ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಮೊರೆ: ಇಂದು ವಿಶೇಷ ಪೂಜೆ
ಮೈಸೂರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಮೊರೆ: ಇಂದು ವಿಶೇಷ ಪೂಜೆ

April 12, 2022

ಮೈಸೂರು,ಏ.೧೧-ಜೆಡಿಎಸ್‌ನ ಮಹಾತ್ವಾಕಾಂಕ್ಷೆಯ ಕಾರ್ಯ ಕ್ರಮವಾದ `ಜನತಾ ಜಲಧಾರೆ ಗಂಗಾ ಯಾತ್ರೆ’ ಏ.೧೬ರಂದು ಆರಂಭ ವಾಗಲಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಳೆ (ಮಂಗಳವಾರ) ಬೆಳಗ್ಗೆ ೭.೩೦ಕ್ಕೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪೂಜೆಯ ನಂತರ ಕುಮಾರಸ್ವಾಮಿ ಅವರ ಪ್ರಸಾದದೊಂದಿಗೆ ರಾಮನಗರಕ್ಕೆ ತೆರಳಲಿದ್ದು, ಜೆಡಿಎಸ್ ವರಿಷ್ಠರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಮನಗರದ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಜನತಾ ಜಲಧಾರೆಯ ೧೫ ರಥಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿಂದ ಈ ರಥಗಳು ಆಯಾ ಜಿಲ್ಲೆಗೆ ತೆರಳಲಿವೆ.

ನಾಳೆ (ಏ.೧೨) ಕುಮಾರಸ್ವಾಮಿ ಅವರು ಜನತಾ ಜಲಧಾರೆ ಗಂಗಾ ಯಾತ್ರೆ ಯಶಸ್ವಿಗಾಗಿ ಚಾಮುಂಡಿಬೆಟ್ಟದಲ್ಲಿ ಪೂಜಾ ಸಲ್ಲಿಸಲಿರುವು ದರಿಂದ ಸೋಮವಾರ ಸಂಜೆ ಶಾಸಕ ಸಾ.ರಾ.ಮಹೇಶ್ ಅವರ ಮೈಸೂರು ಕಚೇರಿಯಲ್ಲಿ ಜೆಡಿಎಸ್ ಮುಖಂಡರ ಸಭೆ ಏರ್ಪ ಡಿಸಲಾಗಿತ್ತು. ಈ ಸಭೆಯಲ್ಲಿ ಶಾಸಕ ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ,
ಮಾಜಿ ಶಾಸಕ ಚಿಕ್ಕಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗರಾಧ್ಯಕ್ಷ ಚಲುವೇ ಗೌಡ, ಕೊಡಗು ಜಿಲ್ಲಾಧ್ಯಕ್ಷ ಗಣೇಶ್, ಮಾಜಿ ಮೇಯರ್ ರವಿಕುಮಾರ್, ಮುಖಂಡ ರಾದ ಸಾ.ರಾ.ನಂದೀಶ್, ಮಾವಿನಹಳ್ಳಿ ಸಿದ್ದೇಗೌಡ, ಬೀರೀಹುಂಡಿ ಬಸವಣ್ಣ, ಮಾದೇಗೌಡ, ಬೆಳವಾಡಿ ಶಿವಮೂರ್ತಿ ಪಕ್ಷದ ವಿವಿಧ ಹಂತದ ಜನಪ್ರತಿನಿಧಿಗಳು ಸೇರಿದಂತೆ ಹಲವರು ಭಾಗವಹಿಸಿ, ನಾಳಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.

ನಾಳೆ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ, ರಾಮನಗರದಿಂದ ೧೫ ಜಲಧಾರೆ ರಥಗಳನ್ನು ವಿವಿಧ ಜಿಲ್ಲೆಗಳಿಗೆ ರವಾನಿಸಿದ ನಂತರ ಏ.೧೬ರಂದು ಏಕಕಾಲಕ್ಕೆ ೧೫ ರಥಗಳಿಗೆ ಚಾಲನೆ ನೀಡಲಾಗುತ್ತದೆ. ಕೆಆರ್‌ಎಸ್‌ನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಶಾಸಕ ಸಾ.ರಾ.ಮಹೇಶ್, ಕಬಿನಿ ಜಲಾಶಯದಲ್ಲಿ ಶಾಸಕರಾದ ಅಶ್ವಿನ್‌ಕುಮಾರ್, ಸಿ.ಎನ್.ಮಂಜೇಗೌಡ ಮತ್ತು ಮಾಜಿ ಶಾಸಕ ಚಕ್ಕಣ್ಣ ಜಲಧಾರೆ ರಥಗಳಿಗೆ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರುಗಳು ಬೇರೆ ಬೇರೆ ಸ್ಥಳಗಳಲ್ಲಿ ಜಲಧಾರೆ ರಥಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ `ಮೈಸೂರು ಮಿತ್ರ’ ನಿಗೆ ತಿಳಿಸಿದರು.

Translate »