ಮೈಸೂರು, ಜ.7(ಪಿಎಂ)- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಅಗತ್ಯ ವಿರುವ ಧನ ಸಂಗ್ರಹಣೆಗಾಗಿ ವಿಶ್ವ ಹಿಂದೂ ಪರಿಷದ್ ವತಿಯಿಂದ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಜ.15ರಿಂದ `ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಆರಂಭಿಸ ಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ (ವಿಹೆಚ್‍ಪಿ) ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಬಸವರಾಜ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15ರಿಂದ ಫೆ.27ರವರೆಗೆ ದೇಶಾ ದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯ ಲಿದ್ದು, ರಾಜ್ಯದಲ್ಲಿ ಫೆ.5ರವರೆಗೆ ನಡೆಯಲಿದೆ. ರಾಮಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ನಿಧಿಯನ್ನು ಸರ್ಕಾರದಿಂದ ತೆಗೆದುಕೊಳ್ಳುವುದು ಬೇಡವೆಂದು ನಿರ್ಧರಿಸಿದೆ. ಜೊತೆಗೆ ದೇಶದ ಹಿಂದೂ ಸಮುದಾಯದಿಂದ ನಿಧಿ ಸಂಗ್ರಹಿ ಸಲು ತೀರ್ಮಾನಿಸಿ, ಈ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷದ್‍ಗೆ ವಹಿಸಿದೆ ಎಂದರು.
ಈ ಅಭಿಯಾನದಲ್ಲಿ ದೇಶದ 4 ಲಕ್ಷ ಹಳ್ಳಿ ಗಳೂ ಸೇರಿದಂತೆ ನಗರ, ಪಟ್ಟಣಗಳಲ್ಲಿ ಒಟ್ಟು 11 ಕೋಟಿ ಕುಟುಂಬಗಳನ್ನು ತಲುಪಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಎಲ್ಲಾ ಪಟ್ಟಣ, ನಗರ ಮಾತ್ರವಲ್ಲದೆ, 27 ಸಾವಿರ ಹಳ್ಳಿ ಗಳನ್ನು ತಲುಪಲಾಗುವುದು. ಸುಮಾರು 90 ಲಕ್ಷ ಕುಟುಂಬಗಳನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸಲಾಗುವುದು. ನಮ್ಮ ಕಾರ್ಯಕರ್ತರು ಬಂದಾಗ ನಿಧಿ ಸಮರ್ಪಿಸಬೇಕೆಂದು ಹಿಂದೂ ಸಮುದಾಯದಲ್ಲಿ ಮನವಿ ಮಾಡುತ್ತೇವೆ. ಆದರೆ ಒತ್ತಾಯಪೂರ್ವಕವಾಗಿ ನಿಧಿ ಸಂಗ್ರಹ ಮಾಡುವುದಿಲ್ಲ ಎಂದರು.
10 ರೂ., 100 ರೂ. ಹಾಗೂ ಸಾವಿರ ರೂ. ನಿಧಿ ಸಮರ್ಪಣೆಗೆ ಕೂಪನ್ ನೀಡಲಾಗು ವುದು. 2 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ನೀಡಿದ ಭಕ್ತರಿಗೆ ರಸೀದಿ ನೀಡ ಲಾಗುವುದು. ಜೊತೆಗೆ ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ದೊರೆ ಯಲಿದೆ. ರಾಜ್ಯದಲ್ಲಿ 28 ಸಾವಿರ ತಂಡಗಳು ಈ ಅಭಿಯಾನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಒಂದೊಂದು ತಂಡದಲ್ಲಿ 5 ಮಂದಿ ಕಾರ್ಯ ಕರ್ತರು ಇರಲಿದ್ದಾರೆ. ಮೈಸೂರು ಜಿಲ್ಲೆ ಯಲ್ಲಿಯೂ ನಗರ, ಪಟ್ಟಣ ಪ್ರದೇಶ ಸೇರಿ ದಂತೆ ಎಲ್ಲಾ ಗ್ರಾಮಗಳನ್ನು ತಲುಪಲಾಗು ವುದು ಎಂದು ತಿಳಿಸಿದರು.
ಸಂಗ್ರಹವಾಗುವ ಹಣವನ್ನು 48 ಗಂಟೆ ಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್‍ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಣ ಜಮೆ ಮಾಡುವ ಪ್ರತಿ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಹಣ ಸಂಗ್ರಹಣೆ, ಖಾತೆಗೆ ಪಾವತಿಸುವುದು ಸೇರಿದಂತೆ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ ಎಂದರು.
ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಅಭಿಯಂತರ ರನ್ನು ನಿಯೋಜಿಸಿದೆ. ಮುಂಬೈ, ದೆಹಲಿ, ಚೆನ್ನೈ, ಗುವಾಹಟಿ ಐಐಟಿಗಳು, ಸಿಬಿಆರ್‍ಐ ರೂರ್ಕಿ ಹಾಗೂ ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಮಂದಿರದ ಅಡಿಪಾಯದ ನೀಲನಕ್ಷೆಯ ಕೆಲಸದಲ್ಲಿ ನಿರತವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಮಂದಿರ ಸಂಪೂರ್ಣ ಕಲ್ಲಿನ ಬ್ಲಾಕ್‍ಗಳ ಸಹಾಯದಿಂದ ನಿರ್ಮಿತವಾಗಲಿದೆ. 54 ಸಾವಿರ ಚದರ ಅಡಿಯ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. 360 ಅಡಿ ಉದ್ದ ಹಾಗೂ 235 ಅಡಿ ಅಗಲದ ಮಂದಿರ ದಲ್ಲಿ 3 ಅಂತಸ್ತು ಹಾಗೂ 5 ಮಂಟಪಗಳು ನಿರ್ಮಾಣಗೊಳ್ಳಲಿವೆ. ನೆಲ ಮಾಳಿಗೆಯಲ್ಲಿ 160, ಮೊದಲ ಮಹಡಿಯಲ್ಲಿ 132, ಎರಡನೇ ಮಹಡಿಯಲ್ಲಿ 74 ಕಂಬಗಳು ಬರಲಿವೆ. 2024ರ ಒಳಗೆ ಶ್ರೀರಾಮ ಲಲ್ಲಾ ವಿಗ್ರಹ ವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ಭಾಗ್ಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂದಿರ ನಿರ್ಮಾಣದ ಜೊತೆಗೆ ಅಂತಾ ರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋ ಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಆ್ಯಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶ ನಾಲಯ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗ ಲಿದೆ ಎಂದರು. ಆರ್‍ಎಸ್‍ಎಸ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯರೂ ಆದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ರಾಜ್ಯ ಸ್ವಾಗತ ಸಮಿತಿ ಅಧ್ಯಕ್ಷ ಮಾ.ವೆಂಕಟ ರಾಮ್, ವಿಹೆಚ್‍ಪಿ ಮೈಸೂರು ವಿಭಾಗ ಕಾರ್ಯ ದರ್ಶಿ ರಾ.ಸತೀಶ್, ಮೈಸೂರು ನಗರಾಧ್ಯಕ್ಷ ರಾಜೇಂದ್ರಬಾಬು, ನಗರ ಕಾರ್ಯದರ್ಶಿ ಪ್ರದೀಶ್, ಅಭಿಯಾನದ ಸಾಮಾಜಿಕ ಜಾಲ ತಾಣದ ಪ್ರಮುಖ ಪೃಥ್ವಿ ಗೋಷ್ಠಿಯಲ್ಲಿದ್ದರು.