ಮೈಸೂರು, ಸೆ.12(ಎಂಕೆ)- ನಾಡಹಬ್ಬ ದಸರಾ ಮಹೋತ್ಸವ ಚಟುವಟಿಕೆ ಗರಿಗೆದ ರಿದ್ದು, ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಶನಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉಪಸ್ಥಿತಿ ಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.
ಸಭೆ ಬಳಿಕ ಮಾಧ್ಯಮಗಳಿಗೆ ವವರಿ ಸಿದ ಸಚಿವ ಎಸ್.ಟಿ.ಸೋಮಶೇಖರ್, ಕೋವಿಡ್-19 ಹಿನ್ನೆಲೆ ಅ.17ಕ್ಕೆ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದು, ಈ ವರ್ಷ ಸರಳ ಮತ್ತು ಸಾಂಪ್ರದಾಯಿಕವಾಗಿ ನಾಡಹಬ್ಬ ನಡೆಯಲಿದೆ. ಅ.2ರಂದು ಮಧ್ಯಾಹ್ನ 12.18ಕ್ಕೆ ಗಜಪಡೆಯನ್ನು ಸ್ವಾಗತಿಸಲಾಗುವುದು. ಈ ಹಿಂದೆ ವೀರನಹೊಸಹಳ್ಳಿಯಲ್ಲಿ ಆಯೋಜಿಸುತ್ತಿದ್ದ ಗಜಪಯಣ ಸಮಾರಂಭ ಈ ಬಾರಿ ಇರುವುದಿಲ್ಲ. ಡಿಸಿ ಮತ್ತಿತರ ಅಧಿಕಾರಿಗಳ ನೇತೃತ್ವ ದಲ್ಲಿ ನೇರವಾಗಿ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯ ಆಗಮನವಾಗಲಿದೆ. ಆ ಕಾರ್ಯಕ್ರಮಕ್ಕೆ ಗಣ್ಯರು ಸೇರಿ 50 ಮಂದಿಗಷ್ಟೇ ಅವಕಾಶ ನೀಡಲಾಗುವುದು ಎಂದರು.
ದಸರಾ ಉದ್ಘಾಟನೆ: ಈ ಬಾರಿಯ ದಸರಾ ಮಹೋತ್ಸವ ಕೊರೊನಾ ವಾರಿಯರ್ಸ್ ಗಳಿಂದ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆಯಾಗಲಿದೆ. ಐವರು ಕೊರೊನಾ ವಾರಿ ಯರ್ಸ್‍ಗಳ ಪೈಕಿ ಒಬ್ಬರು ದಸರಾ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಐವರಿಗೂ ಸನ್ಮಾನ ಮಾಡಲಾಗುತ್ತದೆ. ಅಲ್ಲದೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸಿದವರನ್ನೂ ಅದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಐವರು ಕೊರೊನಾ ವಾರಿಯರ್ಸ್‍ಗಳ ಆಯ್ಕೆ ಜವಾಬ್ದಾರಿಯನ್ನು ಆಯಾಯ ಇಲಾಖೆ ಮುಖ್ಯಸ್ಥರಿಗೆ ವಹಿಸಲಾಗಿದೆ. ಬಳಿಕ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ದಸರಾ ಉದ್ಘಾಟಕರ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು. ಅ.17ರಂದು ಬೆಳಗ್ಗೆ 7.45 ರಿಂದ 8.15ರೊಳಗಿನ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.
ಜಂಬೂ ಸವಾರಿ: ವಿಶ್ವಪ್ರಸಿದ್ಧ ಜಂಬೂಸವಾರಿಯೂ ಅರಮನೆ ಆವರಣದಲ್ಲೇ ನಡೆಯಲಿದ್ದು, 2 ಸಾವಿರ ಮಂದಿಗೆ ವೀಕ್ಷಣೆಗೆ ಅವಕಾಶ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕೇಂದ್ರ ಸರ್ಕಾರ ಅನುಮತಿ ನೀಡಿದರೆ 2 ಸಾವಿರ ಆಸನಗಳು ಹಾಗೂ ಪಾಸ್ ವ್ಯವಸ್ಥೆ ಮಾಡಲಾಗುವುದು. ಅನುಮತಿ ಸಿಗದಿದ್ದರೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರವೇ ಮೆರವಣಿಗೆ ನಡೆಸಲಾಗುವುದು. ನಂದಿಧ್ವಜ ಪೂಜೆಗೂ ಮುಖ್ಯಮಂತ್ರಿಗಳ ಜೊತೆಗೆ ಕೆಲವೇ ಗಣ್ಯರಿಗೆ ಅವಕಾಶವಿರುತ್ತದೆ. ಮೆರವಣಿಗೆಯಲ್ಲಿ ಭಾಗವಹಿಸುವ ಸಾಂಸ್ಕøತಿಕ ಕಲಾತಂಡಗಳ ಸಂಖ್ಯೆಯನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದರು.
ಒಂದೊಂದು ಪೈಸೆಯೂ ಲೆಕ್ಕ: ದಸರಾ ಮಹೋತ್ಸವ ಖರ್ಚಿನ ಒಂದೊಂದು ಪೈಸೆ ಲೆಕ್ಕವನ್ನೂ ನೀಡಲಾಗುವುದು. ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡುವ ಮಾತೇ ಇಲ್ಲ. ಕಳೆದ ವರ್ಷ ಖರ್ಚಾಗಿದ್ದೆಷ್ಟು ಎಂಬುದು ಗೊತ್ತಿಲ್ಲ. ಆದರೆ ಈ ವರ್ಷ ಪ್ರತಿಯೊಂದೂ ಲೆಕ್ಕಾಚಾರದ ಮೂಲಕವೇ ನಡೆಯಲಿದೆ. ದಸರಾ ಅನುದಾನವನ್ನು ಕೆಲ ಅಭಿವೃದ್ಧಿ ಕೆಲಸಕ್ಕೂ ಬಳಸಿಕೊಳ್ಳಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. ಹಾಗೆಯೇ ನವರಾತ್ರಿಯಲ್ಲಿ ಚಾಮುಂಡಿಬೆಟ್ಟದಲ್ಲೂ ವಿಶೇಷ ಪೂಜೆ ನೆರವೇರಲಿದೆ. `ಸಂಗೀತ ವಿದ್ವಾನ್’ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಸಮಿತಿ ರಚಿಸುವಂತೆ ಸಚಿವರಾದ ಸಿ.ಟಿ.ರವಿ ಅವರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.
ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಆರ್.ಧರ್ಮ ಸೇನ, ಕೆ.ಟಿ.ಶ್ರೀಕಂಠೇಗೌಡ, ಕೆ.ಮಹದೇವ, ಹರ್ಷವರ್ಧನ್, ಅಶ್ವಿನ್‍ಕುಮಾರ್, ಮೇಯರ್ ತಸ್ನೀಂ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಡಿಸಿ ಬಿ.ಶರತ್, ನಗರ ಪೆÇಲೀಸ್ ಆಯುಕ್ತ ಚಂದ್ರಗುಪ್ತ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಅಲೆಕ್ಸಾಂಡರ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಯುವ ಸಬಲೀಕರಣ ಇಲಾಖೆ ಶ್ರೀನಿವಾಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.