ಆ.9ರಂದು ಬೆಂಗಳೂರಲ್ಲಿ ರಾಜ್ಯ ಮಟ್ಟದ ವಿಶ್ವ ಆದಿವಾಸಿ ದಿನಾಚರಣೆ
ಮೈಸೂರು

ಆ.9ರಂದು ಬೆಂಗಳೂರಲ್ಲಿ ರಾಜ್ಯ ಮಟ್ಟದ ವಿಶ್ವ ಆದಿವಾಸಿ ದಿನಾಚರಣೆ

August 4, 2018

ಮೈಸೂರು: ಕರ್ನಾಟಕ ಆದಿವಾಸಿ ರಕ್ಷಣ ಪರಿಷತ್ತು, ಕರ್ನಾಟಕದ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಆಶ್ರಯದಲ್ಲಿ ಆ.9ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ವಸಂತನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ಧಾಣದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ 24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು.

ಅಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಸಚಿವರಾದ ಪ್ರಿಯಾಂಕ ಖರ್ಗೆ, ಬಂಡೆಪ್ಪ ಕಾಶಂಪುರ್, ಸಿ.ಪುಟ್ಟರಂಗಶೆಟ್ಟಿ, ಈಶ್ವರ ಖಂಡ್ರೆ, ಕೇಂದ್ರ ಮಾಜಿ ಸಚಿವ ಪಗನ್‍ಸಿಂಗ್ ಕುಲಾಸ್ತ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಕೋಟಾ ಶ್ರೀನಿವಾಸ ಪೂಜಾರಿ, ಬಿ.ನಾರಾಯಣರಾವ್, ಹೆಚ್.ವಿಶ್ವನಾಥ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲೆಮಾರಿ ಹಾಗೂ ಆದಿವಾಸಿಗಳ ಕಲಾಮೇಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಚಾಲನೆ ನೀಡುವರು. ಅತೀ ಸೂಕ್ಷ್ಮ ಜಾತಿಗಳು, ಅತೀ ಸೂಕ್ಷ್ಮ ಅಲೆಮಾರಿಗಳು ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. 51 ಅಲೆಮಾರಿ, 33 ಬುಡಕಟ್ಟು ಸಮುದಾಯಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಮಕ್ಕಳ ಶಿಕ್ಷಣ, ಶಾಶ್ವತ ಸೂರು, ಮೂಲಭೂತ ಸೌಕರ್ಯಗಳಿಲ್ಲದೆ ಶೋಚನೀಯ ಬದುಕು ನಡೆಸುತ್ತಿರುವ ಅಲೆಮಾರಿಗಳ ಅಭಿವೃದ್ಧಿಗಾಗಿ ನವಗ್ರಾಮ ನಿರ್ಮಿಸಬೇಕು. ಆದಿವಾಸಿ ಅರಣ್ಯ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಪ್ರತ್ಯೇಕ ಆದಿವಾಸಿ ಅಭಿವೃದ್ದಿ ನಿಗಮ ಮಂಡಳಿ ರಚಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಕಾವೇರ, ಎಂ.ಟಿ.ಕುಮಾರ್, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಸಾವಿತ್ರಿ ಇದ್ದರು.

Translate »