ಲಾಕ್‍ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ
ಕೊಡಗು

ಲಾಕ್‍ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ

March 24, 2020

ಮಡಿಕೇರಿ,ಮಾ.23-ಸರಕಾರದ ಆದೇಶದಂತೆ ಕೊಡಗು ಜಿಲ್ಲೆ ಕೂಡ ಮಾ.31ರ ವರೆಗೆ “ಲಾಕ್‍ಡೌನ್” ಆಗಬೇಕಿದ್ದು, ಈ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ವಿರುದ್ದ ಕೊಡಗು ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್ ಇಲಾಖೆ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಎಚ್ಚರಿಸಿದ್ದಾರೆ.

ಮಡಿಕೇರಿಯಲ್ಲಿ “ಮೈಸೂರುಮಿತ್ರ”ನೊಂದಿಗೆ ಮಾತ ನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ, ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಅಂತರಾಜ್ಯ ಹಾಗೂ ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಒಟ್ಟು 13 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ. ಈ ಚೆಕ್ ಪೋಸ್ಟ್‍ಗಳು ಮಾ.23ರ ಬೆಳಗಿನಿಂದಲೇ ಕಾರ್ಯಾಚರಣೆ ಮಾಡುತ್ತಿವೆ. ಮಾಕುಟ್ಟ, ಕುಟ್ಟ, ಕರಿಕೆ ಅಂತರ್ ರಾಜ್ಯ ಚೆಕ್ ಪೋಸ್ಟ್‍ಗಳಾಗಿದ್ದು, ಶಿರಂಗಾಲ, ಮಾಲ್ದಾರೆ, ನಿಲುವಾಗಿಲು, ಕೊಪ್ಪ, ಸಂಪಾಜೆ ಸೇರಿದಂತೆ ಇತರ 10 ಚೆಕ್ ಪೋಸ್ಟ್ ಗಳನ್ನು ಅಂತರ್ ಜಿಲ್ಲೆಯನ್ನು ಸಂಪರ್ಕಿಸುತ್ತವೆ. ಹೀಗಾಗಿ ಕೇರಳ ಸೇರಿದಂತೆ ಹಾಸನ, ಮೈಸೂರು ಮತ್ತು ದಕ್ಷಿಣ ಕನ್ನಡ ಸಂಪರ್ಕ ವನ್ನು ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವ ಎಲ್ಲಾ ವಾಹನಗಳಿಗೆ ತಡೆ ಒಡ್ಡಲಾಗುತ್ತಿದ್ದು, ತುರ್ತು ಕೆಲಸಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಯ ವಾಹನ ಗಳನ್ನು ತಪಾಸಣೆಯೊಂದಿಗೆ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ಮಂದಿ ಪಡಿತರಗಳನ್ನು ಪಡೆದುಕೊಳ್ಳಲು ರಸ್ತೆಗೆ ಬಂದಿದ್ದರೆ ಮತ್ತೆ ಕೆಲವರು ಅನಗತ್ಯವಾಗಿ ಸಂಚಾರ ನಡೆಸು ತ್ತಿದ್ದಾರೆ. ಹೀಗಾಗಿ ಇವರನ್ನು ನಿಯಂತ್ರಿಸಲು ಮಡಿಕೇರಿ, ಗೋಣಿಕೊಪ್ಪ, ಮತ್ತು ಪೆರುಂಬಾಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ವಾಹನಗಳ ಮೂಲಕ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗು ತ್ತಿದೆ. ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿ ವೃತ್ತ ನಿರೀಕ್ಷಕರು, ಠಾಣಾಧಿ ಕಾರಿಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ನಗರ, ಪಟ್ಟಣ ಪ್ರದೇಶದಲ್ಲಿ ಜನರು ಮನೆಗಳಿಂದ ಹೊರ ಬಂದು ಯಾವುದೇ ಕಾರಣಕ್ಕೂ ಗುಂಪು ಸೇರುವಂತಿಲ್ಲ ಎಂದು ಈ ಮೊದಲೇ ಜಿಲ್ಲಾಡಳಿತದಿಂದ ಕಟ್ಟಾಜ್ಞೆ ಹೊರಡಿ ಸಲಾಗಿದೆ. ಹೀಗಿದ್ದರೂ ಕೂಡ ಸಾರ್ವಜನಿಕರು ಅನಾವಶ್ಯಕ ವಾಗಿ ತಿರುಗಾಡುತ್ತಿರುವ ದೂರುಗಳು ಕೇಳಿ ಬಂದಿದೆ. ಆದ್ದರಿಂದ ಸಾರ್ವಜನಿಕರನ್ನು ಚದುರುಸಲು ಅನಿವಾರ್ಯ ವಾಗಿ ಬಲ ಪ್ರಯೋಗಿಸಲು ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊದಲ ಹಂತದ ಸೂಚನೆ ನೀಡಲಾಗಿದೆ. ಇದಕ್ಕೂ ಬಗ್ಗದಿದ್ದರೆ ಸಾರ್ವಜನಿಕರ ಆರೋಗ್ಯದ ದೃಷ್ಟಿ ಯಿಂದ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮಕ್ಕೂ ಮುಂದಾ ಗಲಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಇದನ್ನು ಅರಿತುಕೊಳ್ಳಬೇಕು ಎಂದು ಡಾ.ಸುಮನ ಮನವಿ ಮಾಡಿದರು.

ಕಠಿಣ ಕ್ರಮದ ಎಚ್ಚರಿಕೆ: ಕೆಲವು ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಮನೆ ಸಂಪರ್ಕ ತಡೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ ಕೆಲವರು ಈ ಆದೇಶವನ್ನು ಉಲ್ಲಂ ಘಿಸುತ್ತಿದ್ದು, ಇಂತಹ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಆದರೆ ಐಪಿಸಿ ಸೆಕ್ಷನ್ 270 ಮತ್ತು 271 ಪ್ರಕಾರ ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಆದೇಶವನ್ನು ಉಲ್ಲಂಘಿಸುವ ಇಂತಹ ವ್ಯಕ್ತಿಗಳ ವಿರುದ್ದ ಎಫ್.ಐ.ಆರ್ ದಾಖಲು ಮಾಡಲು ಅವಕಾಶವಿದ್ದು, ಇಂತಹ ವ್ಯಕ್ತಿಗೆ 2 ವರ್ಷ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಭಾನುವಾರ ಈ ಆದೇಶ ಉಲ್ಲಂಘಿಸಿದ ಒಬ್ಬ ವ್ಯಕ್ತಿ ಹಾಗೂ ಮಾ.23ರಂದು 5 ಮಂದಿಯನ್ನು ಗುರುತಿಸಿ, ಜಿಲ್ಲಾಡಳಿತದ ಮನೆ ಸಂಪರ್ಕ ತಡೆ ವ್ಯವಸ್ಥೆಯಲ್ಲಿಡಲಾಗಿದೆ. ಮನೆಯಲ್ಲಿಯೇ ಇರುವ ಬದಲು ಮನೆಯಿಂದ ಹೊರ ಬಂದು ಅನಾವಶ್ಯಕವಾಗಿ ತೊಂದರೆಗೆ ಸಿಲುಕ ಬೇಡಿ ಎಂದು ಎಸ್.ಪಿ.ಡಾ.ಸುಮನ ಸಲಹೆ ನೀಡಿದರು.

Translate »