ಕೋವಿಡ್-19 ಕರಾಳ ದಿನಚರಿ ಆರಂಭ:  ಮುಚ್ಚುತ್ತಿದೆ ಮೈಸೂರಿನ ಸ್ಟಾರ್ ಹೋಟೆಲ್ `ಸದರನ್ ಸ್ಟಾರ್’!
ಮೈಸೂರು

ಕೋವಿಡ್-19 ಕರಾಳ ದಿನಚರಿ ಆರಂಭ: ಮುಚ್ಚುತ್ತಿದೆ ಮೈಸೂರಿನ ಸ್ಟಾರ್ ಹೋಟೆಲ್ `ಸದರನ್ ಸ್ಟಾರ್’!

May 20, 2020

ಮೈಸೂರು, ಮೇ 19(ಆರ್‍ಕೆ)- ಕೋವಿಡ್-19ರ ಕರಾಳ ದಿನಚರಿ ಕೊನೆಗೂ ಆರಂಭಗೊಂಡಿದೆ. ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿರುವ ಕೊರೊನಾ ಮಹಾಮಾರಿ 3 ಲಕ್ಷಕ್ಕೂ ಅಧಿಕ ಅಮಾಯಕ ಜೀವಗಳನ್ನು ಬಲಿ ಪಡೆಯುವುದು ಮಾತ್ರವಲ್ಲದೆ ಕೋಟ್ಯಾಂತರ ಕಾರ್ಮಿಕರ ಉದ್ಯೋಗಗಳಿಗೂ ಕುತ್ತು ತರುತ್ತಿದೆ.

ಇನ್ನೈದು ದಿನ ಕಳೆದರೆ ಭಾರತದಲ್ಲಿ ಲಾಕ್‍ಡೌನ್ ಶುರುವಾಗಿ 2 ತಿಂಗಳಾಗಲಿದೆ. ಈ ಮಧ್ಯೆ ದೇಶದ ಹಲವು ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ತೀವ್ರ ನಷ್ಟದ ಕಾರಣ ಒಂದೊಂದಾಗಿ ಬಾಗಿಲು ಮುಚ್ಚಲಾ ರಂಭಿಸಿವೆ. ಇವುಗಳ ಸಾಲಿಗೆ ಮೈಸೂರಿನ ಪ್ರತಿಷ್ಠಿತ ಫೋರ್‍ಸ್ಟಾರ್ ಹೋಟೆಲ್ `ಸದರನ್ ಸ್ಟಾರ್’ ಕೂಡ ಸೇರ್ಪಡೆ ಆಗುತ್ತಿದೆ. ಪರಿಣಾಮ, 80 ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಗಿದೆ. ಇನ್ನೊಂದೆಡೆ ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿನ ಪ್ರಸಿದ್ಧ ಸೂಟಿಂಗ್ಸ್ ಕಂಪನಿ `ರೀಡ್ ಅಂಡ್ ಟೇಲರ್ (ಇಂಡಿಯಾ) ಲಿಮಿಟೆಡ್’ ಕೂಡಾ ಬಾಗಿಲಿಗೆ ಬೀಗ ಹಾಕುತ್ತಿದೆ.

ಸದರನ್ ಸ್ಟಾರ್ ಹೋಟೆಲ್: 40 ವರ್ಷಗಳಿಂದ ಮೈಸೂರಿನ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿ `ಹೋಟೆಲ್ ಸದರನ್ ಸ್ಟಾರ್’ ದೊಡ್ಡ ಹೆಜ್ಜೆ ಗುರುತು ಮೂಡಿಸಿದೆ. ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಈ ಪ್ರಸಿದ್ಧ ಹೋಟೆಲ್ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿದೆ. `ಸದರನ್ ಸ್ಟಾರ್ ಹೋಟೆಲ್’ ಈಗ ಕೋವಿಡ್-19 ಹಿನ್ನೆಲೆಯ ಲಾಕ್‍ಡೌನ್ ನಿರ್ಬಂಧದಿಂದಾಗಿ ತೀವ್ರ ನಷ್ಟವಾಗಿರುವ ಕಾರಣ ನೀಡಿ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲು ಮುಂದಾಗಿದೆ. ಹೋಟೆಲನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ಅನುಮತಿ ನೀಡುವಂತೆ ಕೋರಿ ಸದರನ್ ಸ್ಟಾರ್ ಆಡಳಿತ ಮಂಡಳಿಯು ಸರ್ಕಾರದ ಸಂಬಂಧಿಸಿದ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿದೆ. ಇದೇ ವೇಳೆ, ತನ್ನ 80 ನೌಕರರಿಗೂ ಅವರ ಮನೆಯ ವಿಳಾಸಕ್ಕೆ `ಟರ್ಮಿನೇಷನ್’ (ಕೆಲಸದಿಂದ ತೆಗೆದುಹಾಕುವÀ) ನೋಟಿಸ್ ಅನ್ನು ರಿಜಿಸ್ಟರ್ಡ್ ಅಂಚೆಯಲ್ಲಿ ಮಂಗಳವಾರ ರವಾನಿಸಿದೆ.

`ಲಾಕ್‍ಡೌನ್‍ನಿಂದಾಗಿ ವಹಿವಾಟು ಕುಸಿದಿರುವುದರಿಂದ ಹೋಟೆಲ್ ಬಂದ್ ಮಾಡಲು ಸದರನ್ ಸ್ಟಾರ್ ಆಡಳಿತ ಮಂಡಳಿ ನಿರ್ಧರಿಸಿದೆ. ಹಾಗಾಗಿ ಹೋಟೆಲ್‍ನ ಎಲ್ಲಾ 80 ಮಂದಿ ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತಿದೆ’ ಎಂದು ಹೋಟೆಲ್ ಮಾಲೀಕ ಹೆಚ್‍ಆರ್‍ಬಿ ಜೈರಾಜ್ ತಿಳಿಸಿದ್ದಾರೆ. ಸರ್ಕಾರವಾಗಲೀ, ಸ್ಥಳೀಯ ಆಡಳಿತವಾಗಲೀ ನಮ್ಮ ನೆರವಿಗೆ ಬಂದಿಲ್ಲ. ನಗರಪಾಲಿಕೆಯು ಶೇ. 15ರಷ್ಟು ತೆರಿಗೆ ಹೆಚ್ಚಿಸಿದೆ. ಅಬಕಾರಿ ಇಲಾಖೆಯು ಮುಂದಿನ ವರ್ಷದ ತೆರಿಗೆಯನ್ನು ಈ ವರ್ಷವೇ ಪಾವತಿಸಿ ಎಂದು ಹೇಳುತ್ತಿದೆ. ಈ ಪರಿಸ್ಥಿತಿಯಲ್ಲಿ ನಾವು ಹೋಟೆಲ್ ಹೇಗೆ ನಡೆಸುವುದು ಹೇಳಿ ಎಂದು ಪ್ರಶ್ನಿಸಿದರು.

ಹೋಟೆಲ್‍ನ ಚೀಫ್ ಫೈನಾನ್ಷಿಯಲ್ ಆಫೀಸರ್ ಗಣೇಶ್ ಮಂಗಳವಾರ `ಮೈಸೂರು ಮಿತ್ರ’ ಜತೆ ಮಾತನಾಡಿ, ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಮುಂದಿನ 30ರಿಂದ 45 ದಿನದಲ್ಲಿ ದೇಶದಲ್ಲಿನ ಶೇ.70ರಷ್ಟು ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಮುಚ್ಚಲಿವೆ. ನಾವೂ ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ. ಆದ್ದರಿಂದ ಹೋಟೆಲ್ ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

 

 

 

 

 

Translate »