ರಾಸಾಯನಿಕ ಗೊಬ್ಬರ ಬೆಲೆ ಇಳಿಕೆಗೆ ಆಗ್ರಹ
ಮೈಸೂರು

ರಾಸಾಯನಿಕ ಗೊಬ್ಬರ ಬೆಲೆ ಇಳಿಕೆಗೆ ಆಗ್ರಹ

April 27, 2021

ಮೈಸೂರು,ಏ.26(ಪಿಎಂ)- ರಾಸಾ ಯನಿಕ ಗೊಬ್ಬರದ ಬೆಲೆ ಇಳಿಕೆ ಮಾಡು ವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸಂಸದರ ಮೂಲಕ ಸೋಮವಾರ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಆಗಮಿಸಿದ ಸಂಘದ ಮುಖಂ ಡರು, ಸಂಸದರು ಇಲ್ಲದ ಕಾರಣ ಅವರ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಸಗೊಬ್ಬರದ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದ ರೈತ ಮುಖಂಡರು, ಕೋವಿಡ್ ಕಾರಣಕ್ಕೆ ಪ್ರತಿಭಟನೆ ಕೈಬಿಟ್ಟು ಮನವಿ ಯಷ್ಟೇ ಸಲ್ಲಿಸಿದರು.
ತಮ್ಮ (ಪ್ರಧಾನಿಗಳು) ಸರ್ಕಾರ 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಕೃಷಿ ಉತ್ಪನ್ನಗಳ ವೆಚ್ಚ ಹೆಚ್ಚಿ ಸಿದೆ. ರಸಗೊಬ್ಬರ ಬೆಲೆ ಏರಿಕೆಯಿಂದ ಕೃಷಿಕರು ವ್ಯವಸಾಯವನ್ನೇ ತ್ಯಜಿಸುವಂ ತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರವೂ ಬೇರೆ ದೇಶಗಳು ಕೃಷಿ ಮತ್ತು ಕೃಷಿ ಉಪ ಕಸುಬುಗಳ ಸಂಬಂಧ ಸಬ್ಸಿಡಿ ಹೆಚ್ಚು ನೀಡುತ್ತಲೇ ಬರುತ್ತಿವೆ. ಜೊತೆಗೆ ರೈತರಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸುತ್ತಿವೆ. ಆದರೆ ಬಹುಸಂಖ್ಯಾತ ರೈತರು ಇರುವ ನಮ್ಮ ದೇಶದಲ್ಲಿ ಕೃಷಿ ವಲಯ ಸರ್ಕಾರದಿಂದ ಕಡೆಗಣಿಸಲ್ಪಟ್ಟಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸ ಲಾಗಿದೆ. ರಸಗೊಬ್ಬರದ ಸಬ್ಸಿಡಿ ಕಡಿಮೆ ಮಾಡಿದ್ದರಿಂದಲೇ ಗೊಬ್ಬರ ಉತ್ಪಾದಕ ಕಂಪನಿಗಳು ಹೆಚ್ಚು ಬೆಲೆ ನಿಗದಿ ಮಾಡು ತ್ತಿವೆ. ಇದು ಕೃಷಿಕರಿಗೆ ಹೊರಲಾರದಷ್ಟು ಹೊರೆಯಾಗಿದೆ. ಹೀಗಾಗಿ ಏರಿಕೆ ಮಾಡಿ ರುವ ಗೊಬ್ಬರದ ಬೆಲೆ ಇಳಿಸುವ ಜೊತೆಗೆ ರೈತರಿಗೆ ಉತ್ತೇಜನ ನೀಡುವಂತಹ ಯೋಜನೆ ಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ನೂತನ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಜೊತೆಗೆ ಯಾವುದೇ ಕಾರಣಕ್ಕೂ ವಿದ್ಯುತ್ ಪೂರೈಕೆ ವಲಯದ ಖಾಸಗೀಕರಣಕ್ಕೆ ಕೈ ಹಾಕಬಾರದು. ಜೊತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಿಂದ ರೈತ ಸಮುದಾಯ ಮಾತ್ರವಲ್ಲದೆ, ಸಾಮಾನ್ಯ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇವು ಗಳ ಬೆಲೆ ಇಳಿಸಲೂ ಕ್ರಮ ಕೈಗೊಳ್ಳಬೇ ಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘದ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಶೆಟ್ಟಹಳ್ಳಿ ಚಂದ್ರೇಗೌಡ, ಕಾರ್ಯ ದರ್ಶಿ ನಾಗನಹಳ್ಳಿ ವಿಜೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ತಾಲೂಕು ಸಂಘಟನಾ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಮನವಿ ಸಲ್ಲಿಸಿದರು.

Translate »