ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ತಾಲೂಕು ಆಡಳಿತ ಸಜ್ಜು
ಮೈಸೂರು

ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ತಾಲೂಕು ಆಡಳಿತ ಸಜ್ಜು

August 10, 2021

ಹುಣಸೂರು, ಆ. 9(ಕೆಕೆ)-ಕೊರೊನಾದ ಮೂರನೇ ಅಲೆ ನಿಯಂತ್ರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಆದರೆ ಸಾರ್ವ ಜನಿಕರು ನಿಯಮ ಮತ್ತು ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡುವಂತೆ ಶಾಸಕ ಹೆಚ್.ಪಿ.ಮಂಜು ನಾಥ್ ಕರೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಎರಡು ಅಲೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ 3ನೇ ಅಲೆ ನಮ್ಮನ್ನು ಕಾಡಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು-ಜನಪ್ರತಿನಿಧಿ ಗಳು ಮೈ ಮರೆಯದೆ ಜಾಗೃತರಾಗಬೇಕಿದೆ. ಈ ಹಿಂದೆಯೂ ಸಕಲ ವ್ಯವಸ್ಥೆ ಮಾಡಿ ಕೊಂಡಿದ್ದರಿಂದ ಹೆಚ್ಚಿನ ಸಮಸ್ಯೆಗಳು ಎದುರಾಗಿರಲಿಲ್ಲ. ಈ ಬಾರಿಯೂ ಕೂಡ 500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್, 50 ಬೆಡ್‍ನ ಮಕ್ಕಳ ವಿಶೇಷ ವಾರ್ಡ್ ಹಾಗೂ ಆಕ್ಸಿಜನ್ ಬೆಡ್‍ಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಸಂಬಂಧಿತ ಮಾತ್ರೆ-ಔಷಧಕ್ಕಾಗಿ ಮೆಡಿಕಲ್ಸ್ ಸ್ಟೋರ್ ಮಾಲೀಕರಿಗೂ ಸೂಚಿಸಲಾಗಿದೆ. ಅಗತ್ಯವಿರುವೆಡೆ ಚೆಕ್‍ಪೆÇೀಸ್ಟ್ ಹಾಗೂ ಮಾಸ್ಕ್ ಹಾಕದವರಿಗೆ ದಂಡ ಇನ್ನಿತರ ಕಠಿಣ ಕ್ರಮಗಳನ್ನು ಜಾರಿಗೆ ತಂದು ಜನರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿ ಗಳಿಗೆ ಸೂಚಿಸಿದ್ದೇನೆ ಎಂದರಲ್ಲದೆ ಕೊರೊನಾನಿಂದ ಮೃತಪಟ್ಟ ಕುಟುಂಬ ಗಳಿಗೆ ಸಂತಾಪ ಸೂಚಿಸಿದರು.

ಪ್ರತಿನಿತ್ಯ 3 ಸಾವಿರ ಕೋವಿಡ್ ಡೋಸ್ ಲಸಿಕೆ ನೀಡಿ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿದರೆ, ಕೊರೊನಾಕ್ಕೆ ಸೆಡ್ಡು ಹೊಡೆಯ ಬಹುದು. ವಾರಕ್ಕೆ ಕನಿಷ್ಠ 10 ಸಾವಿರ ಮಂದಿಗೆ ಲಸಿಕೆ ನೀಡುವಂತೆ ಜಿಲ್ಲಾ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.

ಗೌರವ ಸಮರ್ಪಣೆ: ಮೊದಲು ಮತ್ತು ಎರಡನೇ ಕೋವಿಡ್ ಅಲೆ ವೇಳೆ ಸಮರ್ಥ ವಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆ ಗೊಂಡಿರುವ ತಹಸೀಲ್ದಾರ್ ಬಸವರಾಜ್, ವಾರಿಯಾರ್ಸ್‍ಗಳಾಗಿ ಕಾರ್ಯ ನಿರ್ವಹಿಸಿದ್ದ ಡಿವೈಎಸ್ಪಿ ರವಿಪ್ರಸಾದ್, ವೈದ್ಯರು, ಆಶಾ -ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಗ್ರಾಪಂ ಅಧ್ಯಕ್ಷರು ಹಾಗೂ ಶವಸಂಸ್ಕಾರದಲ್ಲಿ ತೊಡಗಿದ ತಂಡವನ್ನು ಆ.15ರಂದು ನಡೆಯುವ ಸ್ವಾತಂತ್ರೋತ್ಸವದ ಸರಳ ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು ಎಂದರು.

ಮಾಜಿ ಸೈನಿಕರಿಂದ ಅಖಂಡ ಜ್ಯೋತಿ: ಹಳೇ ಬಸ್ ನಿಲ್ದಾಣ ಮುಂಭಾಗ ಸಂವಿಧಾನ ವೃತ್ತ ಉದ್ಘಾಟನೆ ಮತ್ತು ನಂತರ ಶಾಸಕ ಕಚೇರಿಯಲ್ಲಿ `ನಮ್ಮ ಸೈನ್ಯ ನಮ್ಮ ಹೆಮ್ಮೆ’ ಎಂಬ ಅಖಂಡ ಜ್ಯೋತಿ ಸ್ಥಾಪಿಸಿದ್ದು, ಇದನ್ನು ಸೈನ್ಯದಲ್ಲಿ ನಿವೃತ್ತಿ ಯಾಗಿ ಆಗಮಿಸಿರುವ ಕಟ್ಟೆಮಳಲವಾಡಿಯ ವಿಠಲಮೂರ್ತಿ ಹಾಗೂ ಹನಗೋಡಿನ ಅನಿಲ್ ಅವರು ಅಖಂಡ ಜ್ಯೋತಿ ಬೆಳಗಿಸುವ ಕಾರ್ಯಕ್ರಮದ ಮೂಲಕ ದೇಶದ ಸೈನಿಕರನ್ನು ಗೌರವಿಸುವ ಕೆಲಸ ಮಾಡ ಲಾಗುತ್ತಿದೆ ಎಂದರು.

15 ಮಕ್ಕಳಲ್ಲಿ ಪಾಸಿಟಿವ್: ತಾಲೂಕಿ ನಲ್ಲಿ ಈಗಾಗಲೇ 12ರಿಂದ 17 ವರ್ಷದೊ ಳಗಿನ 15 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕ ತಂದಿದೆ. ಆ.23ರಿಂದ ಶಾಲೆಗಳು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ ನಗರಸಭೆ ಹಾಗೂ ಗ್ರಾಪಂಗಳು ಸ್ವಚ್ಛತೆ ಮತ್ತು ಮುಂಜಾಗ್ರತೆ ಕ್ರಮ ವಹಿಸಲು ಸೂಚಿಸಿದ್ದೇನೆ. ನವೋದಯ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ತಿಳಿಸಿದ್ದೇನೆ ಎಂದರು.

ನಗರಸಭೆ ಅಧ್ಯಕ್ಷೆ ಅನುಷಾ ರಘು, ತಾಪಂ ಇಓ ಅಧಿಕಾರಿ ಹೆಚ್.ಡಿ.ಗಿರೀಶ್, ತಹಸೀಲ್ದಾರ್ ಮೋಹನ್, ಡಿವೈಎಸ್ಪಿ ರವಿಪ್ರಸಾದ್, ಟಿಹೆಚ್‍ಓ ಡಾ.ಕೀರ್ತಿ ಕುಮಾರ್, ಪೌರಾಯುಕ್ತ ರಮೇಶ್, ಎಇಇ ಬೋಜರಾಜ್, ಸಿಡಿಪಿಓ ರಶ್ಮಿ ಹಾಗೂ ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

Translate »