ಜು.21ರಂದು ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ
ಮೈಸೂರು

ಜು.21ರಂದು ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ

July 3, 2020

ಮೈಸೂರು, ಜು.2(ಪಿಎಂ)- ಕರ್ನಾಟಕ ಭೂ ಸುಧಾ ರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು. ಎಪಿ ಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಹಾಗೂ ಬಿತ್ತನೆ ಬೀಜ ಕಾಯ್ದೆ ಜಾರಿ ಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜು.21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೈಸೂ ರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದು ರೈತ ವಿರೋಧಿ ನಡೆ. ಅದನ್ನು ವಿರೋಧಿಸಿ ಸಂಘ ವಿವಿಧ ಸಂಘಟನೆಗಳ ಜತೆಗೂಡಿ ರಾಜ್ಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ನವಲಗುಂದ-ನರಗುಂದ ರೈತ ಹೋರಾಟದಲ್ಲಿ ಪೊಲೀ ಸರ ಗುಂಡಿಗೆ ಬಲಿಯಾದ ರೈತರ ಸ್ಮರಣಾರ್ಥ ಪ್ರತಿ ವರ್ಷ ಜು.21ರಂದು ಹುತಾತ್ಮ ದಿನ ಆಚರಿಸಲಾಗುತ್ತಿದೆ. ಈ ಬಾರಿ ಜು.21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ದಿನವಾಗಿ ಆಚರಿಸಲಾಗುವುದು ಎಂದರು.

ಪ್ರತಿ ಹಳ್ಳಿಯಲ್ಲಿ ಡಂಗುರ, ಕರಪತ್ರ ಹಂಚಿಕೆ, ವಿಚಾರ ಗೋಷ್ಠಿ ಮೂಲಕ ಅರಿವು ಮೂಡಿಸಲಾಗುತ್ತಿದೆ. ಹಾಡು, ಭಾಷಣದ ಧ್ವನಿಸುರುಳಿ ಬಿಡುಗಡೆ, ಗ್ರಾಮದ ಮುಖ್ಯ ದ್ವಾರದಲ್ಲಿ `ಭೂಮಿ ಮಾರಾಟಕ್ಕಿಲ್ಲ’ ಫಲಕ ಅಳವಡಿಕೆ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಸರ್ಕಾರ ತಿದ್ದುಪಡಿಯಿಂದ ಹಿಂದೆ ಸರಿಯದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಗ್ರಾಮಾಂತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು.

ಮಂಡ್ಯದಲ್ಲಿ ಹೋರಾಟ: ಕೆಆರ್‍ಎಸ್ ಸುತ್ತ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಕ್ರಮ ವಹಿಸಬೇಕು ಮತ್ತು ಕೆಆರ್‍ಎಸ್‍ನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಜು.6ರಂದು ಮಂಡ್ಯ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾ ಗಿದೆ ಎಂದರು. ರೈತ ಮುಖಂಡರಾದ ಹೊಸಕೋಟೆ ಬಸವ ರಾಜು, ಪಿ.ಮರಂಕಯ್ಯ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »