೋತ್ಸಾಹಿ ಸುವುದಾಗಿ ತಿಳಿಸಿದ್ದಾರೆ.

ಪೆರೇಡ್‍ನಲ್ಲಿ ಪಾಲ್ಗೊಂಡ ಬಳಿಕ ವಿದ್ಯಾರ್ಥಿ ಎಂ.ಮಂಜು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಆರ್‍ಡಿ ಪೆರೇಡ್‍ನಲ್ಲಿ ಭಾಗವಹಿಸಬೇಕೆಂಬ ಕನಸು ಕಂಡಿದ್ದೆ. ಇದಕ್ಕಾಗಿ ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡಿದ್ದೆ. ಕಾಲೇಜು ಹಾಗೂ ನಮ್ಮ ಬೆಟಾಲಿಯನ್‍ನಲ್ಲಿಯೂ ನನಗೆ ಪ್ರೋತ್ಸಾಹಿಸಿದರು. ಅತ್ಯದ್ಭುತವಾಗಿ ನಡೆದ ಪೆರೇಡ್‍ನಲ್ಲಿ ಹೆಜ್ಜೆ ಹಾಕಿದ್ದು ಅವೀಸ್ಮರ ಣೀಯ. ರೋಮಾಂಚನಕಾರಿ ಅನುಭವ ನನಗಾಯಿತು. ಅದರಲ್ಲಿಯೂ ರಾಷ್ಟ್ರಪತಿಗಳೊಂ ದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದರು.

ಕ್ಯಾಂಟೀನ್ ಮಾಲೀಕನ ಮಗಳು: ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ, ಆರ್ಮಿ ವಿಭಾಗದ ಎನ್‍ಸಿಸಿ ಕೆಡೆಟ್ ಎಂ.ಆರ್.ಚಂದನ, ಗಣರಾಜ್ಯೋ ತ್ಸವ ಪೆರೇಡ್‍ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈಕೆಯ ತಂದೆ ರಾಜೇಂದ್ರ ನಜರ್‍ಬಾದ್ ರಸ್ತೆಯಲ್ಲಿ(ಕುಪ್ಪಣ್ಣ ಪಾರ್ಕ್ ಸಮೀಪ) ವಾಣಿ ಟಿಫಾನೀಸ್ ನಡೆಸುತ್ತಿದ್ದಾರೆ. ಮಗಳು ಆರ್‍ಡಿ ಪೆರೇಡ್‍ನಲ್ಲಿ ಪಾಲ್ಗೊಂಡಿದ್ದಕ್ಕೆ ಆಕೆಯ ತಂದೆ ರಾಜೇಂದ್ರ ಹಾಗೂ ತಾಯಿ ಪುಷ್ಪಲತಾ ಸಂಭ್ರಮಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಕಠಿಣ ತರಬೇತಿ ಪಡೆದಿದ್ದಳು ಎಂದು ತಿಳಿಸಿದರು. ಈ ಕುರಿತು ಎಂ.ಆರ್.ಚಂದನ ಮಾತನಾಡಿ, ಆರ್‍ಡಿ ಪೆರೇಡ್‍ನಲ್ಲಿ ಭಾಗವಹಿಸಬೇಕೆಂಬ ಕನಸು ಕಂಡಿದ್ದೆ. ಅದು ನನಸಾಗಿದೆ. ನನ್ನ ಖುಷಿಗೆ ಪಾರವೇ ಇಲ್ಲ. ಅದೊಂದು ಅವಿಸ್ಮರಣೀಯ ದಿನ ಎಂದು ತಿಳಿಸಿದರು.

ಆಲ್ ಇಂಡಿಯಾ ಬೆಸ್ಟ್ ಕೆಡೆಟ್ ಕಂಚಿನ ಪದಕ: ಯುವರಾಜ ಕಾಲೇಜಿನ ಎಂಎಸ್ಸಿ ವಿದ್ಯಾರ್ಥಿನಿ ಜೆ.ಪಿ. ಐಶ್ವರ್ಯ, ನೌಕಾದಳ ವಿಭಾಗದ ಕೆಡೆಟ್ ಆಗಿ ಪೆರೇಡ್ ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದರಿಂದ ಆಲ್ ಇಂಡಿಯಾ ಬೆಸ್ಟ್ ಕೆಡೆಟ್ ಕಂಚಿನ ಪದಕಕ್ಕೂ ಪಾತ್ರವಾಗಿ ಗಮನ ಸೆಳೆದಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಕ್ಕೂ ಆಯ್ಕೆಯಾಗಿದ್ದು, ಈಕೆ ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ಎನ್‍ಸಿಸಿ ಶಿಕ್ಷಣ ಕುರಿತು ಮಾಹಿತಿ ನೀಡಲಿದ್ದಾರೆ.

ರೈತರ ಮಕ್ಕಳು: ಮಹಾರಾಜ ಕಾಲೇಜಿನ ಬಿಎ ವಿದ್ಯಾರ್ಥಿ ಕೆ.ಆರ್.ನಗರ ಮೂಲದ ಅರವಿಂದ್ ಆರ್ಮಿ ವಿಭಾಗದಿಂದ ಹಾಗೂ ಯುವರಾಜ ಕಾಲೇಜಿನ ವಿದ್ಯಾರ್ಥಿ ಎಸ್. ಪ್ರದೀಪ್ ನೌಕಾದಳ ವಿಭಾಗದಿಂದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ. ಈ ಇಬ್ಬರ ಪೋಷಕರು ಕೃಷಿಕರಾಗಿದ್ದು, ಮಕ್ಕಳ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿನಿ ವಾಯುದಳದ ಕೆಡೆಟ್ ಸಹನಾ, ಎನ್‍ಸಿಸಿ ಕೆಡೆಟ್ ಲಾವಣ್ಯ ಸೇರಿದಂತೆ ಇನ್ನಿತರರು ಪೆರೇಡ್‍ನಲ್ಲಿ ಪಾಲ್ಗೊಂ ಡಿದ್ದಾರೆ. ಇನ್ನೆರಡು ದಿನ ದೆಹಲಿಯಲ್ಲಿಯೇ ಇರುವ ಈ ವಿದ್ಯಾರ್ಥಿಗಳು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಫೆ.2ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಉಪಹಾರ ಅಥವಾ ಭೋಜನ ಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

– ಎಂ.ಟಿ.ಯೋಗೇಶ್‍ಕುಮಾರ್

Translate »