ಮೈಸೂರಲ್ಲಿ ಮತ್ತೆ ಮೂವರು ಪೇದೆಗಳು ಸೇರಿದಂತೆ 18 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ
ಮೈಸೂರು

ಮೈಸೂರಲ್ಲಿ ಮತ್ತೆ ಮೂವರು ಪೇದೆಗಳು ಸೇರಿದಂತೆ 18 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

June 22, 2020

ಮೈಸೂರು, ಜೂ.21(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಎರಡನೇ ಹಂತದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರಿಂದ ಬೆಚ್ಚಿ ಬೀಳು ತ್ತಿದೆ. ಹೊರ ರಾಜ್ಯ, ಬೇರೆ ಜಿಲ್ಲೆಯಿಂದ ವಾಪಸ್ಸಾದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಭಾನುವಾರ ಮೂವರು ಪೊಲೀಸರೂ ಸೇರಿದಂತೆ 18 ಮಂದಿ ಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ಇಮ್ಮಡಿ ಮಾಡಿದೆ.

ಶನಿವಾರವಷ್ಟೇ ಕೆಎಸ್‍ಆರ್‍ಪಿಯ 13 ಪೇದೆಗಳೂ ಸೇರಿದಂತೆ 22 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇದೀಗ ಮರು ದಿನವೇ 18 ಹೊಸ ಪ್ರಕ ರಣ ಪತ್ತೆಯಾಗಿ ನಗರದ ಜನರನ್ನು ತಲ್ಲಣ ಗೊಳಿಸಿದೆ. ಅಲ್ಲದೇ ಮೈಸೂರಿನ ಕೃಷ್ಣ ವಿಲಾಸ ರಸ್ತೆ (ಮಹಾರಾಣಿ ಪದವಿ ಪೂರ್ವ ಕಾಲೇಜು ಮುಂಭಾಗದಿಂದ ಅವಿಲಾ ಕಾನ್ವೆಂಟ್ ಸಮೀಪದವರೆಗೆ), ಶ್ರೀರಾಂಪುರ, ವಿವಿ ಮೊಹಲ್ಲಾ, ಹಿನಕಲ್ ಬೆಮೆಲ್ ಲೇಔಟ್, ಮೈಸೂರು ತಾಲೂಕಿನ ರಮ್ಮನಹಳ್ಳಿ, ನರಸೀ ಪುರ ತಾಲೂಕಿನ ಎಸ್.ಕೆ.ಅಗ್ರಹಾರ, ಅಂಕನ ಹಳ್ಳಿ, ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿಯೂ ಸೋಂಕಿತರು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಭಾನುವಾರ ಪತ್ತೆಯಾದ 18 ಮಂದಿ ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಕರ್ತವ್ಯ ಮುಗಿಸಿ ವಾಪಸ್ಸಾಗಿದ್ದ ಮೂವರು ಕೆಎಸ್‍ಆರ್‍ಪಿ ಪೇದೆಗಳು, ಹಿನಕಲ್ ಬಳಿಯ ಬೆಮೆಲ್ ಲೇಔಟ್‍ನಲ್ಲಿ ಬೆಂಗಳೂರಿನಿಂದ ಬಂದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ಕಂಡು ಬಂದಿದೆ. 56 ವರ್ಷದ ಮಹಿಳೆ , ಅವರ ಮಗ 38 ವರ್ಷದ ಪುರುಷ, 13 ವರ್ಷದ ಬಾಲಕಿ, 9 ವರ್ಷದ ಮಗ ಇವರು ಗಳಿಗೆ ಸೋಂಕು ಪತ್ತೆಯಾಗಿದೆ. ಚೆನ್ನೈನಿಂದ ವಿಮಾನದ ಮೂಲಕ ಮೈಸೂರಿಗೆ ಬಂದಿದ್ದ ಬೆಲವತ್ತದ ಆರ್‍ಬಿಐ ಕ್ವಾರ್ಟರ್ಸ್ ನಿವಾಸಿ 30 ವರ್ಷದ ಪುರುಷ, 31 ವರ್ಷದ ಮಹಿಳೆ, ಹುಣಸೂರಿಗೆ ಬಂದಿದ್ದ ಬೆಂಗಳೂರಿನ ವ್ಯಾಪಾರಿಯೊಬ್ಬರನ್ನು ಭೇಟಿ ಮಾಡಿ ಬಂದಿದ್ದ ಮೈಸೂರಿನ ಕೃಷ್ಣವಿಲಾಸ ರಸ್ತೆಯ ನಿವಾಸಿ 62 ವರ್ಷದ ಪುರುಷ, ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ 64 ವರ್ಷದ ವಿವಿ ಮೊಹಲ್ಲಾದ ಅಪಾರ್ಟ್ ಮೆಂಟ್‍ವೊಂದರ ನಿವಾಸ್ತಿ, ಗೋಕುಲಂನ 65 ವರ್ಷದ ವ್ಯಕ್ತಿ (ಐಎಲ್‍ಐ), ಆಂಧ್ರಪ್ರದೇಶ ದಿಂದ ವಾಪಸ್ಸಾಗಿದ್ದ 56 ವರ್ಷದ ವ್ಯಕ್ತಿ, ಬೆಂಗಳೂರಿನಿಂದ ವಾಪಸ್ಸಾಗಿದ್ದ 22 ವರ್ಷದ ಯುವಕ, ಬೆಂಗಳೂರಿನಿಂದ ವಾಪಸ್ಸಾಗಿದ್ದ ತಿ.ನರಸೀಪುರದ ಎಸ್.ಕೆ.ಅಗ್ರ ಹಾರದ 42 ವರ್ಷದ ಪುರುಷ, ತಿ.ನರಸೀಪುರ ತಾಲೂಕಿನ ಅಂಕನಹಳ್ಳಿ ಗ್ರಾಮದ 30 ವರ್ಷದ ಯುವಕ (ಐಎಲ್‍ಐ ಪ್ರಕರಣ), ಮೈಸೂರು ತಾಲೂಕಿನ ರಮ್ಮನಹಳ್ಳಿಯ 64 ವರ್ಷದ ವ್ಯಕ್ತಿ (ಐಎಲ್‍ಐ) ಹಾಗೂ ನಂಜನಗೂಡು ತಾಲೂಕಿನ ಹುರಾ ಗ್ರಾಮದ 35 ವರ್ಷದ ವ್ಯಕ್ತಿಯಲ್ಲೂ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು ಕಂಡುಬಂದ ಹೊಸ 18 ಪ್ರಕರಣಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 57ಕ್ಕೆ ಹೆಚ್ಚಳವಾಗಿದೆ. ಇದುವರೆಗೆ 112 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 57 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಮೈಸೂರು ಜಿಲ್ಲೆಯಲ್ಲಿ 16,561 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 16,414 ಸ್ಯಾಂಪಲ್ ನೆಗೆಟಿವ್ ಆಗಿದೆ. ವಿವಿಧ ರಾಜ್ಯಗಳಿಂದ ವಾಪಸ್ಸಾದ 1,812 ಮಂದಿ ಕ್ವಾರಂಟೈನ್‍ನಲ್ಲಿದ್ದು, 214 ಮಂದಿ 7 ದಿನಗಳ ಫೆಸಿಲಿಟಿ ಕ್ವಾರಂಟೈನ್‍ನಲ್ಲೂ, 1,598 ಮಂದಿ 14 ದಿನಗಳ ಹೋಂ ಕ್ವಾರಂಟೈನ್‍ನಲ್ಲೂ ಇದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 9585 ಮಂದಿ ಮೇಲೆ ನಿಗಾ ಇಡಲಾಗಿತ್ತು. ಅದರಲ್ಲಿ 7716 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ.

Translate »