ಶ್ರೀಕಂಠದತ್ತ ನರಸಿಂಹರಾಜ ಒಡೆಯರ್  5ನೇ ಪುಣ್ಯಸ್ಮರಣೆ: ಸಮಾಧಿಗೆ ವಿಶೇಷ ಪೂಜೆ
ಮೈಸೂರು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 5ನೇ ಪುಣ್ಯಸ್ಮರಣೆ: ಸಮಾಧಿಗೆ ವಿಶೇಷ ಪೂಜೆ

December 11, 2018

ಮೈಸೂರು:  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಮನುವನದಲ್ಲಿರುವ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಸೂರು ಅರಮನೆ ಮಂಡಳಿ, ಕರ್ನಾ ಟಕ ರಾಜ್ಯ ಅರಸು ಮಹಾಸಭಾ, ಶ್ರೀರಾಮ ಸೇವಾ ಅರಸು ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ನೂರಾರು ಮಂದಿ ಸಾರ್ವಜನಿಕರು ಶ್ರೀಕಂಠದತ್ತ ಒಡೆಯರ್ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

ಹೂವಿನಿಂದ ಅಲಂಕೃತಗೊಂಡಿದ್ದ ಸಮಾಧಿ ಮೇಲೆ, ಒಡೆ ಯರ್ ಭಾವಚಿತ್ರವನ್ನಿಟ್ಟು, ಪೂಜೆ ಸಲ್ಲಿಸಲಾಯಿತು. ಎಲ್ಲರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮಂಗಳಾರತಿಯೊಂದಿಗೆ ನಮಿಸಿ, ಒಡೆಯರ್ ಅವರ ಸೇವೆಯನ್ನು ಸ್ಮರಿಸಿಕೊಂಡರು. ಪುಣ್ಯ ಸ್ಮರಣೆ ಅಂಗವಾಗಿ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಅನ್ನಸಂತರ್ಪಣೆ ಏರ್ಪಡಿಸಿದ್ದರು. ಮನುವನದಲ್ಲಿ ನೂರಾರು ಮಂದಿ ಭೋಜನ ಸ್ವೀಕರಿಸಿದರು. ಅಲ್ಲದೆ ಅನೇಕ ಅನಾಥಾಶ್ರಮಗಳಲ್ಲೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಒಡೆಯರ್ ಸಮಾಧಿಗೆ ಪೂಜೆ ಸಲ್ಲಿಸಿದ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಅಪಾರ ಜನಪರ ಸೇವೆ ಮಾಡಿದ್ದಾರೆ. ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರು, ಅರಮನೆಗಳ ನಿರ್ವಹಣೆ ಸೇರಿದಂತೆ ಶ್ರೇಷ್ಠ ಸಂಪ್ರದಾಯಗಳನ್ನು ಮುನ್ನಡೆಸಲು ಶ್ರೀಕಂಠದತ್ತ ಒಡೆಯರ್ ಪ್ರೇರಣೆ ಹಾಗೂ ತಾಯಿ ಚಾಮುಂಡೇಶ್ವರಿಯ ಶ್ರೀರಕ್ಷೆಯೇ ಕಾರಣ. ನನಗೂ ತುಂಬಾ ಆತ್ಮೀಯರೂ, ಮಾರ್ಗದರ್ಶಕರೂ ಆಗಿದ್ದರು. ಅನೇಕ ಸಂದರ್ಭಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಸ್ಮರಿಸಿಕೊಂಡರು.

ಕರ್ನಾಟಕ ರಾಜ್ಯ ಅರಸು ಮಹಾಸಭಾದ ಅಧ್ಯಕ್ಷ ನಂದೀಶ್ ಅರಸ್, ಅರಮನೆ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ. ರಾಮೇಗೌಡ, ಒಕ್ಕಲಿಗರ ವಿಕಾಸ ವೇದಿಕೆಯ ಯಮುನಾ, ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಎಂಜಿಆರ್ ಅರಸ್, ರೋಟರಿ ಮೈಸೂರು ಪ್ಯಾಲೆಸ್ ಕ್ಲಬ್‍ನ ಆರ್‍ಐ ಛೇರ್ಮನ್ ಶಾಂತ ರಾಜೇ ಅರಸ್, ಶ್ರೀರಾಮ ಸೇವಾ ಅರಸು ಮಂಡಳಿ ಅಧ್ಯಕ್ಷ ಲಕ್ಷ್ಮೀ ಕಾಂತರಾಜೇ ಅರಸ್, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅರವಿಂದ ಶರ್ಮಾ, ಮಾಜಿ ಕಾರ್ಪೊರೇಟರ್ ರಘು ರಾಜೇ ಅರಸ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು.

Translate »