ಮೈಸೂರು,ಅ.29(ಎಂಟಿವೈ)-ದಸರಾ ಮಹೋತ್ಸವ ಸರಳವಾಗಿ ಸಂಪನ್ನಗೊಂಡ ನಂತರ ಆಶ್ವೀಜ ಮಾಸ ಉತ್ತರಭಾದ್ರ ನಕ್ಷತ್ರದ ದಿನ ಚಾಮುಂಡಿಬೆಟ್ಟದಲ್ಲಿ ಜರು ಗುವ ಶ್ರೀ ಚಾಮುಂಡೇಶ್ವರಿ ರಥೋತ್ಸವ ಕೊರೊನಾ ವೈರಸ್ ಭೀತಿ ನಡುವೆಯೇ ಗುರುವಾರ ಸರಳ ಹಾಗೂ ಸಾಂಪ್ರ ದಾಯಿಕವಾಗಿ ನೆರವೇರಿತು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿದ್ದರೂ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕರಥದಲ್ಲಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಮಂಗಳ ವಾದ್ಯ ದೊಂದಿಗೆ ಮೆರವಣಿಗೆ ನಡೆಸಲಾಯಿತು. ನಾಡದೇವತೆಯ ಗೌರವಾರ್ಥ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆಶ್ವೀಜ ಮಾಸದಲ್ಲಿ ಉತ್ತರ ಭಾದ್ರ ನಕ್ಷತ್ರದ ದಿನ ಜರಗುವ ಚಾಮುಂಡೇಶ್ವರಿ ರಥೋತ್ಸವ ವನ್ನು ಸಂವತ್ಸರೋತ್ಸವ ಎಂದೂ ಕರೆಯ ಲಾಗುತ್ತದೆ. ಪ್ರತಿವರ್ಷ ದಸರಾ ಮುಗಿದ ನಂತರ ಚಾಮುಂಡಿ ಬೆಟ್ಟದಲ್ಲಿ ವೈಭವದ ರಥೋತ್ಸವ ಜರುಗುತ್ತದೆ. 30 ಅಡಿ ಎತ್ತ ರದ ರಥದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ಸಾಗುತ್ತಿತ್ತು. ಭಕ್ತ ಸಾಗರ ನೆರೆದು ಹಣ್ಣು-ದವನ ಎಸೆದು ಹರಕೆ ತೀರಿಸುತ್ತಿದ್ದರು. ಈ ಬಾರಿ ಸೋಂಕಿನ ಭಯದಲ್ಲಿ ರಥೋತ್ಸವ ಸರಳ ಗೊಳಿಸಲಾಗಿತ್ತು. ಹಾಗಾಗಿ 10 ಅಡಿ ಎತ್ತರದ ಚಿಕ್ಕರಥ ಬಳಸಲಾಯಿತು.
ಸೋಂಕು ಹರಡುವಿಕೆ ಆತಂಕದಿಂದ ಹೊರಗಿನಿಂದ ಬರುವ ಪ್ರವಾಸಿಗರು, ಭಕ್ತ ರಿಗೆ ಗುರುವಾರ ಬೆಟ್ಟಕ್ಕೆ ಪ್ರವೇಶ ನಿರ್ಬಂ ಧಿಸಲಾಗಿತ್ತು. ಕೇವಲ ಬೆಟ್ಟದ ನಿವಾಸಿಗಳು, ದೇವಾಲಯ ಸಿಬ್ಬಂದಿ, ಅಧಿಕಾರಿಗಳ ಸಮ್ಮುಖ ರಥೋತ್ಸವ ನಡೆಸುವುದಕ್ಕೆ ನಿರ್ಧ ರಿಸಲಾಗಿತ್ತು. ರಥೋತ್ಸವ ವೇಳೆ ಜನ ಜಂಗುಳಿಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೂ ಗುರು ವಾರ ಬೆಳಗ್ಗೆ ರಥೋತ್ಸವಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿಯಾದರು. ರಥಾ ರೋಹಣಕ್ಕಾಗಿ
ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಗೆ ತರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ದೇವಾಲಯದ ಸುತ್ತ ಮೆರವಣಿಯುದ್ದಕ್ಕೂ ಜೈಕಾರ ಮೊಳಗುತ್ತಲೇ ಇತ್ತು.
ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯ: ರಥೋತ್ಸವ ಹಿನ್ನೆಲೆಯಲ್ಲಿ ಮುಂಜಾನೆ 4.30ರಿಂದಲೇ ದೇವಾಲಯದ ಪ್ರಧಾನ ಆಗಮಿಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜೆ ನೆರವೇರಿಸಲಾಯಿತು. ಬಳಿಕ ಸಿಂಹವಾಹಿನಿ ಅಲಂಕಾರ ಮಾಡಿ ಮಹಾಮಂಗಳಾರತಿ ಬೆಳಗಲಾಯಿತು. ಯಾತ್ರಾದಾನ ಮಂಟಪೋ ತ್ಸವದ ಬಳಿಕ ಮತ್ತೊಮ್ಮೆ ಮಂಗಳಾರತಿ ಬೆಳಗಿ ಉತ್ಸವ ಮೂರ್ತಿಯನ್ನು ಸಿಂಗರಿಸಿದ್ದ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಬೆಳಗ್ಗೆ 9.40ರಿಂದ 10.05ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಭಕ್ತರು ರಥವನ್ನು ದೇವಾಲಯದ ಸುತ್ತ ಎಳೆದರು. ಮಂಗಳವಾದ್ಯಗಾರರು ರಥೋತ್ಸವಕ್ಕೆ ಕಳೆಕಟ್ಟಿದರು. ಈ ಬಾರಿ ಜಾನಪದ ಕಲಾತಂಡ, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿರಲಿಲ್ಲ. ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಇನ್ನಿತರರು ಪಾಲ್ಗೊಂಡಿದ್ದರು. ಸಿಎಆರ್‍ಎಸಿಪಿ ಸುದರ್ಶನ್ ಮಾರ್ಗ ದರ್ಶನದಲ್ಲಿ ಪಿರಂಗಿ ದಳ ಎಆರ್‍ಎಎಸ್ ಸಿದ್ದರಾಜು ನೇತೃತ್ವದಲ್ಲಿ 30 ಸಿಬ್ಬಂದಿ ತಂಡ ಸಿಡಿಮದ್ದು ಸಿಡಿಸುವ ಗಾಲಿ ಬಳಸಿ 21 ಕುಶಾಲ ತೋಪು ಸಿಡಿಸಿ ದೇವಿಗೆ ಗೌರವ ಸಮರ್ಪಿಸಿದರು.
ತೆಪ್ಪೋತ್ಸವ ರದ್ದು: ಕೋವಿಡ್ ಹಿನ್ನೆಲೆಯಲ್ಲಿ ತೆಪ್ಪೋತ್ಸವ ರದ್ದುಗೊಳಿಸಲಾಗಿದೆ. ಆದರೆ ಎಂದಿನಂತೆ ಸಂಜೆ ದೇವಾಲಯದಲ್ಲಿ ಹಂಸವಾಹಿನಿ ಹಾಗೂ ಸಿಂಹ ವಾಹನ ಉತ್ಸವ ಜರುಗಿತು. ತೆಪೆÇೀತ್ಸವದ ಬದಲಾಗಿ ತೀರ್ಥರೋಹಣ (ತೀರ್ಥ ಸ್ನಾನ) ಮಾಡಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.