ಮಂಡ್ಯ: ವಿಶ್ವ ವಿಖ್ಯಾತ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಯಿಂದ ಅಣೆಕಟ್ಟೆಗೆ ಧಕ್ಕೆಯಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸಿ ದರೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ತಾಂತ್ರಿಕ ವರದಿ ನೀಡುವ ಸಲುವಾಗಿ ಪುಣೆಯ ಸಿಡಬ್ಲ್ಯೂಪಿಆರ್‍ಎಸ್ ವಿಜ್ಞಾನಿಗಳ ತಂಡ ನಾಳೆ (ಜ.28) ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ (ಪರೀಕ್ಷಾರ್ಥ ಸ್ಫೋಟ) ನಡೆಸಲಿದೆ.
ಆದರೆ ಈ ಟ್ರಯಲ್ ಬ್ಲಾಸ್ಟ್‍ಗೆ ರೈತರು ಮತ್ತು ಪ್ರಗತಿಪರರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಘಟನೆಗಳು ನಾಳೆ ‘ಗೋ ಬ್ಯಾಕ್’ ಚಳವಳಿ ಮೂಲಕ ತಜ್ಞರ ತಂಡಕ್ಕೆ ವಿರೋಧ ವ್ಯಕ್ತಪಡಿಸಲಿದೆ.
ವಿವರ: ಕೆಆರ್‌ಎಸ್ ಅಣೆಕಟ್ಟೆ ಸುತ್ತಮುತ್ತ 15ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. 2018ರ ನವೆಂಬರ್ 13ರಂದು ಭೂಮಾಪನ ಕೇಂದ್ರದಲ್ಲಿ ಸ್ಫೋಟಕದ ಶಬ್ಧವು ದಾಖಲಾಗಿದ್ದರಿಂದ ಈ ಪ್ರದೇಶದಲ್ಲಿ ಗಣಿಗಾರಿಕೆ ಮುಂದು ವರೆದರೆ ಆಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ, ತಾಂತ್ರಿಕ ವರದಿ ನೀಡುವಂತೆ ಪುಣೆಯ ಸಿಡಬ್ಲ್ಯೂಪಿಆರ್‍ಎಸ್ ನಿರ್ದೇಶಕರನ್ನು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕೋರಿದ್ದರು. ಅದರಂತೆ 2018ರ ಡಿಸೆಂ ಬರ್ 6ರಿಂದ 18ರವರೆಗೆ ಕೆಆರ್‌ಎಸ್ ಸುತ್ತಮುತ್ತಲಿನ ಗಣಿಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದ್ದ ವಿಜ್ಞಾನಿಗಳ ತಂಡವು ಗಣಿಗಾರಿಕೆಯಿಂದ ಆಗಬಹುದಾದ ಅಡ್ಡ ಪರಿ ಣಾಮಗಳ ಬಗ್ಗೆ ಟ್ರಯಲ್ ಬ್ಲಾಸ್ಟ್ ಮಾಡಿ ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದರ ಪರಿಣಾಮ ಜಿಲ್ಲಾಧಿಕಾರಿಗಳು ಈ ಅಧ್ಯಯನ ತಂಡಕ್ಕೆ 5 ದಿನಗಳ ಕಾಲ ಟ್ರಯಲ್ ಬ್ಲಾಸ್ಟ್ ನಡೆಸಲು ಅನುಮತಿ ನೀಡಿದ್ದರು. ಸಿಡಬ್ಲ್ಯೂಪಿಆರ್‍ಎಸ್ ತಂಡವು ಈಗಾಗಲೇ ಮೈಸೂರಿಗೆ ಆಗಮಿಸಿದೆ ಎಂದು ಹೇಳಲಾಗಿದ್ದು, ನಾಳೆ ಈ ತಂಡವು ಕೆಆರ್‌ಎಸ್‌ಸುತ್ತಮುತ್ತಲಿನ ಗಣಿಗಾರಿಕಾ ಪ್ರದೇಶಗಳಿಗೆ ತೆರಳಿ ಟ್ರಯಲ್ ಬ್ಲಾಸ್ಟ್ ಮಾಡಿ ಅಧ್ಯಯನ ನಡೆಸುತ್ತದೆ ಎಂದು ಹೇಳಲಾಗಿದೆ. ಆದರೆ, ನಾಳೆ ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುತ್ತದೆ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಜಿಲ್ಲಾ ಎಸ್ಪಿಗೆ ನಿಖರ ಮಾಹಿತಿ ಇಲ್ಲ: ಸಿಡಬ್ಲ್ಯೂಪಿಆರ್‍ಎಸ್ ವಿಜ್ಞಾನಿಗಳ ತಂಡವು ಟ್ರಯಲ್ ಬ್ಲಾಸ್ಟ್ ನಡೆಸಲು ಬರುತ್ತದೆ ಎಂಬುದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಮಾಹಿತಿ ತಮಗಿಲ್ಲ ಎಂದು ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದರು. ಈ ತಂಡವು ಯಾವಾಗ ಬರುತ್ತದೆ. ಯಾವ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಅಧ್ಯಯನ ನಡೆಸುತ್ತದೆ ಎಂಬ ವಿವರಗಳು ನನಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ನೀಡಿಲ್ಲ. ಆದರೂ ಆಯಾ ವ್ಯಾಪ್ತಿಯ ಪೊಲೀಸರನ್ನು ಜಾಗೃತಗೊಳಿಸಲಾಗಿದೆ. ಅಧ್ಯಯನ ತಂಡಕ್ಕೆ ಪೊಲೀಸ್ ರಕ್ಷಣೆಯನ್ನು ನೀಡಲಾಗುತ್ತದೆ. ನಾಳೆ ರೈತರು ಮತ್ತು ಪ್ರಗತಿಪರರು ಹಾಗೂ ಹೋರಾಟ ಸಮಿತಿಯವರು ‘ಗೋ ಬ್ಯಾಕ್’ ಚಳವಳಿ ನಡೆಸುವ ಬಗ್ಗೆ ತಮಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ನಮಗೆ ಈ ಬಗ್ಗೆ ಮಾಹಿತಿ ದೊರೆತಿದ್ದು, ಅದರ ಬಗ್ಗೆಯೂ ನಿಗಾ ವಹಿಸಿದ್ದೇವೆ. ನಾಳಿನ ಬೆಳವಣಿಗೆಯನ್ನು ಗಮನಿಸಿ, ಭದ್ರತೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರೈತರು, ಪ್ರಗತಿಪರರಿಂದ ‘ಗೋ ಬ್ಯಾಕ್’ ಚಳವಳಿ
ಮಂಡ್ಯ: ಪುಣೆಯ ಸಿಡಬ್ಲ್ಯೂಪಿಆರ್‍ಎಸ್ ವಿಜ್ಞಾನಿಗಳ ತಂಡ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ರೈತರು, ಪ್ರಗತಿಪರರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿ ಯನ್ನೊಳಗೊಂಡ ‘ಕೆಆರ್‌ಎಸ್ ಉಳಿಸಿ’ ಹೋರಾಟಗಾರರು ‘ಗೋ ಬ್ಯಾಕ್’ ಚಳವಳಿ ನಡೆಸಲು ತೀರ್ಮಾನಿಸಿದ್ದಾರೆ.
ನಾಳಿನ ಚಳವಳಿಯಲ್ಲಿ ಚಿಂತಕ ಪ.ಮಲ್ಲೇಶ್, ಪ್ರೊ. ನಂಜರಾಜ ಅರಸ್, ರೈತ ಮುಖಂಡ ಬಡಗಲಪುರ ನಾಗೇಂದ್ರ, ಪ್ರಗತಿಪರ ರಾದ ದೇವನೂರ ಮಹಾದೇವ, ಜಿ.ಟಿ.ವೀರಪ್ಪ, ಗುರುಪ್ರಸಾದ್ ಕೆರಗೋಡು, ಎಂ.ಬಿ. ನಾಗಣ್ಣಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಭುನ ಹಳ್ಳಿ ಸುರೇಶ್ ಹಾಗೂ ನೂರಾರು ರೈತರು ಭಾಗವಹಿಸಲಿದ್ದಾರೆ.
ಈ ಸಂಬಂಧ ‘ಮೈಸೂರು ಮಿತ್ರ’ ಜೊತೆ ಮಾತನಾಡಿದ ಚಿಂತಕ ಪ.ಮಲ್ಲೇಶ್, ಟ್ರಯಲ್ ಬ್ಲಾಸ್ಟ್ ಮೂಲಕ ತಜ್ಞರ ತಂಡ ಅಧ್ಯಯನ ನಡೆಸಲಿದೆ ಎಂಬ ಮಾಹಿತಿ ನಮಗೆ ಅಧಿಕೃತವಾಗಿ ಗೊತ್ತಾಗಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದ್ದೇವೆ. ಅಧ್ಯಯನಕ್ಕಾಗಿ ಪುಣೆ ಸಿಡಬ್ಲ್ಯೂಪಿಆರ್‍ಎಸ್ ಸಂಸ್ಥೆಗೆ 19.25 ಲಕ್ಷ ರೂ.ಗಳನ್ನು ಈಗಾಗಲೇ ಕಾವೇರಿ ನೀರಾವರಿ ನಿಗಮ ಸಂದಾಯ ಮಾಡಿದೆ ಎಂಬುದು ಕೂಡ ಅಧಿಕಾರಿಗಳ ಮೂಲಕ ಗೊತ್ತಾಗಿದೆ ಎಂದರು.
ಈ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಅಲ್ಲಿನ ಗ್ರಾಮಸ್ಥರು ಹಲವಾರು ವರ್ಷ ಗಳಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಮನೆಗಳು ಶಿಥಿಲವಾಗುತ್ತಿವೆ. ಸ್ಫೋಟಕ ಬಳಸುತ್ತಿರುವುದರಿಂದ ರಾತ್ರಿ ವೇಳೆ ಗ್ರಾಮಸ್ಥರು ನೆಮ್ಮದಿಯಾಗಿ ನಿದ್ರಿಸಲು ಕೂಡ ಆಗುತ್ತಿಲ್ಲ. ಕೃಷಿ ಭೂಮಿಗಳು ಹಾಳಾಗಿವೆ. ಆದ್ದರಿಂದ ಈ ಭಾಗದಲ್ಲಿ ಗಣಿಗಾರಿಕೆ ನಿಷೇಧಿಸಬೇಕು ಎಂಬುದೇ ನಮ್ಮ ಆಗ್ರಹವಾಗಿದೆ. ಸಿಡಬ್ಲ್ಯೂಪಿಆರ್‍ಎಸ್ ವಿಜ್ಞಾನಿಗಳ ಜೊತೆ ಚರ್ಚೆಗಾಗಿ ನಮಗೆ ನಾಳೆ ಬೆಳಿಗ್ಗೆ 10 ಗಂಟೆಗೆ ಸಮಯವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳು ನಿಗದಿಪಡಿಸಿದ್ದಾರೆ. ಆ ಸಂದರ್ಭದಲ್ಲಿ ವಿಜ್ಞಾನಿಗಳ ಜೊತೆ ನಾವು ಚರ್ಚೆ ನಡೆಸ ಲಿದ್ದೇವೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆ ಉಂಟಾಗುತ್ತದೆಯೇ? ಇಲ್ಲವೇ? ಎಂಬುದಕ್ಕಿಂತ ಮುಖ್ಯವಾಗಿ ಗಣಿಗಾರಿಕೆಯಿಂದ ಇಲ್ಲಿನ ಗ್ರಾಮಸ್ಥರು ಅನು ಭವಿಸುತ್ತಿರುವ ನರಕ ಯಾತನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದು ಪ್ರಮುಖ ವಿಚಾರವಾಗಿರುತ್ತದೆ. ನಾವು ತಂತ್ರಜ್ಞರು ಅಲ್ಲದಿರುವುದಿಂದ ಅಧ್ಯಯನ ಹೇಗೆ ನಡೆಯುತ್ತದೆ, ಅದರ ವರದಿ ಏನಾಗಿರಬಹುದು ಎಂಬುದರ ಬಗ್ಗೆ ನಮಗೆ ಅರಿವಿಲ್ಲ. ಆದರೆ, ಗಣಿಗಾರಿಕೆಯಿಂದ ಇಲ್ಲನ ಜನಜೀವನ ಎಷ್ಟರ ಮಟ್ಟಿಗೆ ಅಧೋಗತಿಗಿಳಿಯುತ್ತಿದೆ ಎಂಬುದರ ಬಗ್ಗೆಯಂತೂ ನಮಗೆ ಸ್ಪಷ್ಟ ಅರಿವಿದೆ. ಆ ಕಾರಣದಿಂದಾಗಿ ಯಾವುದೇ ರೀತಿಯ ಅಧ್ಯಯನವನ್ನು ನಡೆಸದೆ ಗಣಿಗಾರಿಕೆಯನ್ನು ನಿಷೇಧಿಸಿ ಎಂಬುದು ನಮ್ಮ ಆಗ್ರಹವಾಗಿದೆ. ಆದ್ದರಿಂದ ಅಧ್ಯಯನ ತಂಡವನ್ನು ಹಿಂದಕ್ಕೆ ಹೋಗಿ ಎಂದು ‘ಗೋ ಬ್ಯಾಕ್’ ಚಳವಳಿಯನ್ನು ಹಮ್ಮಿಕೊಂಡಿದ್ದೇಎ ಎಂದರು.
‘ಕೆಆರ್‌ಎಸ್ ಸುರಕ್ಷತೆ ದೃಷ್ಟಿಯಿಂದ ಸಿಡಬ್ಲ್ಯೂಪಿಆರ್‍ಎಸ್ ತಜ್ಞರ ತಂಡದ ತನಿಖೆ ಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದೇಶದ ನಾಲ್ಕು ತನಿಖಾ ಸಂಸ್ಥೆಗಳಲ್ಲಿ ಒಂದಾದ ಸಿಡಬ್ಲ್ಯೂಪಿಆರ್‍ಎಸ್ ತಜ್ಞರ ತಂಡದ ಅಧ್ಯಯನದಿಂದ ಸತ್ಯಾಂಶ ಹೊರ ಬರಲಿದೆ ಎಂಬ ವಿಶ್ವಾಸ ನಮಗಿದೆ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂಬ ಕೆಲವರ ಆರೋಪದಿಂದಾಗಿ ಸತ್ಯಾಂಶ ಅರಿಯಲು ಈ ಅಧ್ಯಯನವನ್ನು ಕೈಗೊಳ್ಳಲಾಗಿದೆಯೇ ಹೊರತು, ಗಣಿಗಾರಿಕೆಯ ಸಾಧಕ-ಬಾಧಕಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿಲ್ಲ. ನಾಳೆ (ಜ. 28) ಅಧ್ಯಯನ ತಂಡ ಆಗಮಿಸುತ್ತಿದ್ದು, ಅಧ್ಯಯನಕ್ಕೆ ತಗಲುವ 19.25 ಲಕ್ಷ ರೂ.ಗಳನ್ನು ಕಾವೇರಿ ನೀರಾವರಿ ನಿಗಮ ಭರಿಸುತ್ತದೆ. ಈ ಅಧ್ಯಯನದ ಹಿಂದೆ ಯಾವುದೇ ದುರುದ್ದೇಶವಿಲ್ಲ. – ಬಸವರಾಜೇ ಗೌಡ, ಕಾರ್ಯಪಾಲಕ ಅಭಿಯಂತರರು, ಕೆಆರ್‌ಎಸ್