ಪಾಲಿಕೆ ಅಸಹಕಾರ ಆಕ್ಷೇಪಿಸಿ ಕೌನ್ಸಿಲ್ ಸಭೆ ಬಹಿಷ್ಕರಿಸಿದ ಜಿಟಿಡಿ
ಮೈಸೂರು

ಪಾಲಿಕೆ ಅಸಹಕಾರ ಆಕ್ಷೇಪಿಸಿ ಕೌನ್ಸಿಲ್ ಸಭೆ ಬಹಿಷ್ಕರಿಸಿದ ಜಿಟಿಡಿ

October 30, 2020

ಮೈಸೂರು, ಅ.29(ಎಸ್‍ಬಿಡಿ)-ಮೈಸೂರು ನಗರದ ರಿಂಗ್‍ರಸ್ತೆ ಒಳಭಾಗಕ್ಕಿರುವ 4 ಗ್ರಾಮ ಪಂಚಾಯ್ತಿ ಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸಬೇಕೆಂಬ ಜನಪ್ರತಿ ನಿಧಿಗಳ ಒತ್ತಾಸೆಗೆ ಪಾಲಿಕೆ ಅಸಹಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇ ಗೌಡರು ಕೌನ್ಸಿಲ್ ಸಭೆಯನ್ನು ಬಹಿಷ್ಕರಿಸಿ, ಹೊರ ನಡೆದ ಪ್ರಸಂಗ ಗುರುವಾರ ನಡೆಯಿತು.

ಮೇಯರ್ ಪೀಠದಲ್ಲಿ ಆಸೀನರಾಗಿ, ಉಪಮೇಯರ್ ಸಿ.ಶ್ರೀಧರ್ ಗುರುವಾರ ನಡೆಸಿದ ಕೌನ್ಸಿಲ್ ಸಭೆಯಲ್ಲಿ, ರಿಂಗ್ ರಸ್ತೆ ಒಳಗಿರುವ ಚಾಮುಂಡಿ ಬೆಟ್ಟ, ಆಲನಹಳ್ಳಿ, ಶ್ರೀರಾಂಪುರ ಹಾಗೂ ಹಿನಕಲ್ ಗ್ರಾಪಂ ವ್ಯಾಪ್ತಿಯ ಪ್ರದೇಶಗಳನ್ನು ಮೈಸೂರು ನಗರ ಪಾಲಿಕೆಗೆ ಸೇರಿಸ ಬೇಕೆಂಬ ವಿಚಾರವಾಗಿ ಸುದೀರ್ಘ ಚರ್ಚೆಯಾಯಿತು. ಆದರೆ ಕಾರ್ಯಸೂಚಿಯಲ್ಲೇ ಈ ವಿಷಯ ಸೇರಿಸದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಶಾಸಕ ಜಿಟಿಡಿ ಸಭೆಯಿಂದ ಹೊರನಡೆದರು. ಇದರ ಬೆನ್ನಲ್ಲೇ ಸಂಸದ ಪ್ರತಾಪ್‍ಸಿಂಹ ಅವರು ವಾರದ ಹಿಂದೆ ಪಾಲಿಕೆಗೆ ಪತ್ರ ಬರೆದು, ಈ ವಿಷಯವನ್ನು ಕಾರ್ಯಸೂಚಿಯಲ್ಲಿ ಸೇರಿಸಿ, ಅಭಿವೃದ್ಧಿ ದೃಷ್ಟಿಯಿಂದ ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳು ವಂತೆ ಕೇಳಿಕೊಂಡಿದ್ದರೂ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರೂ

ಸಭೆ ಬಹಿಷ್ಕರಿಸಿದರು. ಪರಿಣಾಮ ಸಭೆಯನ್ನು ಅರ್ಧಗಂಟೆ ಮುಂದೂಡಲಾಗಿತ್ತು. ಸಭೆ ಪುನಾರಂಭವಾದಾಗಲೂ ಬಿಜೆಪಿ ಸದಸ್ಯರಾದ ಎಂ.ಯು.ಸುಬ್ಬಯ್ಯ, ಬಿ.ವಿ.ಮಂಜುನಾಥ್, ಶಿವಕುಮಾರ್ ಮೊದಲು ಕಾರ್ಯಸೂಚಿಯಲ್ಲಿ ವಿಷಯ ತನ್ನಿ ಎಂದು ಪಟ್ಟು ಹಿಡಿದರು. ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದ ಉಪಮೇಯರ್ ಶ್ರೀಧರ್, ಈ ಸಂಬಂಧ ಮೇಯರ್ ಸಮ್ಮುಖದಲ್ಲಿ ಸಂಸದರು ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿದ ಬಳಿಕ, ಕೌನ್ಸಿಲ್ ಸಭೆಯಲ್ಲಿ ಮಂಡಿಸೋಣ ಎಂದು ಸಮಾಧಾನಪಡಿಸಿದರು. ಸಭೆಯ ಆರಂಭದಲ್ಲಿ ಬಿಜೆಪಿ ಸದಸ್ಯರು, ನಾಲ್ಕು ಗ್ರಾಮ ಪಂಚಾ ಯಿತಿಗಳಾದ ಹಿನಕಲ್, ಶ್ರೀರಾಂಪುರ, ಚಾಮುಂಡಿಬೆಟ್ಟ ಮತ್ತು ಆಲನಹಳ್ಳಿಗೆ ಸೇರಿರುವ ರಿಂಗ್ ರಸ್ತೆಯೊಳಗಿನ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ತರುವ ವಿಷಯವನ್ನು ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಿ ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳುವಂತೆ ಕೋರಿ ಸಂಸದ ಪ್ರತಾಪ ಸಿಂಹ ಅವರು ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರೆ ಈ ವಿಷಯವನ್ನು ಕಾರ್ಯಸೂಚಿಯಲ್ಲಿ ಏಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಅಯೂಬ್ ಖಾನ್ ಮೈಸೂರಿನ ಅಭಿವೃದ್ಧಿ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಇಟ್ಟುಕೊಂಡು ಶಾಸಕ ಜಿ.ಟಿ.ದೇವೇಗೌಡರು ಸಭೆಗೆ ಬಂದಿದ್ದಾರೆ. ಆದರೆ ಕೆಲವರು ಬೇಜವಾಬ್ದಾರಿಯಿಂದ ಪತ್ರ ಬರೆಯುವ ಕೆಲಸ ಮಾಡುತ್ತಾರೆ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹರನ್ನು ಟೀಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಮಾತು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಆಗ ಕೆಲಕಾಲ ಗದ್ದಲ ಉಂಟಾಯಿತು. ಮಾಜಿ ಮೇಯರ್ ಆರಿಫ್ ಹುಸೇನ್ ಮಾತನಾಡಿ, ನಾಲ್ಕು ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ವಿಷಯವನ್ನು ಏಕಾಏಕಿ ಕಾರ್ಯಸೂಚಿಯಲ್ಲಿ ಸೇರಿಸುವುದಕ್ಕೆ ಸಾಧ್ಯವಿಲ್ಲ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್‍ಗಳಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕು. ಬಿಬಿಎಂಪಿಯಲ್ಲಾಗಿರುವ ತಪ್ಪು ನಮ್ಮಲ್ಲೂ ಆಗಬಾರದು. ಹಾಗಾಗಿ ಸಾಧಕ ಬಾಧಕಗಳ ಬಗ್ಗೆ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಜತೆ ಎಲ್ಲರೂ ಸಭೆ ನಡೆಸಿ ತೀರ್ಮಾನಿಸುವುದು ಒಳ್ಳೆಯದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲೇ 19 ರೆವಿನ್ಯೂ ಬಡಾವಣೆಗಳಿದ್ದು, ಅಲ್ಲಿಯೇ ಮೂಲ ಸೌಲಭ್ಯದ ಕೊರತೆಯಿದೆ. ಇನ್ನು ಗ್ರಾಪಂ ವ್ಯಾಪ್ತಿ ಪ್ರದೇಶಗಳನ್ನು ಸೇರಿಸಿಕೊಂಡರೆ ಪಾಲಿಕೆಗೆ ಬಾರೀ ಹೊರೆಯಾಗುತ್ತದೆ. ಹಾಗಾಗಿ ಸರ್ಕಾರ ಕನಿಷ್ಟ 5 ಸಾವಿರ ಕೋಟಿ ರೂ. ಅನುದಾನ ನೀಡಬೇಕಾಗುತ್ತದೆ ಎಂದು ಸದಸ್ಯರಾದ ಪ್ರೇಮಾ ಶಂಕರೇಗೌಡ ಮತ್ತು ಕೆ.ವಿ.ಶ್ರೀಧರ್ ಅಭಿಪ್ರಾಯಿಸಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಉಪ ಮೇಯರ್ ಸಿ.ಶ್ರೀಧರ್, ನಗರದ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಚರ್ಚೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂದಿನ ಕೌನ್ಸಿಲ್ ಸಭೆಯ ಕಾರ್ಯಸೂಚಿಯಲ್ಲಿ ತರಲಾಗುವುದು ಎಂದರು. ಆಗ  ಶಾಸಕ ಜಿಟಿಡಿ, ಸಭೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯಾರು ಒಪ್ಪಿಲ್ಲ ಎಂಬುದನ್ನು ಸಭೆಗೆ ತಿಳಿಸಿ, ಇಲ್ಲವೇ ಯಾರು ನಿಮಗೆ ಈ ತಪ್ಪು ಮಾಹಿತಿ ನೀಡಿದರು ಎಂಬುದನ್ನು ಹೇಳಿ? ಎಂದು ಪಟ್ಟುಹಿಡಿದರು. ಸಮರ್ಪಕ ಉತ್ತರ ಸಿಗದಿದ್ದರಿಂದÀ ಸರ್ಕಾರ ದಿಂದಲೇ ನೇರವಾಗಿ ಪ್ರಸ್ತಾಪಿತವಾದ ವಿಷಯವನ್ನು ಕೌನ್ಸಿಲ್ ಸಭೆಗೆ ತರದೇ ಶಾಸಕರು ಮತ್ತು ಸಂಸದರಿಗೆ ಅವಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಸಭೆಯಿಂದ ಹೊರ ನಡೆದರು. ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಸಭೆಯಲ್ಲಿ ಹಾಜರಿದ್ದರು.

ಮೈಸೂರು ನಗರದ ರಿಂಗ್‍ರಸ್ತೆಯೊಳಗಿನ ಹಾಗೂ ಹೊಂದಿಕೊಂಡಂತಿರುವ ಗ್ರಾಮಗಳು ಹಾಗೂ ಬಡಾವಣೆಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಕಾರ್ಯಸೂಚಿ ಮೂಲಕ ಕೌನ್ಸಿಲ್‍ನಲ್ಲಿ ಚರ್ಚಿಸಿ, ಸಕಾರಾತ್ಮಕ ನಿರ್ಣಯ ಕೈಗೊಳ್ಳುವಂತೆ ಜಿಟಿಡಿ ಅವರು ಅ.22ರಂದು ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಅ.23ರಂದು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

Translate »