ಆ.29ಕ್ಕೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
ಮೈಸೂರು

ಆ.29ಕ್ಕೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

August 3, 2018

ಬೆಂಗಳೂರು: ರಾಜ್ಯದ 208 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2 ಹಂತಗಳಲ್ಲಿ ಜರುಗಲಿದೆ.

ಮೊದಲ ಹಂತದಲ್ಲಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 29ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸೆ.18ರವರೆಗೂ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಜಾರಿಯಲ್ಲಿರುತ್ತದೆ ಎಂದರು.

ಆಗಸ್ಟ್ 10ರಂದು ಈ ಸ್ಥಳೀಯ ಸಂಸ್ಥೆ ಗಳಿಗೆ ಅಧಿಸೂಚನೆ ಹೊರ ಬೀಳಲಿದ್ದು, 17ನೇ ಆಗಸ್ಟ್ 2018 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ನಾಮ ಪತ್ರ ಪರಿಶೀಲನೆ ಆಗಸ್ಟ್ 18ರಂದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆಗಸ್ಟ್ 20 ಕಡೇ ದಿನವಾಗಿರುತ್ತದೆ.

ಮತದಾನದ ಅವಶ್ಯವಿದ್ದರೆ, ಆಗಸ್ಟ್ 29ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಒಂದನೇ ಸೆಪ್ಟೆಂಬರ್, 2018ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಅವಶ್ಯ ವಿದ್ದರೆ ಆಗಸ್ಟ್ 31ರಂದು ಮರು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ 100 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾರ್ಚ್ 2019ರಲ್ಲಿ ನಡೆಯಲಿದೆ ಎಂದರು.

ಈಗ ಮೊದಲ ಹಂತದಲ್ಲಿ 53 ಪುರ ಸಭೆ, 29 ನಗರ ಸಭೆ, ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಜರುಗಲಿದೆ. ಒಟ್ಟಾರೆ 22 ಜಿಲ್ಲೆಗಳಲ್ಲಿ ಪ್ರಥಮ ಹಂತವಾಗಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ರಾಜ್ಯ ಸರ್ಕಾರ ಉನ್ನತೀಕರಿಸಿರುವ 26 ನಗರ ಸ್ಥಳೀಯ ಸಂಸ್ಥೆ ಹಾಗೂ ನಾಲ್ಕು ಗ್ರಾಮ ಪಂಚಾಯಿತಿ ಒಳಗೊಂಡಿರುತ್ತವೆ. 2011 ಜನಗಣತಿಯಂತೆ ಕ್ಷೇತ್ರ ಮರು ವಿಂಗಡಣೆ ಮಾಡಿ, ವಾರ್ಡ್‍ವಾರು ಮೀಸಲಾತಿ ನಿಗದಿ ಪಡಿಸಿದೆ. ಅದರಂತೆ ಸೆಪ್ಟೆಂಬರ್ 2018 ರೊಳಗೆ ಅವಧಿ ಮುಕ್ತಾಯವಾಗುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ.

ಆಯೋಗದ ಸೂಚನೆ ಮೇರೆಗೆ ಎಲ್ಲಾ ಜಿಲ್ಲಾಧಿಕಾರಿಗಳು ಕಳೆದ ಜೂನ್ 27ಕ್ಕೆ ವಾರ್ಡ್‍ವಾರು ಮತದಾರರ ಪಟ್ಟಿ ಸಿದ್ಧ ಪಡಿಸಿ, ಅಧಿಕೃತವಾಗಿ ಪ್ರಕಟಿಸಿದ್ದಾರೆ. 105 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 3603691 ಲಕ್ಷ ಮತದಾರರಿದ್ದು, ಅದರಲ್ಲಿ 1796001 ಪುರುಷರು, 1807336 ಮಹಿಳೆ ಯರು ಹಾಗೂ 354 ಇತರರಿದ್ದಾರೆ. ಒಟ್ಟಾರೆ ಮತದಾನಕ್ಕೆ ಅನುಕೂಲ ಮಾಡಿ ಕೊಡಲು 3897 ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳ ವೀಕ್ಷಣೆಗಾಗಿ 7 ಐಎಎಸ್ ಅಧಿಕಾರಿ ಗಳನ್ನು ವಿಶೇಷ ವೀಕ್ಷಕರನ್ನಾಗಿ 25 ಕೆಎಎಸ್ ಶ್ರೇಣಿ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರಾಗಿ ಹಾಗೂ 30 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಇಲಾಖಾ ವತಿಯಿಂದ ಜಂಟಿ ನಿಯಂತ್ರಕರು ಮತ್ತು ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕನ್ನಾಗಿಯೂ ನೇಮಕ ಮಾಡಲಾಗಿದೆ ಎಂದರು. ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆ ದಿನದಂದು ಬಂದೋಬಸ್ತ್‍ಗಾಗಿ ಪೊಲೀಸ್ ಸಹಕಾರವನ್ನು ಪಡೆಯಲಾಗುವುದು ಎಂದರು. ಮತದಾನಕ್ಕೆ ಒಟ್ಟಾರೆ 4640 ಬ್ಯಾಲೆಟ್ ಯೂನಿಟ್‍ಗಳನ್ನು ಹಾಗೂ 4940 ಕಂಟ್ರೊಲ್ ಯೂನಿಟ್‍ಗಳನ್ನು ಸಿದ್ದಗೊಳಿಸಲಾಗಿದೆ ಎಂದರು.

ನಗರ ಸಭೆಗೆ ಪ್ರತಿ ಅಭ್ಯರ್ಥಿ 2 ಲಕ್ಷ, ಪುರಸಭೆಗೆ 1.50 ಲಕ್ಷ, ಹಾಗೂ ಪಟ್ಟಣ ಪಂಚಾಯಿತಿಗೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಲು ಅವಕಾಶ ಮಾಡಿ ಕೊಡಲಾಗಿದೆ. ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಬಳಕೆ ಮಾಡಿದಂತೆ ಭಾವಚಿತ್ರ ಹೊಂದಿರುವ ಮತದಾರರ ಪಟ್ಟಿ ಇರುತ್ತದೆ.

Translate »