ಸರಳಾತಿ ಸರಳ ದಸರಾ ದಾಖಲೆ ಸೇರ್ಪಡೆ
ಮೈಸೂರು

ಸರಳಾತಿ ಸರಳ ದಸರಾ ದಾಖಲೆ ಸೇರ್ಪಡೆ

October 27, 2020

ಮೈಸೂರು, ಅ.26(ಆರ್‍ಕೆ)-ವಿಶ್ವ ವಿಖ್ಯಾತ ಮೈಸೂರು ದಸರೆಯನ್ನು ಸರ್ಕಾರದ ವತಿಯಿಂದ ಆಚರಿಸಲು ಪ್ರಾರಂಭಿಸಿದ ನಂತರ ನಾಲ್ಕು ಬಾರಿ ವಿವಿಧ ಕಾರಣಗಳಿಗಾಗಿ ಸರಳವಾಗಿ ದಸರಾ ಆಚರಿಸಲ್ಪಟ್ಟಿದ್ದರೂ, ಈ ಬಾರಿ ದಸರಾ ಹಿಂದಿನವುಗಳಿಗಿಂತ ಅತ್ಯಂತ ಸರಳ ಎಂಬ ದಾಖಲೆ ಸೇರಿದೆ. ದಸರಾ ಉತ್ಸವ ಮಾತ್ರವಲ್ಲ, ಜಂಬೂ ಸವಾರಿ ಮೆರವಣಿಗೆಯೂ ಅತ್ಯಂತ ಕಡಿಮೆ ದೂರ ಕ್ರಮಿಸಿ, ದಾಖಲೆ ನಿರ್ಮಿಸಿದೆ.

ಈ ಹಿಂದೆ ಎರಡು ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿ ದಾಗ ಸರ್ಕಾರದಿಂದ ದಸರೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿರಲಿಲ್ಲ. ಆ ಕಾರಣದಿಂದಾಗಿ ನವರಾತ್ರಿ ವೇಳೆಯಲ್ಲೂ ಅಷ್ಟೇನೂ ಸಂಭ್ರಮವಿರಲಿಲ್ಲ. ಆದರೆ ಈ ಬಾರಿ ಸರ್ಕಾರ 15 ಕೋಟಿ ಅನುದಾನ ಬಿಡುಗಡೆ ಮಾಡಿದ ಕಾರಣ ನವರಾತ್ರಿ ವೇಳೆಯಲ್ಲಿ ಮೈಸೂರು ನಗರ ವರ್ಣ ರಂಜಿತ ದೀಪಾಲಂಕಾರದಿಂದ ಕಂಗೊ ಳಿಸುತ್ತಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರಳ ದಸರಾ ಮಹೋತ್ಸವವನ್ನು ಆಚರಿಸಲಾಯಿತು. ಆಗ ಜಂಬೂಸವಾರಿಯು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಿತಾದರೂ, ಅಂತಹ ಸಂಭ್ರಮವೇನೂ ಇರಲಿಲ್ಲ. ದಸರೆಗಾಗಿ ಸರ್ಕಾರದಿಂದ ವಿಶೇಷ ಅನುದಾನವೂ ಬಿಡುಗಡೆಯಾಗಿರಲಿಲ್ಲ.

ಎಂ.ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಗಳಾಗಿದ್ದ ವೇಳೆ 1994ರಲ್ಲಿ ಗುಜರಾತ್‍ನ ಸೂರತ್‍ನಲ್ಲಿ ಪ್ಲೇಗ್ ಮಹಾಮಾರಿ ಹರಡಿದ ಪರಿಣಾಮ ಈ ಸೋಂಕು ರಾಜ್ಯದಲ್ಲಿ ಹರಡದೆ ಇರಲು ಮುನ್ನೆಚ್ಚರಿಕಾ ಕ್ರಮವಾಗಿ ಸರಳ ದಸರಾ ಆಚರಿಸಲಾಯಿತು. ಆಗ ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಯಿತು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ವರನಟ ಡಾ. ರಾಜ್‍ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಕಾರಣ 2002ರಲ್ಲಿ ದಸರಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು. ಆಗ ಜಂಬೂ ಸವಾರಿ ಮೆರವಣಿಗೆ ಜಯಮಾರ್ತಾಂಡ ದ್ವಾರದವರೆಗೆ ತೆರಳಿ ಅರಮನೆಯನ್ನು ಒಂದು ಸುತ್ತು ಹಾಕಿತ್ತು. 3ನೇ ಬಾರಿಗೆ ಈಗ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರ್ಕಾರವು ಸರಳ ದಸರಾ ಆಚರಣೆ ಎಂದು ಘೋಷಿಸಿತ್ತಾದರೂ, 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ನವರಾತ್ರಿ ದಿನಗಳಲ್ಲಿ ಮೈಸೂರು ನಗರಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಿದ್ದನ್ನು ಹೊರತುಪಡಿಸಿ ಬೇರೆ ಯಾವುದೇ ದಸರಾ ಕಾರ್ಯಕ್ರಮಗಳನ್ನು ನಡೆಸಲಿಲ್ಲ.

 

 

Translate »