ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ
ಮೈಸೂರು

ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ

August 3, 2018

ಮೈಸೂರು: ಎಲ್ಲೆಂದರಲ್ಲಿ ಕಸ ಸುರಿದು ಮೈಸೂರಿನ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಕಿಡಿಗೇಡಿಗಳ ವಿರುದ್ದ ಮೈಸೂರು ನಗರ ಪಾಲಿಕೆ ಸಮರ ಸಾರಿದ್ದು, ಕಳೆದ 15 ದಿನದಲ್ಲಿ 7 ವಾಹನ ವಶಪಡಿಸಿಕೊಂಡು, 15 ಸಾವಿರ ರೂ ದಂಡ ವಿಧಿಸಿದೆ.

ರಿಂಗ್ ರಸ್ತೆ, ಥಂಡಿ ಸಡಕ್ ರಸ್ತೆ ಸೇರಿದಂತೆ ನಗರ ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ಕಟ್ಟಡದ ತ್ಯಾಜ್ಯ, ಗ್ಯಾರೇಜ್‍ಗಳ ತ್ಯಾಜ್ಯ ಸೇರಿದಂತೆ ವಿವಿಧ ಬಗೆಯ ಕಸವನ್ನು ತಂದು ಸುರಿದು ಪರಾರಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಇದರಿಂದ ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜುಲೈ 16ರಂದು `ಮೈಸೂರು ಮಿತ್ರ’ನಲ್ಲಿ `ತ್ಯಾಜ್ಯ ನಗರಿಯಾಗಿ ಮಾರ್ಪಡುತ್ತಿದೆ ಸ್ವಚ್ಛ ನಗರಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಎಲ್ಲಾ ವಲಯ ಕಚೇರಿಗಳ ಹೆಲ್ತ್ ಇನ್ಸ್‌ಪೆಕ್ಟರ್‌ಗಳು ಹಾಗೂ ಅಭಯ ತಂಡಕ್ಕೆ ಸೂಚನೆ ನೀಡಿದ್ದು, ಕಸ ಸುರಿಯುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.

ಈ ಬಗ್ಗೆ ಎಚ್ಚರ ವಹಿಸಿದ್ದ ಪಾಲಿಕೆ ಅಧಿಕಾರಿ ವರ್ಗಕ್ಕೆ ಹೆಬ್ಬಾಳು ರಿಂಗ್ ರಸ್ತೆಯ ಬದಿಯಲ್ಲಿ ಕಸ ಸುರಿಯುತ್ತಿದ್ದವರು ಸಿಕ್ಕಿ ಬಿದ್ದಿದ್ದಾರೆ. ಹೀಗೆ ಕಳೆದ 15 ದಿನದಿಂದ ಎರಡು ಗೂಡ್ಸ್ ಆಟೋ, ಎರಡು ಟ್ರಾಕ್ಟರ್, ಒಂದು ಲಾರಿ, ಎರಡು ಟಾಟಾ ಏಸ್ ವಾಹನಗಳನ್ನು ವಶಪಡಿಸಿಕೊಂಡು, ಒಟ್ಟು 15 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪಾಲಿಕೆ ಅಧಿಕಾರಿಗಳು ದಂಡ ಕಟ್ಟಿಸಿಕೊಂಡು ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದು, ದಂಡದ ಮೊತ್ತವನ್ನು ಹೆಚ್ಚಿಸುವುದರೊಂದಿಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹೆಚ್ಚಾಗಲಿದೆ ಗಸ್ತು: ಮೈಸೂರು ನಗರದ ರಿಂಗ್‍ರಸ್ತೆಯ ಬಹುಭಾಗ ವಿವಿಧ ಗ್ರಾಪಂ ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ ಕಟ್ಟಡ ತ್ಯಾಜ್ಯ, ಮಾಂಸದ ಅಂಗಡಿ ತ್ಯಾಜ್ಯ, ಗ್ಯಾರೇಜ್‍ಗಳ ತ್ಯಾಜ್ಯ ಸೇರಿದಂತೆ ಇನ್ನಿತರ ಅಪಾಯಕಾರಿ ತ್ಯಾಜ್ಯಗಳನ್ನು ತಂದು ರಿಂಗ್ ರಸ್ತೆ ಬದಿ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಗ್ರಾಮ ಪಂಚಾಯತ್‍ಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಕಸ ಸುರಿಯುವವರು ಯಾವ ಭಯವಿಲ್ಲದೆ ಕಸ ಸುರಿಯುತ್ತಿದ್ದರು. ಇದು ಮೈಸೂರಿಗೆ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಹೆಚ್ಚಿನ ಗಸ್ತು ನಡೆಸಲು ನಿರ್ಧರಿಸಿದೆ. ಇದಕ್ಕಾಗಿ ಅಭಯ ತಂಡದ ಸದಸ್ಯರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

ಮಾಹಿತಿಗಾಗಿ ನೆಟ್‍ವರ್ಕ್ ತಯಾರಿ: ಸಾಮಾನ್ಯವಾಗಿ ಮುಂಜಾನೆ, ಮಧ್ಯರಾತ್ರಿ ಕಸ ಸುರಿಯುತ್ತಿದ್ದು, ಪಾಲಿಕೆ ಅಧಿಕಾರಿಗಳು ಹಲವೆಡೆ ಬಾತ್ಮೀದಾರರನ್ನು ನಿಯೋಜಿಸಿದ್ದಾರೆ. ಕಸ ತಂದು ಸುರಿಯುವವರ ಬಗ್ಗೆ ಮಾಹಿತಿ ನೀಡುವಂತೆ, ವಾಹನದ ಸಂಖ್ಯೆ ತಿಳಿಸುವಂತೆ ಹಾಗೂ ಸಾಧ್ಯವಾದರೆ ವಾಹನದ ಫೋಟೊ ತೆಗೆಯುವಂತೆ ಸಲಹೆ ನೀಡಿದ್ದಾರೆ. ಇದೀಗ ದಾಖಲಿಸಿರುವ 15 ಪ್ರಕರಣದಲ್ಲಿ ಬಹುತೇಕ ಪ್ರಕರಣಗಳು ಮುಂಜಾನೆಯೇ ನಡೆದಿರುವುದು ವಿಶೇಷ.

ಕ್ರಮ ಕೈಗೊಳ್ಳಲಾಗಿದೆ…

ಕಸ ಸುರಿಯುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಮೈಸೂರು ನಗರದ ಖಾಲಿ ಜಾಗ ಮಾತ್ರವಲ್ಲದೆ, ರಿಂಗ್ ರಸ್ತೆಯಲ್ಲಿಯೂ ಕಸ ಸುರಿಯುತ್ತಿರುವವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ಕಸ ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ. ಇದನ್ನು ಮನಗಂಡು ಗಸ್ತು ಹೆಚ್ಚಿಸಲಾಗಿದೆ. ಎಲ್ಲಾ ವಲಯಗಳ ಹೆಲ್ತ್ ಇನ್ಸ್‌ಪೆಕ್ಟರ್‌ಗಳು ಕಾರ್ಯೋನ್ಮುಖರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. – ಡಾ.ಡಿ.ಜಿ.ನಾಗರಾಜು, ಮೈಸೂರು ನಗರ ಪಾಲಿಕೆಯ ಆರೋಗ್ಯಾಧಿಕಾರಿ.

Translate »