ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ
News

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ

July 1, 2021

ಬೆಂಗಳೂರು, ಜೂ.30-ಮುಂದಿನ ಸಿಎಂ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ನಡುವಿನ ಮುಸುಕಿನ ಗುದ್ದಾಟ ಸ್ವಲ್ಪ ಮಟ್ಟಿಗೆ ಶಮನವಾಗುತ್ತಿರುವ ಬೆನ್ನಲ್ಲೇ ರಾಜ್ಯ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಸ್ಥಾನದ ವಿಚಾರವಾಗಿ ಸಿದ್ದ ರಾಮಯ್ಯ ಹಾಗೂ ಡಿ.ಕೆ.ಶಿವ ಕುಮಾರ್ ನಡುವೆ ಜಟಾಪಟಿ ನಡೆದಿದೆ.

ವಿವರ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯನ್ನು ಶಾಸಕ ಹ್ಯಾರೀಸ್ ಪುತ್ರ ಮಹಮದ್ ನಲಪಾಡ್ ಅತೀ ಹೆಚ್ಚು ಮತ ಪಡೆದು ವಿಜೇತ ರಾಗಿದ್ದರು. ಆದರೆ ಯುಬಿ ಸಿಟಿಯಲ್ಲಿ ನಡೆ ದಿದ್ದ ಹಲ್ಲೆ ಪ್ರಕರಣದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿರುವುದರಿಂದ 2ನೇ ಅತೀ ಹೆಚ್ಚು ಮತ ಪಡೆದಿರುವ ಶಾಸಕ ಡಾ.ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಅವರಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕೆಂದು ಆಗ ಸಿದ್ದ ರಾಮಯ್ಯ ಲಾಬಿ ನಡೆಸಿ ಯಶಸ್ವಿಯಾಗಿದ್ದರು. ರಕ್ಷಾ ರಾಮಯ್ಯ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾದರೂ, ಎಐಸಿಸಿಯಿಂದ ಅಧಿಕೃತವಾಗಿ ಅವರ ಹೆಸರು ಪ್ರಕಟ ವಾಗಿರಲಿಲ್ಲ. ಹೀಗಾಗಿ ಮಹಮದ್ ನಲಪಾಡ್ ಅವರಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಈ ಮಧ್ಯೆ ಮಂಗಳವಾರ ಡಿ.ಕೆ. ಶಿವಕುಮಾರ್ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರು ನಲಪಾಡ್ ಮತ್ತು ರಕ್ಷಾರಾಮಯ್ಯ ನಡುವೆ ಸಂಧಾನ ನಡೆಸಿ ಡಿಸೆಂಬರ್ 31ರವರೆಗೆ ರಕ್ಷಾರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದು ವರೆಯುವುದು, ನಂತರ ಒಂದೂವರೆ ವರ್ಷ ಮಹಮದ್ ನಲಪಾಡ್ ಅಧ್ಯಕ್ಷರಾಗುವುದು ಎಂದು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹರಿದಾಡಿದವು.
ಇದರಿಂದ ಕೆರಳಿದ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಅವರಿಗೆ ಖಡಕ್ ಸಂದೇಶ ರವಾನಿಸಿದ್ದಲ್ಲದೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಅವರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದು ಕೊಂಡರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರು ಇಂದು ಸಿದ್ದರಾಮಯ್ಯ ಅವರ ಮನ ವೊಲಿಸಲು ಶತಾಯ-ಗತಾಯ ಪ್ರಯ ತ್ನಿಸಿ ವಿಫಲರಾದರು. ಇದಾಗುತ್ತಿದ್ದಂ ತೆಯೇ ಇಂಡಿಯನ್ ಯೂತ್ ಕಾಂಗ್ರೆಸ್ ವೆಬ್‍ಸೈಟ್‍ನಲ್ಲಿ ರಕ್ಷಾರಾಮಯ್ಯ ಅವರ ಹೆಸರು ಇಂದು ಮಧ್ಯಾಹ್ನ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಸಂಬಂಧ ಕೆಪಿಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿ `ರಕ್ಷಾರಾಮಯ್ಯ ಅವರು ಕೆಪಿವೈಸಿಸಿ ಅಧ್ಯಕ್ಷರಾಗಿ ಉಳಿಯಲಿದ್ದಾರೆ. ಈ ಹುದ್ದೆ ಬಗ್ಗೆ ಬಹಳಷ್ಟು ಅನಧಿಕೃತ ಹಾಗೂ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೆಪಿವೈಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕಿದ್ದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ವೆಬ್‍ಸೈಟ್‍ನಲ್ಲಿ ವೀಕ್ಷಿಸ ಬಹುದಾಗಿದೆ’ ಎಂದು ತಿಳಿಸಿದೆ.

ಇದಕ್ಕೂ ಮುನ್ನ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ವಿವಾದ ತಾರಕಕ್ಕೇರಿತ್ತು. ಕೊನೆಗೆ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರ ಮನವೊಲಿಕೆ ವಿಫಲವಾಗಿ ಹೈಕಮಾಂಡ್‍ನಿಂದಲೇ ರಕ್ಷಾ ರಾಮಯ್ಯ ಹೆಸರು ಅಧಿಕೃತವಾಗಿ ಪ್ರಕಟವಾದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಪಕ್ಷದ ನಾಯಕರಿಗೆ ನಾನು ನನ್ನದೇ ಆದ ಸಲಹೆ ಕೊಟ್ಟಿದ್ದೇನೆ. ಆದರೆ ನಾನು ಕೊಟ್ಟಿರುವ ಸಲಹೆಯನ್ನು ಬಹಿರಂಗಪಡಿಸಲಾಗದು.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಪಕ್ಷದ ಚುನಾವಣಾಧಿಕಾರಿಗಳು ಸಂಧಾನ ಮಾಡುತ್ತೇನೆ ಎಂದರು. ಇಬ್ಬರನ್ನೂ ಕೂರಿಸಿ ಸಂಧಾನ ಮಾಡಿ ಎಂದು ಹೇಳಿದ್ದೇನೆ. ಏನು ಒಪ್ಪಂದ ಆಗಿದೆ ಎಂದು ನನಗೆ ಗೊತ್ತಿಲ್ಲ ಎಂದರು. ಅದೇ ವೇಳೆ ಡಿ.ಕೆ.ಶಿವಕುಮಾರ್ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಒಟ್ಟಾರೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ ವಿಚಾರದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.

Translate »