ಹಾಸನ,ಸೆ.9-ಪಡಿತರ ಅಕ್ರಮ ತಡೆಯುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಜಾಗೃತ ದಳ ರಚನೆ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಡಿತರ ಅಕ್ರಮ ದಾಸ್ತಾನು ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತದಳ ರಚನೆಗೆ ಚಿಂತಿಸಲಾಗಿದೆ. ಈ ಮೂಲಕ ಅಕ್ರಮ ತಡೆಗೆ ಕಠಿಣ ಕ್ರಮವಹಿಸಲಾಗಿದೆ ಎಂದರು. ಅರಸೀಕೆರೆ ತಾಲೂಕಿನಲ್ಲಿ 800 ಚೀಲ ರಾಗಿ ಅಕ್ರಮ ಸಾಗಾಣೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಲ್ಲದೆ ಜಿಲ್ಲಾ ಆಹಾರ ಉಪ ನಿರ್ದೇಶಕರೊಂದಿಗೆ ಮಾತನಾಡಿದ್ದು ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.