ಹುಣಸೂರು ಬಳಿ ಆರು ಬಸ್‍ಗಳಿಗೆ ಕಲ್ಲು ತೂರಾಟ
ಮೈಸೂರು

ಹುಣಸೂರು ಬಳಿ ಆರು ಬಸ್‍ಗಳಿಗೆ ಕಲ್ಲು ತೂರಾಟ

April 12, 2021

ಹುಣಸೂರು,ಏ.11(ಕೆಕೆ)-ತಾಲೂಕಿನ ವಿವಿಧೆಡೆ ಸಂಚರಿಸುತ್ತಿದ್ದ 6 ಸಾರಿಗೆ ಬಸ್‍ಗಳ ಮೇಲೆ ಭಾನು ವಾರ ಸಂಜೆ ಮುಷ್ಕರ ನಿರತ ನೌಕರರು ಕಲ್ಲು ತೂರಾಟ ನಡೆಸಿದ್ದು, ಈ ಸಂಬಂಧ ಇಬ್ಬರು ಸಾರಿಗೆ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ 6 ಬಸ್‍ಗಳು ಹಾನಿಗೊಳಗಾಗಿ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಬಸ್‍ಗೆ ಕಲ್ಲು ತೂರಿದರೆನ್ನಲಾದ ಹುಣ ಸೂರು ಡಿಪೋ ಮೆಕ್ಯಾನಿಕ್‍ಗಳಾದ ಕೃಷ್ಣಮೂರ್ತಿ ಮತ್ತು ಸಂತೋಷ್ ಭಜಂತ್ರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬನ್ನಿಕುಪ್ಪೆ ಸಮೀಪ ಮಂಗಳೂರು ಹಾಗೂ ಹುಣಸೂರು ಡಿಪೋ ಬಸ್‍ಗಳಿಗೆ, ಕಲ್ಲಬೆಟ್ಟ ಸಮೀಪ ಮಂಗಳೂರು ಡಿಪೋಗೆ ಸೇರಿದ ಓಲ್ವೋ ಬಸ್ಸಿಗೆ, ಯಶೋಧರಪುರ ಬಳಿ ಹುಣಸೂರು ಡಿಪೋ ಬಸ್‍ಗೆ, ಗಾವಡಗೆರೆ ಹಾಗೂ ರಾಮೇನಹಳ್ಳಿ ಬಳಿ ಕೆ.ಆರ್.ನಗರ ಡಿಪೋಗೆ ಸೇರಿದ ಎರಡು ಬಸ್‍ಗಳು  ಸೇರಿದಂತೆ 6 ಬಸ್‍ಗಳಿಗೆ ಮುಷ್ಕರನಿರತ ಸಾರಿಗೆ ನೌಕರರು ಕಲ್ಲು ತೂರಾಟ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ (ಕೆಎ09, ಎಫ್.5250) ಬಸ್‍ಗೆ ಮುಷ್ಕರ ನಿರತ ನೌಕರರು ಕಲ್ಲು ತೂರಾಟ ನಡೆಸಿದ್ದರಿಂದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ಇದೇ ವೇಳೆ ಹುಣಸೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‍ಗೂ ಕಲ್ಲು ತೂರಾಟ ಮಾಡಲಾಗಿದ್ದು, ಬಸ್‍ನ ಗಾಜು ಒಡೆದು ಹೋಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಸಂಬಂಧ ಬಸ್ ಚಾಲಕ ರಾಮಪ್ಪ ಕುಂತೂರ್ ಬಿಳಿಕೆರೆ ಠಾಣೆಗೆ ದೂರು ನೀಡಿದ್ದು, ಹೈವೇ ಗಸ್ತಿನಲ್ಲಿದ್ದ ಪೊಲೀಸರು ಪ್ರಕರಣ ಸಂಬಂಧ ಹುಣಸೂರು ಡಿಪೋ ಮೆಕ್ಯಾನಿಕ್‍ಗಳಾದ ಕೃಷ್ಣಮೂರ್ತಿ ಮತ್ತು ಸಂತೋಷ್ ಭಜಂತ್ರಿ ಅವರನ್ನು ಬಂಧಿಸಿದ್ದಾರೆ.

ಅಲ್ಲದೇ ಕೆ.ಆರ್.ನಗರದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್‍ಗೆ ರಾಮೇನಹಳ್ಳಿ ಬಳಿ, ಕೆ.ಆರ್.ನಗರದಿಂದ ಹುಣಸೂರಿಗೆ ಹೋಗುತ್ತಿದ್ದ ಬಸ್‍ಗೆ ಗಾವಡಗೆರೆ ಬಳಿ, ಪಿರಿಯಾಪಟ್ಟಣದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‍ಗೆ ಯಶೋಧರಪುರ ಬಳಿ ಹಾಗೂ ಮಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಓಲ್ವೋ ಬಸ್‍ಗೆ ಕಲ್ಲಬೆಟ್ಟ ಬಳಿ ನೌಕರರು ಕಲ್ಲು ತೂರಿ ಪರಾರಿಯಾಗಿದ್ದಾರೆ.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಿಪೋ ಮ್ಯಾನೇಜರ್ ವಿಪಿನ್ ಕೃಷ್ಣ, ಕೆಲ ದಿನಗಳಿಂದ ಮುಷ್ಕರ ನಡೆಸುತ್ತಿರುವ ನೌಕರರ ಪೈಕಿ ಕೆಲವರು ಮುಷ್ಕರ ಬಿಟ್ಟು ನಿನ್ನೆಯಿಂದ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರ ಸೇವೆಗೆ ಮುಂದಾಗಿದ್ದಾರೆ. ಇದನ್ನು ಸಹಿಸದ ಕೆಲವು ಸಾರಿಗೆ ನೌಕರರು ತಮ್ಮನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ತಿಳಿದು ಸಾರ್ವಜನಿಕ ಸೇವೆಗೆ ಮುಂದಾಗಿರುವ ಸಾರಿಗೆ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗಿದ್ದರೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

Translate »