ಬೆಂಗಳೂರು, ಡಿ.7 (ಕೆಎಂಶಿ)-ಸಾಫ್ಟ್‍ವೇರ್ ದೋಷದಿಂದಾಗಿ ಪಹಣಿಯ ಬೆಳೆ ಕಾಲಂನಲ್ಲಿ ಖುಷ್ಕಿ ಎಂದು ಅಧಿಕಾರಿಗಳು ನಮೂದು ಮಾಡುತ್ತಿದ್ದು, ರೈತರಿಗೆ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರ ಮೇಲೆ ವಿಧಾನಸಭೆ ಸ್ಪೀಕರ್ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮುಗಿಬಿದ್ದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಡಿ.ಪಿ.ರಾಜೇಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಲು ಕಂದಾಯ ಸಚಿವ ಅಶೋಕ್ ಅವರು ಮುಂದಾ ಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು, ಅಧಿಕಾರಿಗಳು ನೀಡಿದ ವರದಿಯನ್ನು ಸದನಕ್ಕೆ ಒಪ್ಪಿಸಬೇಡಿ ಎಂದು ಅಸಮಾಧಾನ ಹೊರ ಹಾಕಿದರು. ಸಭಾಧ್ಯಕ್ಷರು ಕಳೆದ ಎರಡು ವರ್ಷಗಳಿಂದ ಸಾಫ್ಟ್‍ವೇರ್ ದೋಷದಿಂದಾಗಿ ಪಹಣಿಯ ಬೆಳೆ ಕಾಲಂನಲ್ಲಿ ಖುಷ್ಕಿ ಎಂದು ಅಧಿಕಾರಿಗಳು ನಮೂದು ಮಾಡುತ್ತಿದ್ದಾರೆ. ಇದರ ಪರಿಣಾಮ ಅಡಿಕೆ, ಏಲಕ್ಕಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಸಾಲ ಕೊಡುತ್ತಿಲ್ಲ. ನೀವು ಸಾಫ್ಟ್‍ವೇರ್ ಅನ್ನು ಖಾಸಗಿ ಏಜೆನ್ಸಿಗಳಿಗೆ ಕೊಟ್ಟಿರುತ್ತೀರಿ. ಅದನ್ನು ಕಾಲಮಿತಿಯೊಳಗೆ ಸರಿಪಡಿಸ ದಿದ್ದರೆ ನಿಮ್ಮ ಅಧಿಕಾರಿಗಳೇ ಸರ್ಕಾರದ ಮರ್ಯಾದೆ ಕಳೆಯುತ್ತಾರೆ ಎಂದರು.
ಮೊದಲು ಈ ಸಮಸ್ಯೆಯನ್ನು ಸರಿಪಡಿಸಿ. ಇದರಿಂದ ಗ್ರಾಮೀಣ ಭಾಗಗಳಲ್ಲಿ ರೈತರು ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನೀಡುವ ವರದಿಯನ್ನು ಸದನದಲ್ಲಿ ಮಂಡಿಸಬೇಡಿ. ವಾಸ್ತವ ಏನಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸ್ಪೀಕರ್ ಸಲಹೆ ಮಾಡಿದರು. ಇದಕ್ಕೆ ದನಿಗೂಡಿಸಿದ ಶಾಸಕರಾದ ಅರಗ ಜ್ಞಾನೇಂದ್ರ, ರಾಜೇಗೌಡ, ಎಚ್.ಕೆ.ಕುಮಾರ ಸ್ವಾಮಿ, ಶಿವಲಿಂಗೇಗೌಡ ಸೇರಿದಂತೆ ಮತ್ತಿತರರು, ರೈತರು ಎದುರಿಸುತ್ತಿರುವ ಕಷ್ಟಗಳನ್ನು ಸದನದ ಗಮನಕ್ಕೆ ತಂದರು. ನಾನು ಅನೇಕ ಕಡೆ ಭೇಟಿ ಕೊಟ್ಟಾಗ ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಸಾಫ್ಟ್‍ವೇರ್ ಎಲ್ಲೆಲ್ಲಿ ಈ ರೀತಿ ತೊಂದರೆಯಾಗಿದೆಯೋ ಅದನ್ನು ಸರಿಪಡಿಸಬೇಕೆಂದು ಈಗಾಗಲೇ ಸೂಚಿಸಿದ್ದೇನೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಹೇಳಿದರು.
ಇದಕ್ಕೆ ಮತ್ತೆ ಕೆಂಡ ಕಾರಿದ ಸದಸ್ಯರು ನಿಮ್ಮ ಬಗ್ಗೆ ನಮಗೆ ಗೌರವವಿದೆ. ನೀವು ಅಧಿಕಾರಿಗಳಿಂದ ಮಾಹಿತಿ ಪಡೆದು ಉಂಟಾಗಿರುವ ಲೋಪ ಸರಿಪಡಿಸಿ. ಇಲ್ಲದಿದ್ದರೆ ರೈತರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಈ ಬಗ್ಗೆ ಪದೇ ಪದೆ ಪ್ರಸ್ತಾಪಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.