ಕೊರೊನಾ ಸೋಂಕಿನ ಸೊಕ್ಕಡಗಿಸಲು ರಾಜ್ಯ ಸರ್ಕಾರ ಕಠಿಣ ನಿರ್ಧಾರ ಇಂದು ರಾತ್ರಿಯಿಂದ 14 ದಿನ ಕೋವಿಡ್ ಕಫ್ರ್ಯೂ ಜಾರಿ
News

ಕೊರೊನಾ ಸೋಂಕಿನ ಸೊಕ್ಕಡಗಿಸಲು ರಾಜ್ಯ ಸರ್ಕಾರ ಕಠಿಣ ನಿರ್ಧಾರ ಇಂದು ರಾತ್ರಿಯಿಂದ 14 ದಿನ ಕೋವಿಡ್ ಕಫ್ರ್ಯೂ ಜಾರಿ

April 27, 2021

ಬೆಂಗಳೂರು, ಏ. 26(ಕೆಎಂಶಿ)- ಕೋವಿಡ್ ಸೋಂಕಿನ ಸೊಕ್ಕಡಗಿಸಲು ರಾಜ್ಯದಲ್ಲಿ 14 ದಿನ ಕೋವಿಡ್ ಕಫ್ರ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಮಂತ್ರಿ ಲಾಕ್‍ಡೌನ್ ಅನುಷ್ಠಾನ ಬೇಡ ಎಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನತಾ ಲಾಕ್‍ಡೌನ್ ಅನ್ನು ಕಫ್ರ್ಯೂ ಮೂಲಕ ಅನುಷ್ಠಾನಗೊಳಿಸುತ್ತಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಫ್ರ್ಯೂ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ನಾಳೆ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೂ ಕಫ್ರ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದ್ದೇವೆ ಎಂದರು. ಬೆಳಗ್ಗೆ 10 ರ ನಂತರ ಎಲ್ಲಾ ವ್ಯಾಪಾರ ಸ್ಥಗಿತಗೊಳಿಸಬೇಕು. ಪೊಲೀಸರು ಬಲಪ್ರಯೋಗಿಸಲು ಅವಕಾಶ ನೀಡಬೇಡಿ. ಈ ಸಮಯ ಮೀರಿದ ನಂತರ ಸಾರ್ವಜನಿಕರು ಬೀದಿಗಿಳಿಯಬಾರದು ಎಂದರು. ಕೃಷಿ, ವೈದ್ಯಕೀಯ ಸೇವೆ, ಕೈಗಾರಿಕಾ ವಲಯಗಳಿಗೆ ಕಫ್ರ್ಯೂನಿಂದ ವಿನಾಯಿತಿ ನೀಡಲಾಗಿದೆ.

ಆದರೆ ಕೈಗಾರಿಕಾ ವಲಯದ ಭಾಗವಾಗಿರುವ ಗಾರ್ಮೆಂಟ್ ವಲಯಕ್ಕೆ ಇದರಿಂದ ವಿನಾಯಿತಿ ಇಲ್ಲ. ರೈತರು ಬೆಳೆದ ಬೆಳೆ ಮತ್ತು ತರಕಾರಿಗಳನ್ನು ಬೆಳಗ್ಗಿನ ನಾಲ್ಕು ಗಂಟೆಗಳ ಅವಧಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂತರಜಿಲ್ಲೆ ಮತ್ತು ಅಂತರರಾಜ್ಯ ಸರಕು ಸಾಗಾಣಿಕೆಗೆ ನಿರ್ಬಂಧ ಹೇರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‍ಗಳು ರಸ್ತೆಗಿಳಿಯುವಂತಿಲ್ಲ. ಆದರೆ ರೈಲು ಮತ್ತು ವಿಮಾನದ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು. ಮಹಾರಾಷ್ಟ್ರಕ್ಕೂ ಮೀರಿ ಕರ್ನಾಟಕದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು. ಮೇ 10 ರ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ, ಇದೇ ಕಠಿಣ ಕ್ರಮ ಮುಂದುವರೆಯಲಿದೆ. ಇದಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ಕೇಂದ್ರ, ರಾಜ್ಯ ಸರ್ಕಾರದ ಕಚೇರಿಗಳು ಬ್ಯಾಂಕ್‍ಗಳು, ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸರ್ಕಾರಿ ಕಚೇರಿಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಬ್ಯಾಂಕುಗಳ ವಹಿವಾಟು ಸಮಯ ಬದಲಾವಣೆಯಾಗಲಿದೆ ಎಂದರು. ಇದು ಲಾಕ್‍ಡೌನ್ ಅಲ್ಲ, ಸೋಂಕು ನಿವಾರಣೆಗೆ ಕಠಿಣ ತೀರ್ಮಾನ ಕೈಗೊಂಡಿದ್ದೇವೆ. ಜನತೆ ಸಹಕಾರ ನೀಡಬೇಕು. ಮುಖಗವಸು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವ ಕಾಪಾಡುವ ಮೂಲಕ ಸೋಂಕು ನಿವಾರಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಮುಖ್ಯಮಂತ್ರಿ ಯವರು ಮನವಿ ಮಾಡಿಕೊಂಡರು. ಇನ್ನು ಮುಂದೆ ಸೋಂಕು ಪೀಡಿತ ರೋಗಿಗಳಿಗೆ ಆಕ್ಸಿಜನ್ ಕೊರತೆ ಇರುವುದಿಲ್ಲ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಆಕ್ಸಿಜನ್ ಒದಗಿಸಲು ಸಮ್ಮತಿಸಿದೆ. ಅಷ್ಟೇ ಅಲ್ಲ ಸೋಂಕಿನ ಚಿಕಿತ್ಸೆ ಅತ್ಯವಶ್ಯವಾದ ರೆಮ್ಡಿಸಿವಿರ್ ಚುಚ್ಚುಮದ್ದನ್ನು 50 ಸಾವಿರದಿಂದ 1.22 ಲಕ್ಷಕ್ಕೆ ಹೆಚ್ಚಿಸಿದೆ. ಭಯ ಪಡುವುದು ಬೇಡ, ಆದರೆ ಎಚ್ಚರಿಕೆಯಿಂದ ಇರಿ. ಸರ್ಕಾರ ಸೋಂಕು ನಿವಾರಣೆಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಿದೆ ಎಂದರು.

Translate »