ಶೀಘ್ರದಲ್ಲೇ ಮೈಸೂರಿನ ಅರಸು, ಸಯ್ಯಾಜಿರಾವ್, ಅಶೋಕ, ಶಿವರಾಂಪೇಟೆ, ಧನ್ವಂತರಿ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ
ಮೈಸೂರು

ಶೀಘ್ರದಲ್ಲೇ ಮೈಸೂರಿನ ಅರಸು, ಸಯ್ಯಾಜಿರಾವ್, ಅಶೋಕ, ಶಿವರಾಂಪೇಟೆ, ಧನ್ವಂತರಿ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ

November 11, 2022

ಮೈಸೂರು, ನ.10(ಜಿಎ)-ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರ ಸ್ಥಳಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಶಿವರಾಂಪೇಟೆ ರಸ್ತೆ ಹಾಗೂ ಧನ್ವಂತರಿ ರಸ್ತೆಗಳಲ್ಲಿ ಶೀಘ್ರದಲ್ಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗು ವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಚೇರಿ ಯಲ್ಲಿ ಆಯೋಜಿಸಿದ್ದ ಸಂವಾದ
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಈ ಭರವಸೆ ನೀಡಿದರು. ಮೈಸೂರಿನ ಪಾರಂಪರಿಕ ಕಟ್ಟಡಗಳ ಸುರಕ್ಷತೆ, ರಸ್ತೆ ಗುಂಡಿಗಳ ಕುರಿತು, ಸಾರ್ವಜನಿಕ ಶೌಚಾಲಯ, ಉದ್ಯಾನವನಗಳಲ್ಲಿನ ಸಮಸ್ಯೆಗಳು, ಪಾರ್ಕಿಂಗ್ ಸಮಸ್ಯೆ, ತೆರಿಗೆ ಸೇರಿದಂತೆ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಸರಮಾಲೆಯನ್ನು ಸಂಸ್ಥೆಯ ಪದಾಧಿಕಾರಿಗಳು ಮೇಯರ್ ಶಿವಕುಮಾರ್ ಅವರ ಮುಂದಿಟ್ಟ ವೇಳೆ ಈ ಭರವಸೆ ನೀಡಿದರು.

ಎಲ್ಲಾ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಮೇಯರ್, ಸೋಮವಾರ ಪಾಲಿಕೆ ಆಯುಕ್ತದೊಂದಿಗೆ ಚರ್ಚಿಸಿ, ಡಿಪಿಆರ್ ಮಾಡಿಸಿ ಶೀಘ್ರದಲ್ಲಿ ಈ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಪಾರ್ಕಿಂಗ್ ಸಮಸ್ಯೆ ಇರುವುದು ಗಮನದಲ್ಲಿದ್ದು, ಇದಕ್ಕಾಗಿ ಈಗಾಗಲೇ ಟೌನ್ ಹಾಲ್ ಆವರಣದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಕಳೆದ ದಸರಾದಲ್ಲಿ 200 ಕಾರುಗಳ ಪಾರ್ಕಿಂಗ್‍ಗೆ ಬಳಸಿಕೊಳ್ಳಲಾಗಿತ್ತು. ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ನೂರಾರು ವಾಹನಗಳನ್ನು ಇಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ ಎಂದರು.

ಮೈಸೂರಿನ ರಸ್ತೆಗಳಲ್ಲಿನ ಗುಂಡಿಗಳ ಕುರಿತು ಮಾತನಾಡಿ, ನಗರದ ಕೆ.ಆರ್.ಕ್ಷೇತ್ರ ಮತ್ತು ಚಾಮರಾಜ ಕ್ಷೇತ್ರದ ಶಾಸಕರು ಸರ್ಕಾರದಿಂದ 300 ಕೋಟಿ ರೂ. ಗಿಂತ ಅಧಿಕ ಅನುದಾನ ತಂದಿದ್ದು, ಈಗಾಗಲೇ ಈ ಎರಡು ಕ್ಷೇತ್ರದಲ್ಲಿ ಡಾಂಬರೀಕರಣ ಆರಂಭವಾಗಿದೆ. ಆದರೆ, ಪಾಲಿಕೆಯಲ್ಲಿ ಹಣದ ಕೊರತೆ ಇರುವು ದರಿಂದ ಬನ್ನಿಮಂಟಪ ಸೇರಿದಂತೆ ವಿವಿಧೆಡೆ ಡಾಂಬರೀ ಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಡಾಂಬರೀಕರಣ ಮಾಡಲು ಸಾಧ್ಯವಾಗದಿದ್ದರೆ, ತಾತ್ಕಾಲಿಕವಾಗಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಲಾಗುತ್ತದೆ ಎಂದು ತಿಳಿಸಿದರು.

ಪಾರಂಪರಿಕ ಕಟ್ಟಡದ ಸಂರಕ್ಷಣೆಗೆ ಏನು ಕ್ರಮ ತೆಗೆದು ಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಾಲಿಕೆಯಲ್ಲಿ ನಾನು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಮಳೆ ನೀರು ಸುರಿಯುತ್ತಿದ್ದು, ಮೈಸೂರು ನಗರದಾದ್ಯಂತ 216 ಪಾರಂಪರಿಕ ಕಟ್ಟಡಗಳಿವೆ. ಅವುಗಳಲ್ಲಿ ಸರ್ಕಾರ 131 ಕಟ್ಟಡವನ್ನು ಪಾರಂಪರಿಕ ಕಟ್ಟಡ ಎಂದು ಘೋಷಣೆ ಮಾಡಿದ್ದು, ಈ ಎಲ್ಲಾ ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿವೆ. ಈಗಾಗಲೇ ಪಾರಂಪರಿಕ ತಜ್ಞರೊಂದಿಗೆ ಚರ್ಚಿಸಲಾಗಿದ್ದು, ಈ ಎಲ್ಲಾ ಕಟ್ಟಡಗಳ ಬಗ್ಗೆ ಸಮಗ್ರ ವರದಿ ತಯಾರಾಗುತ್ತಿದೆ. ಈ ವರದಿಯೊಂದಿಗೆ ಸ್ಥಳೀಯ ಶಾಸಕರು ಮತ್ತು ಸಂಸದರ ಜೊತೆಗೆ ಎಲ್ಲರನ್ನು ಕರೆದುಕೊಂಡು ಮುಖ್ಯ ಮಂತ್ರಿಗಳ ಬಳಿ ತೆರಳಿ 100 ಕೋಟಿ ರೂ. ಅನುದಾನ ಬೇಡಿಕೆ ಇಡಲಿದ್ದೇವೆ ಎಂದರು. ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಬಿಲ್ಡಿಂಗ್ ಎರಡು ಕಟ್ಟಡಗಳ ದುರಸ್ಥಿಗೆ ಅನುದಾನವಿದೆ. ಆದರೆ, ಅದರ ಬಗ್ಗೆ ವಿಭಿನ್ನವಾದ ಅಭಿಪ್ರಾಯವಿದ್ದು, ಈ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ್ ಅವರೊಡನೆ ಚರ್ಚಿಸಲು ಕಾಲಾವಕಾಶ ಕೇಳಿದ್ದು, ಸದ್ಯದಲ್ಲಿ ಅದು ಬಗೆಹರಿಯುವ ವಿಶ್ವಾಸವಿದೆ. ನಗರದಲ್ಲಿ ಶೀಘ್ರವಾಗಿ ವಾಣಿವಿಲಾಸ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ದೊಡ್ಡ ಗಡಿಯಾರ ಹಾಗೂ ಪ್ರಮುಖ ಸ್ವಾಗತ ಕಮಾನುಗಳು ದುರಸ್ಥಿಯಾಗಬೇಕಿದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಬಜೆಟ್‍ನಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳಿಗಾಗಿ ಪ್ರತ್ಯೇಕ ಅನುದಾನ ಮೀಸಲಿ ಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ವ್ಯಾಪಾರಿಗಳ ಪರವಾನಿಗೆ ನವೀಕರಣದ ಸಿ.ಆರ್. ಶುಲ್ಕದ ಬಗ್ಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಮುಂದಿಡುತ್ತೇವೆ. ಬೀದಿನಾಯಿಗಳ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಪುರ್ನವಸತಿ ಕೇಂದ್ರ ನಿರ್ಮಾಣವಾಗುತ್ತಿದ್ದು, ಜನವರಿ ತಿಂಗಳೊಳಗೆ ಅದು ಪೂರ್ಣಗೊಳ್ಳಲಿದೆ ಎಂದರು. ನಂತರ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಮೇಯರ್ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಎಂಸಿಸಿಐ ಅಧ್ಯಕ್ಷ ಕೆ.ಬಿ. ಲಿಂಗರಾಜು, ಉಪಾಧ್ಯಕ್ಷ ಆರ್.ಆನಂದ್, ಖಜಾಂಚಿ ಅಶೋಕ್, ಗೌರವ ಕಾರ್ಯದರ್ಶಿ ಎ.ಕೆ.ಶಿವಾಜಿರಾವ್, ಪ್ರವಾ ಸೋದ್ಯಮ ಉಪಸಮಿತಿ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Translate »