ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ಪರೀಕ್ಷಾ ಅಕ್ರಮವೆಸಗಿದ ಒಬ್ಬರ ಹೊರತು ಪರೀಕ್ಷೆ ಬರೆದ ಎಲ್ಲರೂ ಪಾಸ್
ಮೈಸೂರು

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ಪರೀಕ್ಷಾ ಅಕ್ರಮವೆಸಗಿದ ಒಬ್ಬರ ಹೊರತು ಪರೀಕ್ಷೆ ಬರೆದ ಎಲ್ಲರೂ ಪಾಸ್

August 10, 2021
  • 157 ಮಂದಿ 625, 289 ಮಂದಿ 623, ಇಬ್ಬರು 622, 449 ಮಂದಿ 621, 21 ಮಂದಿ 620 ಅಂಕ ಗಳಿಕೆ
  • ಪರೀಕ್ಷೆಗೆ ಹಾಜರಾಗಿದ್ದವರು 871443 ವಿದ್ಯಾರ್ಥಿಗಳು; ಇವರಲ್ಲಿ 871442 ಮಂದಿ ಪಾಸ್
  • ಓರ್ವ ತನ್ನ ಬದಲು ಬೇರೊಬ್ಬನ ಮೂಲಕ ಪರೀಕ್ಷೆ ಬರೆಸುವಾಗ ಸಿಕ್ಕಿಬಿದ್ದು ಫೇಲಾದ

ಬೆಂಗಳೂರು, ಆ. 9(ಕೆಎಂಶಿ)- ಕಳೆದ ಜುಲೈನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ, ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಓಎಂಆರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆರು ವಿಷಯಗಳನ್ನು ದಿನಕ್ಕೆ ತಲಾ ಮೂರರಂತೆ ಎರಡೇ ದಿನದಲ್ಲಿ ಪರೀಕ್ಷೆ ಪೂರ್ಣ ಗೊಳಿಸಲಾಗಿತ್ತು. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿ ಗಳನ್ನು ತೇರ್ಗಡೆಗೊಳಿಸುವುದಾಗಿ ಪರೀಕ್ಷಾ ಮುನ್ನವೇ ಸರ್ಕಾರ ಪ್ರಕಟ ಮಾಡಿತ್ತು. ಆದರೆ ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆ ಯವರಿಂದ ಪರೀಕ್ಷೆ ಬರೆಸಿದ್ದ ಆತನನ್ನು ಅನುತ್ತೀರ್ಣಗೊಳಿಸಲಾಗಿದೆ. ಒಟ್ಟಾರೆ ಶೇಕಡ 99.99 ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೂತನ ಸಚಿವ ನಾಗೇಶ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷ ಶೇಕಡ 77.74 ರಷ್ಟು ಫಲಿತಾಂಶ ಪ್ರಕಟ ಗೊಂಡಿತ್ತು. ಈ ಬಾರಿ ಬಹುತೇಕ ಪೂರ್ಣ ಫಲಿತಾಂಶ ಬಂದಿದೆ. ತೇರ್ಗಡೆಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. ಒಟ್ಟಾರೆ ಈ ಬಾರಿ 871443 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 871442 ಮಂದಿ ತೇರ್ಗಡೆಯಾಗಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶ ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ನಂತರ 289 ವಿದ್ಯಾರ್ಥಿಗಳು 623 ಅಂಕ ಪಡೆದರೆ, ಇಬ್ಬರು 622 ಅಂಕ, 449 ಮಂದಿ 621 ಅಂಕ ಪಡೆದರೆ, 21 ವಿದ್ಯಾರ್ಥಿಗಳು 620 ಅಂಕ ಪಡೆದು, ತೇರ್ಗಡೆಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

ಫಲಿತಾಂಶದಲ್ಲಿ ಎ+ಶ್ರೇಣಿಯಲ್ಲಿ 1,28,931(ಶೇ.16.25) ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ 250317(ಶೇ. 32.)ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ 287684(ಶೇ.36.86) ವಿದ್ಯಾರ್ಥಿಗಳು, ಸಿ ಶ್ರೇಣಿಯಲ್ಲಿ 113610(ಶೇ.14.55) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡ 9 ರಷ್ಟು ವಿದ್ಯಾರ್ಥಿಗಳನ್ನು ಗ್ರೇಸ್ ಮಾಕ್ರ್ಸ್ ನೀಡಿ ಪಾಸ್ ಮಾಡಲಾಗಿದ್ದರೆ, 13 ವಿದ್ಯಾರ್ಥಿಗಳಿಗೆ ಗರಿಷ್ಟ 28 ರಷ್ಟು ಗ್ರೇಸ್ ಮಾಕ್ರ್ಸ್ ನೀಡಿ, ತೇರ್ಗಡೆ ಮಾಡಲಾಗಿದೆ ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳು ಎ ಫಲಿತಾಂಶವನ್ನು ಇದೇ ಮೊದಲ ಬಾರಿಗೆ ಪಡೆದುಕೊಂಡಿವೆ ಎಂದರು. ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿದ್ದರೂ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವುದು ಬೇಡ ಎಂಬ ತೀರ್ಮಾನ ತೆಗೆದುಕೊಂಡ ಸರ್ಕಾರ ಸರಳ ರೀತಿಯಲ್ಲಿ ಪರೀಕ್ಷೆ ನಡೆಸಿ, ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಇನ್ನೆಲ್ಲರನ್ನು ಮುಂದಿನ ಶಿಕ್ಷಣಕ್ಕೆ ತೆರಳಲು ಅವಕಾಶ ಮಾಡಿದೆ.

Translate »