ಸೌರಶಕ್ತಿ: ವಿದ್ಯುತ್ ಸ್ವಾವಲಂಬನೆಯತ್ತ ಮೈಸೂರು ಜಿಪಂ ಕಾರ್ಯಾಲಯ
ಮೈಸೂರು

ಸೌರಶಕ್ತಿ: ವಿದ್ಯುತ್ ಸ್ವಾವಲಂಬನೆಯತ್ತ ಮೈಸೂರು ಜಿಪಂ ಕಾರ್ಯಾಲಯ

September 15, 2020

ಮೈಸೂರು, ಸೆ.14(ಪಿಎಂ)- ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿರುವ ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯಾಲಯ, ವಿದ್ಯುತ್ ಉಳಿತಾಯಕ್ಕಾಗಿ ಉದ್ದೇಶಿತ ಯೋಜನೆ ಸಿದ್ಧಗೊಳಿಸಿದೆ.

ಕಾರ್ಯಾಲಯದ ಮೇಲ್ಛಾವಣಿಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ 50 ಕಿಲೋವ್ಯಾಟ್ ಸೋಲಾರ್ ಪವರ್ (ಸೌರಶಕ್ತಿ) ಪ್ಲಾಂಟ್ ಅಳವಡಿಕೆ ಕಾರ್ಯ ಅಂತಿಮ ಹಂತ ತಲುಪಿದೆ. ಇದರ ಬಳಕೆಯ ಪ್ರಯೋಜನ ಪಡೆಯಲು ದಿನಗಣನೆ ಆರಂಭವಾಗಿರುವಾಗಲೇ ಜಿಪಂ ಕಾರ್ಯಾಲಯಕ್ಕೆ ಎಲ್‍ಇಡಿ ಬಲ್ಬ್‍ಗಳ ಅಳವಡಿಕೆ ಸೇರಿದಂತೆ ವಿದ್ಯುತ್ ಉಳಿತಾಯಕ್ಕೆ ಅಗತ್ಯ ಕಾರ್ಯಗಳ ಅನುಷ್ಠಾನಕ್ಕಾಗಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ.

ಜಿಪಂ ಕಾರ್ಯಾಲಯಕ್ಕೆ ದಿನಕ್ಕೆ ಗರಿಷ್ಠ 38ರಿಂದ 40 ಕಿಲೋವ್ಯಾಟ್ ವಿದ್ಯುತ್ ಅಗತ್ಯವಿದೆ. ಸೌರಶಕ್ತಿ ವ್ಯವಸ್ಥೆ ಕಾರ್ಯಾರಂಭವಾದರೆ ಪ್ರತಿದಿನ 4 ಗಂಟೆ ಅವಧಿಯಲ್ಲಿ 200 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಮಾಸಿಕ ವಿದ್ಯುತ್ ಶುಲ್ಕದಲ್ಲಿ ಶೇ.70ರಷ್ಟು ಉಳಿತಾಯ ಆಗಲಿದೆ ಎಂದು ಅಂದಾಜು ಮಾಡ ಲಾಗಿದೆ. ಸದ್ಯ ಮಾಸಿಕ ಸುಮಾರು 1 ಲಕ್ಷ ರೂ. ವಿದ್ಯುತ್ ಶುಲ್ಕ ಪಾವತಿ ಮಾಡಬೇಕಿದೆ.

ಸೌರಶಕ್ತಿ ಫಲಕ ಅಳವಡಿಸಿರುವುದರಿಂದ ಮೋಡ ಕವಿದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಜಿಪಂ ಕಾರ್ಯಾಲಯ ಸಂಪೂರ್ಣವಾಗಿ ಸೆಸ್ಕ್ ಮೇಲಿನ ಅವಲಂಬನೆಯಿಂದ ಮುಕ್ತವಾಗಲಿದೆ. ಸಾಮಾನ್ಯ ದಿನ ಗಳಲ್ಲಿ ನಿತ್ಯ 38 ಕಿಲೋವ್ಯಾಟ್ ಬಳಕೆಯಾಗುತ್ತದೆ. ಬೇಸಿಗೆ ಯಲ್ಲಿ 45 ಕಿಲೋವ್ಯಾಟ್‍ಗೆ ಏರಿಕೆಯಾಗುತ್ತದೆ. ಕಾರ್ಯಾ ಲಯಕ್ಕೆ ಅಗತ್ಯವಿರುವ ವಿದ್ಯುತ್ತನ್ನು ಸೋಲಾರ್ ಮೂಲಕ ಉತ್ಪಾದನೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನೆಟ್ ಮೀಟರಿಂಗ್: ಮೈಸೂರು ಜಿಪಂ ಸೌರಶಕ್ತಿ ಯಿಂದ ವಿದ್ಯುತ್ ಸ್ವಾವಲಂಬನೆ ಸಾಧಿಸುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸೆಸ್ಕ್‍ಗೆ (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ) ನೀಡಲಿದೆ. ಅದಕ್ಕೆ ಅಗತ್ಯವಾದ ತಾಂತ್ರಿಕ ವ್ಯವಸ್ಥೆ ಅಳವಡಿಸಲಾಗುತ್ತಿದೆ. `ನೆಟ್ ಮೀಟರಿಂಗ್’ ತಾಂತ್ರಿಕ ವ್ಯವಸ್ಥೆ ಮೂಲಕ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಸ್ವಯಂಚಾಲಿತವಾಗಿ ಸೆಸ್ಕ್‍ನ ಪವರ್ ಗ್ರಿಡ್‍ಗೆ ಪೂರೈಸುವ ವ್ಯವಸ್ಥೆ ಇದಾಗಿದೆ. ಬೆಂಗಳೂರಿನ ಟೆಕ್ಸರ್ ಸೋಲಾರ್ ಪವರ್ ಕಂಪನಿ ಟೆಂಡರ್ ಮೂಲಕ ಇಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಕಾರ್ಯವನ್ನು 20 ದಿನಗಳ ಹಿಂದೆ ಕೈಗೆತ್ತ್ತಿಕೊಂಡಿದೆ. ಅಳವಡಿಕೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಟೆಂಡರ್ ಪಡೆದ ಇದೇ ಕಂಪನಿ 5 ವರ್ಷಗಳ ಕಾಲ ಸೋಲಾರ್ ಪ್ಲಾಂಟ್‍ನ ನಿರ್ವಹಣೆ ಮಾಡಲಿದೆ.

ಎಲ್‍ಇಡಿ ಬಲ್ಬ್: ಸೋಲಾರ್ ಪ್ಲಾಂಟ್ ಸಜ್ಜುಗೊಳ್ಳು ತ್ತಿರುವಾಗಲೇ ಜಿಪಂ ಕಾರ್ಯಾಲಯ ಕಟ್ಟಡದಲ್ಲಿ ಬಳಕೆ ಯಾಗುವ ವಿದ್ಯುತ್ತನ್ನು ಉಳಿತಾಯ ಮಾಡಲು ಉದ್ದೇಶಿತ ಯೋಜನೆ ರೂಪಿಸಲಾಗಿದೆ. ಎಲ್ಲೆಡೆ ಎಲ್‍ಇಡಿ ಬಲ್ಬ್‍ಗಳ ಅಳವಡಿಕೆಗೆ ಉದ್ದೇಶಿತ ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ವಿದ್ಯುತ್ ಹೆಚ್ಚು ಅಪೇಕ್ಷಿಸುವ ಟ್ಯೂಬ್ ಲೈಟ್‍ಗಳ ಬದಲಾಗಿ 300 ಎಲ್‍ಇಡಿ ಬಲ್ಬ್‍ಗಳ ಅಳ ವಡಿಕೆ ಮಾಡಲು ಉದ್ದೇಶಿಸಲಾಗಿದೆ.

ವಿದ್ಯುತ್ ಕಡಿಮೆ ಅಪೇಕ್ಷಿಸುವ 100 ಕಂಪ್ಯೂ ಟರ್‍ಗಳನ್ನು ಕಾರ್ಯಾಲಯದಲ್ಲಿ ಅಳವಡಿಸಲಾಗಿದೆ. ವಿದ್ಯುತ್ ಮಿತವ್ಯಯದ ಫ್ಯಾನ್‍ಗಳನ್ನು ಅಳವಡಿಸಲೂ ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಯೋಜನೆಗೆ ಅಧಿಕಾರಿ ವರ್ಗ ಎಲ್ಲಾ ಸಿದ್ಧತೆ ಮಾಡಿ ಕೊಂಡಿದ್ದು, ಜಿಪಂ ಸಾಮಾನ್ಯ ಸಭೆಯಲ್ಲಿ ಅಂಗೀಕಾರ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಬೇಕಿದೆ.

Translate »