ಮೈಸೂರು ಜನರ ಕುತೂಹಲ ತಣಿಸಿದ ಉಂಗುರ ಸೂರ್ಯಗ್ರಹಣ
ಮೈಸೂರು

ಮೈಸೂರು ಜನರ ಕುತೂಹಲ ತಣಿಸಿದ ಉಂಗುರ ಸೂರ್ಯಗ್ರಹಣ

June 22, 2020

ಮೈಸೂರು, ಜೂ.21(ಆರ್‍ಕೆಬಿ)- ಮೈಸೂರಿನಲ್ಲಿ ಭಾನುವಾರ ಮೋಡ ಕವಿದಿದ್ದರೂ `ಉಂಗುರ’ ಸೂರ್ಯ ಗ್ರಹಣ ಕಾಣಿಸಿಕೊಂಡು ಜನರ ಕುತೂ ಹಲ ತಣಿಸಿತು. ಆಗೊಮ್ಮೆ ಈಗೊಮ್ಮೆ ಮೋಡಗಳು ಸೂರ್ಯನನ್ನು ಮರೆ ಮಾಡುತ್ತಿದ್ದರೂ ಜನತೆ ಸೂರ್ಯ ಗ್ರಹಣ ವೀಕ್ಷಿಸಿ ಖುಷಿಪಟ್ಟರು.

ನಭೋಮಂಡಲದಲ್ಲಿ ಭಾನುವಾರ ಬೆಳಗ್ಗೆ 10.10 ಗಂಟೆಗೆ ಸರಿಯಾಗಿ ಸೂರ್ಯ ನಿಗೆ ಚಂದ್ರನ ನೆರಳು ನಿಧಾನವಾಗಿ ಆವರಿಸತೊಡಗಿತು. ಮಧ್ಯಾಹ್ನ 12ರ ವೇಳೆಗೆ ಉಂಗುರ ಆಕೃತಿಯಲ್ಲಿ ಸೂರ್ಯ ಗೋಚರಿಸಿತು. ಜನರು ತಮ್ಮ ಮನೆ ತಾರಸಿಯಲ್ಲಿ ನಿಂತು ಸೌರ ಕನ್ನಡಕ ಧರಿಸಿ ರವಿ-ಚಂದ್ರರ ಬೆಳಕಿನಾಟ ನೋಡಿದರೆ, ಅನೇಕರು ಹಳೆಯ ಎಕ್ಸ್‍ರೇ ಫಿಲಂಶೀಟ್ ಮೂಲಕ ಗ್ರಹಣ ವೀಕ್ಷಿಸಿ ಸಂತಸಪಟ್ಟರು.

ಬಿಕೋ ಎನ್ನುತ್ತಿದ್ದ ರಸ್ತೆ: ಸೂರ್ಯ ಗ್ರಹಣ ಆರಂಭಕ್ಕೂ ಮುನ್ನವೇ, ಬೆಳಗ್ಗೆ 10ರ ವೇಳೆಗೆ ನಗರದ ರಸ್ತೆಗಳು ಬಿಕೋ ಎನ್ನತೊಡಗಿದವು. ಕೆ.ಆರ್.ವೃತ್ತ, ಆಶೋಕ ರಸ್ತೆ, ದೇವರಾಜ ಅರಸು ರಸ್ತೆ, ಅಗ್ರಹಾರ ವೃತ್ತ, ಜೆಎಲ್‍ಬಿ ರಸ್ತೆ, ಇರ್ವಿನ್ ರಸ್ತೆ, ಹಳೇ ಆರ್‍ಎಂಸಿ ವೃತ್ತ, ನಗರ ಬಸ್ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ ಗಳಲ್ಲಿ ಜನರ ಓಡಾಟ ತೀರಾ ವಿರಳ ವಾಗಿತ್ತು. ವಾಹನಗಳ ಸಂಚಾರವೂ ಅಷ್ಟಾಗಿ ಕಂಡು ಬರಲಿಲ್ಲ. ಗ್ರಹಣ ಸ್ಪರ್ಶ ಕಾಲ ದಿಂದ ಮೋಕ್ಷ ಕಾಲದವರೆಗೂ ನಗರ ದಲ್ಲಿನ ಸ್ಥಿತಿ ಲಾಕ್‍ಡೌನ್ ಸಂದರ್ಭದ ನೆನಪು ಮಾಡಿಸಿತು.

ಗ್ರಹಣ ಮೋಕ್ಷವಾಗುತ್ತಿದ್ದಂತೆ ವಾಹನಗಳು ಒಂದೊಂದಾಗಿ ರಸ್ತೆಗಿಳಿಯತೊಡಗಿದವು. ಗ್ರಹಣ ಸಂದರ್ಭ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಇರಲಿಲ್ಲ. ಹಲವು ಹೋಟೆಲ್ ಗಳು ಮುಚ್ಚಿದ್ದವು. ತೆರೆದಿದ್ದ ಹೋಟೆಲ್‍ಗಳಲ್ಲಿ ವ್ಯಾಪಾರ ಅಷ್ಟಾಗಿ ಇರಲಿಲ್ಲ.

ಪ್ರತಿ ವರ್ಷ ಮೈಸೂರಿನ ಗಂಗೋತ್ರಿ ಆವರಣದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ನೋಡಿ ಖುಷಿ ಪಡುತ್ತಿದ್ದೆವು. ಆದರೆ ಈ ಬಾರಿ ಅಂತಹ ಯಾವುದೇ ವ್ಯವಸ್ಥೆ ಇರಲಿಲ್ಲವಾದ ಕಾರಣ ಸೂರ್ಯಗ್ರಹಣ ಕಾಣಲಾಗಲಿಲ್ಲ.
-ದಿವ್ಯಾ, ಗೋಕುಲಂ

ಇದೇ ಮೊದಲ ಬಾರಿಗೆ ಎಕ್ಸ್‍ರೇ ಶೀಟ್ ಬಳಸಿ ಗ್ರಹಣ ವೀಕ್ಷಿಸಿದೆ. ನಿಜಕ್ಕೂ ಅದ್ಭುತ ಮತ್ತು ಸೋಜಿಗ ಎನಿಸಿತು. -ಶರವಣ, ಗಾಂಧಿನಗರ

Translate »