ಮೈಸೂರು, ಡಿ.7(ಆರ್‍ಕೆ)- ಮುಂದಿನ ಶೈಕ್ಷಣಿಕ ವರ್ಷದಿಂದ ಫೊರೆನ್ಸಿಕ್ ಸೈನ್ಸಸ್ ಕೋರ್ಸ್ ಆರಂಭಿಸಲು ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯು ನಿರ್ಧರಿಸಿದೆ.
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಬಿಎಸ್ಸಿ ಪದವಿಯಲ್ಲಿ ಫೊರೆನ್ಸಿಕ್ ಸೈನ್ಸ್ ಕೋರ್ಸ್ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಹಾಗೂ ಈ ಕೋರ್ಸ್‍ಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಗಳಿರುವುದರಿಂದ ಹಲವು ವಿಜ್ಞಾನ ಕೋರ್ಸ್ ಹೊಂದಿರುವ ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ ಪ್ರತ್ಯೇಕ ಫೊರೆನ್ಸಿಕ್ ಸೈನ್ಸ್ ವಿಭಾಗ ತೆರೆಯಬೇಕೆಂದು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಸಲಹೆ ನೀಡಿದರು.
ಈಗಾಗಲೇ ಕಲಾ ನಿಕಾಯದ ಪದವಿ ಯಲ್ಲಿ ಕ್ರಿಮಿನಾಲಜಿ ಇರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಫೊರೆ ನ್ಸಿಕ್ ಸೈನ್ಸ್ ಕೋರ್ಸ್ ಆರಂಭಿಸಲಾಗು ವುದು ಎಂದು ಪ್ರಕಟಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ಅವರು, ಅದಕ್ಕಾಗಿ ಒಂದು ಉಪಸಮಿತಿ ರಚಿಸಿ ರೂಪುರೇಷೆ ಸಿದ್ಧಪಡಿಸಿ, ಮುಂದಿನ ಶೈಕ್ಷಣಿಕ ವರ್ಷ ದಿಂದ ಫೊರೆನ್ಸಿಕ್ ಸೈನ್ಸ್ ವಿಭಾಗವನ್ನು ಆರಂಭಿಸಲಾಗುವುದು ಎಂದರು.
ಶೇ.25ರಷ್ಟು ಹಾಜರಾತಿ: ಅಂತಿಮ ವರ್ಷದ ಪದವಿ ಕಾಲೇಜುಗಳನ್ನು ಆರಂ ಭಿಸಿದ್ದರೂ, ಕೇವಲ ಶೇ.25ರಷ್ಟು ವಿದ್ಯಾರ್ಥಿ ಗಳು ಮಾತ್ರ ಹಾಜರಾಗುತ್ತಿದ್ದಾರೆ. ಬಹು ತೇಕ ಮಂದಿ ಆನ್‍ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ರೆಗ್ಯುಲರ್ ಕ್ಲಾಸ್ ನಡೆಸಿದರೂ ಗೈರಾಗುತ್ತಿದ್ದಾರೆ. ಈ ಬಗ್ಗೆ ಒಂದು ವಾರದೊಳಗೆ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗು ವುದು ಎಂದು ಕುಲಪತಿಗಳು ತಿಳಿಸಿದರು.
ಪೀಠ ಸ್ಥಾಪನೆಗೆ ಸಮ್ಮತಿ: ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಮಂಟೇಸ್ವಾಮಿ, ಸಿದ್ದ ಪ್ಪಾಜಿ ಹಾಗೂ ರಾಚಪ್ಪಾಜಿ ಅವರ ಹೆಸರಿ ನಲ್ಲಿ ಲೊಕ್ಕನಹಳ್ಳಿ, ಪಿಜಿ ಪಾಳ್ಯ, ಮಿಣ್ಯಂ, ಮಲೆ ಮಹದೇಶ್ವರಬೆಟ್ಟ, ಪೊನ್ನಾಚಿ ಮತ್ತು ಹುತ್ತೂರು ಗ್ರಾಮ
ಪಂಚಾಯ್ತಿ ವ್ಯಾಪ್ತಿಯ ಇಬ್ಬರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮಾಡಲು ಅವಕಾಶ ಕಲ್ಪಿಸುವುದಾಗಿ ಸಭೆಯು ನಿರ್ಣಯಿಸಿತು. ಇದೇ ವೇಳೆ ವಿಶ್ವವಿದ್ಯಾನಿಲಯದ ಅಧ್ಯಾ ಪಕೇತರ ವೃಂದದ ನೇಮಕಾತಿ ನಿಯಮಗಳ ಅಧಿನಿಯಮ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿರುವಂತೆ ಯಥಾವತ್ತಾಗಿ ಅನುಷ್ಠಾನಗೊಳಿಸಲು ಅಕಾಡೆಮಿಕ್ ಕೌನ್ಸಿಲ್ ಸಭೆಯು ತೀರ್ಮಾನಿಸಿತು. ಕುಲಸಚಿವ ಪ್ರೊ. ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್, ಶೈಕ್ಷಣಿಕ ಮಂಡಳಿ ಸದಸ್ಯರಾದ ಆರ್.ಧರ್ಮಸೇನ, ಡಾ.ನಿರಂ ಜನ್, ಪ್ರೊ.ನಿರಂಜನ ವಾನಳ್ಳಿ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಬಲೀಕರಣ ಕೇಂದ್ರ ಸ್ಥಾಪನೆ
ಮೈಸೂರು,ಡಿ.7(ಆರ್‍ಕೆ)-ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮೈಸೂರು ವಿಶ್ವವಿದ್ಯಾನಿಲಯವು ದೃಷ್ಟಿ ವಿಶ್ವಾಸಿಗರ ಸಮನ್ವಯ ಸಬಲೀಕರಣ ಕೇಂದ್ರವನ್ನು ಸ್ಥಾಪಿಸಲು ಶೈಕ್ಷಣಿಕ ಮಂಡಳಿ ಒಪ್ಪಿಗೆ ಸೂಚಿಸಿದೆ.
ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮಾಡಲು ಅವಕಾಶ ನೀಡಿ ಅವರ ಸಬಲೀ ಕರಣ ಮಾಡಲು ಸರ್ಕಾರವು ವಿವಿಗಳಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪಿಸಬೇಕೆಂದು ಆದೇಶಿಸಿರು ವುದರಿಂದ ನ.13ರಂದು ನಡೆದ ಅಧಿನಿಯಮ ರಚನಾ ಸಮಿತಿ ಸಭೆಯಲ್ಲಿ ದೃಷ್ಟಿ ವಿಶ್ವಾಸಿಗರ ಸಮನ್ವಯ ಸಬಲೀಕರಣ ಕೇಂದ್ರ ಸ್ಥಾಪಿಸುವ ಸಂಬಂಧ ಕರಡು ಅಧಿನಿಯಮ ಸಿದ್ಧಪಡಿಸಿರುವುದಕ್ಕೆ ಇಂದಿನ ಶೈಕ್ಷಣಿಕ ಮಂಡಳಿ ಸಭೆಯು ಅನುಮೋದಿಸಿತು.
ಚಿನ್ನದ ಪದಕ ದತ್ತಿ: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಡಾ.ಎಸ್.ಗುರುಮೂರ್ತಿ ಅವರ ಮನವಿ ಮೇರೆಗೆ ಶ್ರೀರಾಮುಲು ಯಶೋಧಮ್ಮ ಅವರ ಸ್ಮರಣಾರ್ಥ ಎರಡು ಚಿನ್ನದ ಪದಕ ದತ್ತಿ ಸ್ಥಾಪಿಸಲು ಇಂದಿನ ಸಭೆಯು ಒಪ್ಪಿಗೆ ಸೂಚಿಸಿದೆ.
ಘಟಕ ಕಾಲೇಜು: ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜ ನ್ನಾಗಿ ಆರಂಭಿಸಲು ಸಭೆಯು ಸಮ್ಮತಿಸಿದೆ. ಪ್ರಸ್ತುತ ಕಾಲೇಜು ಕಟ್ಟಡವನ್ನು ವಿಶ್ವವಿದ್ಯಾ ನಿಲಯವು ವಹಿಸಿಕೊಂಡು 2021-22ನೇ ಶೈಕ್ಷಣಿಕ ಸಾಲಿನಿಂದ ತರಗತಿ ಆರಂಭಿಸಲು ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು ಸಭೆಯು ತೀರ್ಮಾನಿಸಲಾಯಿತು.
ನಿಯಮ ಪರಿಷ್ಕರಣೆ: ಅನುಕಂಪದ ಆಧಾರದಲ್ಲಿ ನೇಮಕ ಮಾಡುವ ಸಂಬಂಧ ಸರ್ಕಾರವು ಅಧಿನಿಯಮವನ್ನು ಪರಿಷ್ಕರಿಸಿರುವುದರಿಂದ ಕರಡು ನಿಯಮದಂತೆ ವಿಶ್ವವಿದ್ಯಾನಿಲಯವು ಅನುಷ್ಠಾನಗೊಳಿಸಲು ಶೈಕ್ಷಣಿಕ ಮಂಡಳಿ ಸಭೆಯು ನಿರ್ಧರಿಸಿತು.