ಆ.26ರಿಂದ ಪಂಚಮಸಾಲಿ ಪ್ರತಿಜ್ಞಾ  ಪಂಚಾಯತ್ ಅಭಿಯಾನ
ಮೈಸೂರು

ಆ.26ರಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ

August 10, 2021

ಮೈಸೂರು, ಆ.9 (ಎಸ್‍ಬಿಡಿ)- ಪಂಚಮಸಾಲಿ ಹಾಗೂ ಗೌಡ ಲಿಂಗಾಯತ ರಿಗೆ 2ಎ ಮೀಸಲಾತಿ ಸಂಬಂಧ ಸರ್ಕಾರ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದೊಂದಿಗೆ ಆಗಸ್ಟ್ 26ರಿಂದ 30 ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾ ಯತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಮೈಸೂರಿನ ಹೊಸಮಠ ಆವರಣದಲ್ಲಿ ಸೋಮವಾರ ನಡೆದ ವಿವಿಧ ಜಿಲ್ಲೆಗಳ ಪಂಚಮಸಾಲಿ ಹಾಗೂ ಗೌಡ ಲಿಂಗಾಯತ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾv Àನಾಡಿ, ಪಂಚಮಸಾಲಿ ಹಾಗೂ ಗೌಡ ಲಿಂಗಾಯತರಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗ ಳೂರಿನವರೆಗೆ 750 ಕಿಮೀ ಐತಿಹಾಸಿಕ ಪಾದಯಾತ್ರೆಯೊಂದಿಗೆ ಅರಮನೆ ಮೈದಾನ ಹಾಗೂ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಸಿ ನಮ್ಮ ಹಕ್ಕೊತ್ತಾಯ ಮಂಡಿಸಿದ್ದೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾಗಿದೆ. ಈ ಹಿಂದೆ ನಮ್ಮ ಸಮಾವೇಶಕ್ಕೆ ಸಹಕರಿಸಿದ್ದ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಹಾಗಾಗಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮತ್ತೆ ನೆನಪಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದರು.

ಅ.1ಕ್ಕೆ ಧರಣಿ ಎಚ್ಚರಿಕೆ: ಪಂಚಮ ಸಾಲಿ ಹಾಗೂ ಗೌಡ ಲಿಂಗಾಯತರಿಗೆ 2ಎ ಮೀಸಲಾತಿಗೆ ಸಂಬಂಧಿಸಿದಂತೆ 2021ರ ಸೆಪ್ಟೆಂಬರ್ 15ರೊಳಗೆ ತೀರ್ಮಾ ನಿಸುವುದಾಗಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಪ್ರಮುಖರ ಸಭೆ ನಡೆಸಿ, ಆ.26ರಿಂದ 30ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನದ ಭಾಗವಾಗಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗ ಳೂರಿನವರೆಗೆ ಜಾಗೃತಿ ಅಭಿಯಾನ ನಡೆಸುವ ಮೂಲಕ ಸರ್ಕಾರಕ್ಕೆ ನೆನಪಿ ಸಲಾಗುವುದು. ಹಿಂದಿನ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈಗ ಸಿಎಂ ಆಗಿರುವುದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸವಿದೆ. ಸರ್ಕಾರ ಭರವಸೆ ಈಡೇರಿ ಸದಿದ್ದರೆ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಜನ್ಮ ದಿನವಾದ ಅಕ್ಟೋಬರ್ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಮತ್ತೆ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿದ್ದರು. ಲಿಂಗಾಯತ ಗೌಡ ಮಹಾಸಭಾದ ರಾಜ್ಯಾಧ್ಯಕ್ಷ ಆಲನ ಹಳ್ಳಿ ಪುಟ್ಟಸ್ವಾಮಿ, ಪಂಚಮಸಾಲಿ ಗೌಡ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕರೂ ಆದ ರೈತ ನಾಯಕ ಮಲ್ಲೇಶ್, ಬೆಂಗಳೂರಿನ ನಟರಾಜ್, ಹಾಸನದ ಶಿವಕುಮಾರ್, ಮಂಡ್ಯದ ಎಲ್.ಬಿ.ಪಾಟೀಲ್, Éಕೊಡಗಿನ ಬಾಬಿತಾ ಮುತ್ತಣ್ಣ, ಗಂಗಾಂಬಿಕಾ, ಗೌರಮ್ಮ, ವಿರೂಪಾಕ್ಷಮ್ಮ, ಶಂಭು ಪಟೇಲ್ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖರು ಭಾಗವಹಿಸಿದ್ದರು.

Translate »